ಸಾರಾಂಶ
ರೈತರ ಬದುಕಿಗಾಗಿ ಬಿಜೆಪಿ, ಜೆಡಿಎಸ್ ಯಾವುದೇ ಹೋರಾಟಕ್ಕೆ ಸಿದ್ಧ: ಮಾಜಿ ಸಚಿವ ಡಿ.ಎನ್.ಜೀವರಾಜ್ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮಲೆನಾಡಿನಲ್ಲಿ ಒತ್ತುವರಿ ತೆರವಿಗೂ, ಕಸ್ತೂರಿ ರಂಗನ್ ವರದಿಗೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ ಪ್ರಸ್ತುತ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು. ಬಿಜೆಪಿ- ಜೆಡಿಎಸ್ ಪಟ್ಟಣದ ಜೇಸಿ ವೃತ್ತದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ಯುಪಿಎ ಸರ್ಕಾರದ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್, ಜಯಂತಿ ನಟರಾಜ್ ಕಸ್ತೂರಿ ರಂಗನ್ ಸಮಿತಿ ರಚಿಸಿದ್ದರು. ಆದರೆ ಆ ಸಮಿತಿ ವರದಿ ಮಾತ್ರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ. ಇದು ಉಪಗ್ರಹ ಆಧಾರಿತ ವರದಿ. ಮಲೆನಾಡಿನ ತೋಟ, ಗದ್ದೆಗಳನ್ನು ಇದರಲ್ಲಿ ಸೇರಿಸಲಾಗಿದೆ. ಗ್ರಾಮಸಭೆಗಳ ಮೂಲಕ ಸರ್ವೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದ್ದು, ಅದರಲ್ಲಿ ಈಗಾಗಲೇ 65 ದಿನಗಳು ಕಳೆದಿವೆ. ಇನ್ನು ಕೇವಲ 25 ದಿನಗಳಿದ್ದು, ಕೂಡಲೇ ಆಕ್ಷೇಪಣೆ ಸಲ್ಲಿಸಬೇಕಿದೆ. ಆದರೆ ರಾಜ್ಯ ಸರ್ಕಾರ ಮೂಡಾ, ವಾಲ್ಮೀಕಿ ಹಗರಣಕ್ಕೆ ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ನೀಡುತ್ತ, ನಟ ದರ್ಶನ್‌ಗೆ ಜೈಲಿನಲ್ಲಿ ಐಶಾರಾಮಿ ಜೀವನಕ್ಕೆ ಅಗತ್ಯ ಸೌಲಭ್ಯ ನೀಡುವ ಬಗ್ಗೆ ಚಿಂತಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಅರಣ್ಯ ಸಚಿವರು ಬಡವರ ಪರ ಕಾಳಜಿ ಹೊಂದಿಲ್ಲ. ಒತ್ತುವರಿ ತೆರವಿನ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಧೈರ್ಯವಿದ್ದರೆ ರೈತರ ಜಮೀನು ತೆರವುಗೊಳಿಸಲ್ಲ ಎಂಬ ಆದೇಶ ಹೊರಡಿಸಲಿ. ಶೃಂಗೇರಿ ಕ್ಷೇತ್ರದಲ್ಲಿ ಶಾಸಕತ್ವಕ್ಕೆ ಜೀವ ಇಲ್ಲವಾಗಿದ್ದು, ರಾಜೀನಾಮೆ ನೀಡುವುದೇ ಒಳಿತು.ಈಗ ಆಗಿರುವ ಒತ್ತುವರಿ ಸಂಪೂರ್ಣ ಜನರಿಗೆ ಬಿಡಿ. ಜನರ ಒತ್ತುವರಿ ತೆರವುಗೊಳಿಸದಂತೆ ಇರುವುದು ಶಾಸಕರ ಜವಾಬ್ದಾರಿ, ಶಾಸಕರು ಒತ್ತುವರಿ ತೆರವಿಗೆ ಮುಂದಾಗಿ ರೈತರಿಗೆ ಶಾಪವಾಗಬಾರದು. ರೈತರ ವಿರೋಧದ ನಡುವೆಯೂ ಒತ್ತುವರಿ ತೆರವಿಗೆ ಮುಂದಾದರೆ ಬಿಜೆಪಿ, ಜೆಡಿಎಸ್ ಪಕ್ಷಗಳು ಕ್ಷೇತ್ರಾದ್ಯಂತ ಪಾದಯಾತ್ರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಕೂರಲು ಹಿಂಜರಿಯಲ್ಲ ಎಂದು ಎಚ್ಚಿರಿಸಿದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಮಲೆನಾಡಿನ ಅರಿವಿಲ್ಲದ ಅರಣ್ಯ ಸಚಿವರು, ವಿದೇಶದಲ್ಲಿ ವ್ಯಾಸಂಗ ಮಾಡಿದ ಕಂದಾಯ ಸಚಿವರು ಮಲೆನಾಡನ್ನು ಛಿದ್ರಗೊಳಿಸಲು ಹೊರಟಿದ್ದು, ರಾಜ್ಯ ಸರ್ಕಾರ ಜನರನ್ನು ಒಡೆದಾಳಿ ಸರ್ಕಾರ ಮುನ್ನಡೆಸುವ ಪ್ರಯತ್ನದಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವಿನ ಹೆಸರಿನಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳ ಮೂಲಕ ಸಾವಿರಾರು ಮರಗಳನ್ನು ನಾಶ ಮಾಡಲು ಹೊರಟಿದ್ದಾರೆ.
