ಸಾರಾಂಶ
ಸರಿಗಮಪ ಖ್ಯಾತಿಯ ಸೃಷ್ಟಿ ಸುರೇಶ್ ಕನ್ನಡದ ಅನೇಕ ಪ್ರಮುಖ ಕವಿಗಳ ಕಾವ್ಯಗಳಿಗೆ ಜೀವ ತುಂಬಿ ಹಾಡಿದರು.
ಬಳ್ಳಾರಿ: ಯುವ ಕಲಾವಿದರಿಗೆ ಪ್ರೋತ್ಸಾಹಿಸುವ ಆಶಯದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿನ ಡಾ.ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ "ತಿಂಗಳು ಸೊಬಗು " ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಲಾಸಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಂಗಳ ಸೊಬಗನ್ನು ಹೆಚ್ಚಿಸಿದ ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಸೃಷ್ಟಿ ಸುರೇಶ್ ಕನ್ನಡದ ಅನೇಕ ಪ್ರಮುಖ ಕವಿಗಳ ಕಾವ್ಯಗಳಿಗೆ ಜೀವ ತುಂಬಿ ಹಾಡಿದರು. ವಿವಿಧ ಜನಪ್ರಿಯ ಭಾವಗೀತೆಗಳನ್ನು ಹಾಡಿ ಜನಮನ ರಂಜಿಸಿದರು.ಸಿರುಗುಪ್ಪದ ಹಾಸ್ಯ ಕಲಾವಿದ ಕೆ.ನರಸಿಂಹ ಮೂರ್ತಿ ಹಾಸ್ಯ ಚಟಾಕಿಗಳ ಮೂಲಕ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಬಳ್ಳಾರಿಯ ಸುಜಾತ ಕಲಾ ಟ್ರಸ್ಟ್ ನ ಸಮೂಹ ನೃತ್ಯವು ನೋಡುಗರ ಕಣ್ಮನ ಸೆಳೆಯಿತು. ಬಳ್ಳಾರಿ ಕಲಾ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದನ್ನು ನಿರೂಪಿಸಿದಂತಿತ್ತು.
ಕಾರ್ಯಕ್ರಮ ಶುರು ಮುನ್ನ ಪ್ರಾಸ್ತಾವಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಿಲ್ಲೆಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಲಾಖೆ ಪ್ರತಿ ತಿಂಗಳು 3ನೇ ಶನಿವಾರ ತಿಂಗಳ ಸೊಬಗು ಕಾರ್ಯಕ್ರಮ ಸಂಘಟಿಸುತ್ತದೆ. ಪ್ರತಿ ತಿಂಗಳು ಕಲಾ ಪ್ರಕಾರಗಳು ಬದಲಾಗಲಿವೆ. ಹಾಡುಗಾರಿಕೆ, ನೃತ್ಯ, ನಾಟಕ ಹೀಗೆ ನಾನಾ ಪ್ರಕಾರಗಳ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರಲ್ಲದೆ, ಪ್ರತಿ ತಿಂಗಳು ಜರುಗುವ ಕಾರ್ಯಕ್ರಮಕ್ಕೆ ನಗರದ ಕಲಾಸಕ್ತರು ಆಗಮಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.