ಸಾರಾಂಶ
- ಸಿರಿಗೆರೆಯಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ ಶಿವಲಿಂಗ ಶಿವಾಚಾರ್ಯ ಶ್ರೀ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ನಾಗರೀಕರು ಪ್ರಸ್ತುತ ಹಣ ಮತ್ತು ವಿಲಾಸ ಜೀವನಕ್ಕೆ ಶರಣಾಗಿದ್ದಾರೆ ಎಂದು ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.ಮಲೇಬೆನ್ನೂರು ಸಮಿಪದ ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬನಶಂಕರಿ ದೇವಾಲಯ ಮಂಡಲೋತ್ಸವ ಹಾಗೂ ಗಾಂಧಿ ಜಯಂತಿ, ವ್ಯಸನಮುಕ್ತ ಸಾಧಕರ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ರೈತರು ಮತ್ತು ಯೋಧರಂತೆ ದೇಶಕ್ಕೆ ಕೊಡುಗೆ ನೀಡುವ ಮನಸ್ಸು ಯಾರಲ್ಲೂ ಇಲ್ಲದಾಗಿದೆ. ಮಕ್ಕಳು, ಯುವಕರು ಸನ್ಮಾರ್ಗದಲ್ಲಿ ನಡೆಯಲು ಹಿರಿಯರು ದಾರಿ ತೋರಬೇಕಿದೆ. ನೈತಿಕ ಮೌಲ್ಯಗಳು ಇಲ್ಲದಾಗಿದೆ. ಬದುಕಿನ ಆಲೋಚನೆ ಬದಲಾಗಬೇಕಿದೆ ಎಂದು ಸಲಹೆ ನೀಡಿದರು.
ದೇಶದಲ್ಲಿ ವ್ಯಸನಿಗಳು ರಚನಾತ್ಮಕ ಕಾರ್ಯಗಳಿಗೆ ತೊಡಕಾಗಿದ್ದಾರೆ. ಸ್ವಾಭಿಮಾನದ ಬದುಕು ರೂಪಿಸಲು ಧರ್ಮಸ್ಥಳ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಅವರ ಆಲೋಚನೆ ದಿಟ್ಟತನದಿಂದ ಕೂಡಿದೆ. ಮಹಿಳೆಯರು ಸಮಾಜಮುಖಿಯಾಗಿ ಆಲೋಚಿಸಿ, ಅವರ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ದಾರಿದೀಪವಾಗಿದ್ದಾರೆ ಎಂದರು.ಕಣ್ವಕುಪ್ಪಿ ತಪೋಕ್ಷೇತ್ರದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡಿ, ಸಂಸಾರ ರಥಕ್ಕೆ ಸುಖ ಮತ್ತು ದುಃಖ ಎರಡೂ ಚಕ್ರಗಳಾಗಿವೆ. ಸಂಪ್ರದಾಯ, ಅಧ್ಯಾತ್ಮ ಮತ್ತು ಸಂಸ್ಕೃತಿ ಭಾರತದ ಉಡುಗೊರೆಯಾಗಿದೆ. ಅದರ ಕೀರ್ತಿ ಪುರಾತನ ಋಷಿಗಳಿಗೆ, ದಾರ್ಶನಿಕರಿಗೆ ಸಲ್ಲುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಎಂ,ಬಿ, ನಾಗರಾಜ್ ಉಪನ್ಯಾಸ ನೀಡಿ, ಮಾನವ ಹೆಡ್‌ಲೆಸ್, ಯೂಸ್‌ಲೆಸ್ ಆಗದೇ ಶಿವಾನುಭವ ಮತ್ತು ಲೋಕಾನುಭವದಲ್ಲಿ ಭಾಗವಹಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಹಾರ್ದ ಸಂಬಂಧ ಬೆಸೆಯುವಂತೆ ನ್ಯಾಯ, ನೀತಿ, ಸತ್ಯ ರೂಢಿಸಿಕೊಳ್ಳಬೇಕು ಎಂದರು.ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ನವಜೀವನ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ದೇವಾಲಯ ಸಮಿತಿಯ ಕೆ.ಜಿ.ಕೊಟ್ರಪ್ಪ ಗೌಡ, ಮಲ್ಲಿಕಾರ್ಜುನಪ್ಪ, ಸದಾಶಿವಪ್ಪ, ನಾಗರಾಜಪ್ಪ, ಎಂ.ಜಿ. ಪರಮೆಶ್ವರ ಗೌಡ, ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಎನ್‌ಜಿ. ನಾಗನಗೌಡ, ಸದಸ್ಯರಾದ ಶುಭಾ, ಗೌಡರ ಮಂಜುನಾಥ್, ಹನುಮಂತರಾಯ, ಪ್ರಕಾಶ್, ರಾಜಶೇಖರ್, ಪದ್ಮರಾಜ್ ಜೈನ್, ನಿರ್ದೇಶಕ ಲಕ್ಷ್ಮಣ್, ಸಂಪನ್ಮೂಲ ವ್ಯಕ್ತಿಗಳಾದ ಸದಾನಂದ, ಮಲ್ಲಿಕಾರ್ಜುನ್, ಯೋಜನಾಧಿಕಾರಿಗಳಾದ ನಂದಿನಿ ಸೇಠ್, ವಸಂತ ದೇವಾಡಿಗ, ಬಿ.ಕೆ. ಲೀಲಾಜಿ, ಶಾಂತಕ್ಕ, ಪಂಚಣ್ಣ, ಪ್ರವಚನಕಾರ ಸಿದ್ದೇಶ್ ಹಾಗೂ ಯೋಜನೆಯ ಕಾರ್ಯಕರ್ತರು, ದೇವಸ್ಥಾನದ ಸದಸ್ಯರು, ಭಕ್ತರು ಇದ್ದರು.
- - - -೬ಎಂಬಿಆರ್೩: ಮಲೇಬೆನ್ನೂರು ಸಮೀಪದ ಸಿರಿಗೆರೆಯಲ್ಲಿ ಸಾಧಕರ ಸಮಾವೇಶ- ಧರ್ಮಸಭೆ ನಡೆಯಿತು.