ಹಾಸನ ವಿಮಾನ ನಿಲ್ದಾಣದ ಒತ್ತುವರಿಯಾಗಿದ್ದ ಜಾಗ ತೆರವು

| Published : Jan 30 2025, 12:34 AM IST

ಹಾಸನ ವಿಮಾನ ನಿಲ್ದಾಣದ ಒತ್ತುವರಿಯಾಗಿದ್ದ ಜಾಗ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ವಿಮಾನ ನಿಲ್ದಾಣ ಕಾಮಗಾರಿಗೆ ಜಮೀನು ಕಳೆದುಕೊಂಡಿರುವ ಸುಮಾರು ಏಳು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ವಿಮಾನ ನಿಲ್ದಾಣಕ್ಕೆಂದು ಸ್ವಾಧೀನ ಮಾಡಲಾಗಿದ್ದ ಭೂಮಿಯನ್ನು ಸ್ಥಳೀಯ ಕೆಲವರು ಒತ್ತುವರಿ ಮಾಡಿಕೊಂಡಿದ್ದನ್ನು ಬುಧವಾರ ಪೊಲೀಸ್‌ ಭದ್ರತೆಯೊಂದಿಗೆ ತೆರವು ಮಾಡಲಾಯಿತು.

ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು ಕಡೆ ಪ್ರತಿಭಟನೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಗ್ರಾಮಸ್ಥರು ಹತ್ತಿರ ಸುಳಿಯದಂತೆ ಭೂಸ್ವಾಧೀನವಾಗಿರುವ ಪ್ರದೇಶದ ಒತ್ತುವರಿ ಜಾಗವನ್ನು ಪೊಲೀಸ್ ಬಂದೋಬಸ್ತ್ ಮೂಲಕ ಜೆಸಿಬಿಯಿಂದ ತೆರವು ಮಾಡಲಾಯಿತು.ಈ ಹಿಂದೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತೆರವು ಕಾರ್ಯಚರಣೆಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಧ್ಯ ಪ್ರವೇಶಿಸಿ ಜಂಟಿಯಾಗಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು. ಸಭೆ ನಡೆಸಿದ ಬಳಿಕ ಸಭೆ ಫಲಪ್ರದ ಆಗಿರಲಿಲ್ಲ. ನಂತರದಲ್ಲಿ ಡಿಸಿ ಸಿ. ಸತ್ಯಭಾಮ ಅವರ ಆದೇಶದಂತೆ ಬುಧವಾರ ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಮಾಡಲಾಗಿದೆ.

ಕೆಐಎಡಿಬಿ ಅಧಿಕಾರಿ ಹಾಗೂ ಹಾಸನ ಜಿಲ್ಲಾಡಳಿತದ ವತಿಯಿಂದ ಹಾಸನ ವಿಮಾನ ನಿಲ್ದಾಣದ 536.24 ಎಕರೆ ಭೂಮಿ ಸುತ್ತ ಜಮೀನಿನ ದುರಸ್ತಿ ಹಾಗೂ ಪೋಡಿ ಮಾಡದೆ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಮಾನ ನಿಲ್ದಾಣದ ಸುತ್ತ ಬಲವಂತವಾಗಿ ಕಾಂಪೌಂಡ್ ನಿರ್ಮಾಣ ಮಾಡುವುದನ್ನು ವಿರೋಧಿಸಿ ಒಂದು ಕಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೆ ಇನ್ನೊಂದು ಕಡೆ ಒತ್ತುವರಿ ಜಾಗ ತೆರವು ಕಾರ್ಯಚರಣೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಮಾಡಲಾಯಿತು. ಸುಮಾರು 300 ಜನ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ವಿಮಾನ ನಿಲ್ದಾಣ ಕಾಂಪೌಂಡ್ ಕಾಮಗಾರಿ ನಡೆಸಿದರು. ಇದೇ ವೇಳೆ ಗ್ರಾಮಸ್ಥರಾದ ಬೊಮ್ಮೇಗೌಡ ಹಾಗೂ ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಿರ್ಮಾಣವಾಗುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಈ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗದಲ್ಲೇ ನಾವು ಸಂಚರಿಸುತ್ತಿದ್ದು, ಕಾಂಪೌಂಡ್ ನಿರ್ಮಾಣ ಮಾಡುವುದರಿಂದ ನಮ್ಮ ಗ್ರಾಮಗಳಿಗೆ ತೆರಳಲು ಸುಮಾರು 7 ಕಿ.ಮೀ ಬಳಸಿ ಬರಬೇಕಾಗಿದೆ. ನಮಗೆ ಈಗ ರಸ್ತೆ ಇಲ್ಲವಾಗಿದೆ.

ಪ್ರತ್ಯೇಕ ರಸ್ತೆ ಮಾಡಿ ಕೊಡಿ ಎಂಬ ರೈತರ ಬೇಡಿಕೆಯನ್ನು ಒಪ್ಪಿ 536 ಎಕರೆಯಲ್ಲೇ ವಿಮಾನ ನಿಲ್ದಾಣದ ಬೌಂಡರಿ ಅಂಚಿನಲ್ಲೇ ಸುಮಾರು 9 ಮೀಟರ್ ಅಗಲದ 5 ಕಿ.ಮೀ.ಉದ್ದದ ರಸ್ತೆ ನಿರ್ಮಾಣಕ್ಕೆ ಸುಮಾರು 5 ಎಕರೆ ಜಾಗದಲ್ಲಿ ರಸೆ ನಿರ್ಮಿಸಿಕೊಡಲು ಈ ಮುಂಚೆ ಕೆಐಡಿಬಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಈಗ ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡದೆ. ಮತ್ತೆ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಜಿಲ್ಲಾಡಳಿತ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ ರೈತರಿಗೆ ತಮ್ಮ ಜಮೀನು ಮತ್ತು ಗ್ರಾಮಗಳಿಗೆ ತೆರಳಲು ಸಂಪರ್ಕ ರಸ್ತೆ ನೀಡುವಂತೆ ಕಾಂಪೌಂಡ್ ನಿರ್ಮಾಣ ಮಾಡಿದರೆ ನಮಗೆ ಓಡಾಡಲು ರಸ್ತೆ ಇಲ್ಲ. ತಮ್ಮ ಗ್ರಾಮಗಳಿಗೆ ತೆರಳಲು ಪರ್ಯಾಯ ರಸ್ತೆ ಬೇಕು. ಪರ್ಯಾಯವಾಗಿ ನೀಡಿರುವ ರಸ್ತೆಗೆ ಕಾಮಗಾರಿಯೂ ಆಗಿಲ್ಲ ಎಂದರು. ಜಮೀನು ಕಳೆದುಕೊಂಡ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಭೂಮಿ ಕಳೆದುಕೊಂಡ ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುವಂತೆ ಆಗ್ರಹಿಸಿ ಬೂವನಹಳ್ಳಿ ಗ್ರಾಮಸ್ಥ ಮುಖಂಡ ದಿನೇಶ್ ಹಾಗೂ ಬೊಮ್ಮೇಗೌಡ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ರೈತರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ನಂತರ ಪ್ರತಿಭಟನೆಕಾರರು ಕಾಂಪೌಂಡ್ ಕಾಮಗಾರಿಗೆ ಯಾವುದೇ ಅಡ್ಡಿ ಉಂಟು ಮಾಡದೆ ತೆರಳಿದ್ದು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಜಮೀನು ಕಳೆದುಕೊಂಡಿರುವ ಸುಮಾರು ಏಳು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹಾಸನ ಉಪವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಶ್ವೇತಾ. ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.