ಶಾಸಕರಿಗೆ ಜನರ ಮತ ಬೇಕು. ಹಿತ ಬೇಕಾಗಿಲ್ಲ. ಸರ್ಕಾರ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ತೆರವು ಮಾಡಲಿ. ಆದರೆ ಅನಧಿಕೃತವಾಗಿ ರೈತರ ಜಮೀನು ತೆರವುಗೊಳಿಸಿದರೆ ನಾವೂ ಅನಧಿಕೃತವಾಗಿ ಅರಣ್ಯ ಇಲಾಖೆ ಕಚೇರಿಗೆ ನುಗ್ಗಬೇಕಾದ ಪರಿಸ್ಥಿತಿ ಎದುರಾಗಬಹುದು. ಸರ್ಕಾರ ಒತ್ತುವರಿ ತೆರವಿನ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಳ್ಳಲು ಹೊರಟಿದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದರೆ ಕ್ಷೇತ್ರಕ್ಕೆ ಸಚಿವರು ಕಾಲಿಡದಂತೆ ಚಳುವಳಿ ಮಾಡಲಾಗುವುದು. ಸಚಿವರು ಬಾರದಂತೆ ಬ್ಯಾನರ್ ಕಟ್ಟಲಾಗುವುದು ಎಂದರು.ಸಭೆಗೂ ಮುನ್ನ ಪಟ್ಟಣದ ರೋಟರಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಾಡಕಚೇರಿ ಉಪ ತಹಸೀಲ್ದಾರ್ ಹೇಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಬಿಜೆಪಿ ಮುಖಂಡರಾದ ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್ ಕಲ್ಮಕ್ಕಿ, ಜಗದೀಶ್ಚಂದ್ರ, ಕಾಂತರಾಜ್, ಮಂಜು ಕೆಸವಿ, ಪ್ರಭಾಕರ್ ಪ್ರಣಸ್ವಿ, ಪ್ರದೀಪ್ ಕಿಚ್ಚಬ್ಬಿ, ಕೆ.ಕೆ.ವೆಂಕಟೇಶ್, ಮಂಜು ಹೊಳೆಬಾಗಿಲು, ಸಂತೋಷ್ ಅರೆನೂರು, ಪ್ರೇಮೇಶ್, ಸುಚಿತಾ ಹೆಗ್ಡೆ, ಜೆಡಿಎಸ್ ಮುಖಂಡರಾದ ದೀಪಕ್ ಮರಿಗೌಡ, ಕೆ.ಟಿ.ಗೋವಿಂದೇಗೌಡ, ಕುಂಚೂರು ವಾಸು, ಶಿವಶಂಕರ್, ಕೆ.ಸಿ.ವೆಂಕಟೇಶ್, ಮತ್ತಿತರರು ಹಾಜರಿದ್ದರು. ಕೋಟ್ (ಬಾಕ್ಸ್)ಮಲೆನಾಡಿನ ಒತ್ತುವರಿ ತೆರವಿಗೂ, ವಯನಾಡಿನ ಗುಡ್ಡ ಕುಸಿತಕ್ಕೂ ಸಂಬಂಧವಿಲ್ಲ. ಸರ್ಕಾರ ಅವೈಜ್ಞಾನಿಕ ಕಾನೂನು, ಕಾಯ್ದೆಗಳನ್ನು ಮಲೆನಾಡಿ ರೈತರು, ಜನಸಾಮಾನ್ಯರ ಮೇಲೆ ಹೇರುತ್ತಿದೆ. ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜನವಿರೋಧಿ ಕಾಯ್ದೆಗಳನ್ನು ಹೇರುತ್ತಾ ಬಂದರೆ ಜನರು ದಂಗೆ ಏಳುವುದು ಖಚಿತ.-ಅರುಣ್‌ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ.ಅರಣ್ಯ ಸಚಿವರಿಗೆ ಅನುಭವ ಇಲ್ಲದೇ ಅಸಂಬದ್ಧ ಆದೇಶ ಹೊರಡಿಸುತ್ತಿದ್ದು, ಸರ್ಕಾರ ಒತ್ತುವರಿ ವಿಚಾರದಲ್ಲಿ ರೈತರ ದಾರಿ ತಪ್ಪಿಸುವ ಯತ್ನದಲ್ಲಿದೆ. ನೂರಾರು ವರ್ಷಗಳಿಂದ ಸಾಗುವಳಿ ಮಾಡಿದ ಜಮೀನನ್ನು ಸೆಕ್ಷನ್ 4ಗೆ ಸೇರಿಸಲು ಹೊರಟಿರುವುದು ಖಂಡನೀಯ. ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಅರಣ್ಯ ಎಂದರೆ ಏನು ಎಂದೇ ತಿಳಿದಿಲ್ಲ. ಕ್ಷೇತ್ರದ ಶಾಸಕರು 94ಸಿ, ಫಾರಂ ನಂ.57ರ ಬಗ್ಗೆ ಇದೂವರೆಗೆ ಸದನದಲ್ಲಿ ಮಾತನಾಡಿಲ್ಲ. ಒತ್ತುವರಿ ತೆರವಿನ ವಿಚಾರದಲ್ಲಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕಿದೆ. - ಬಿ.ಎಚ್.ದಿವಾಕರಭಟ್, ಜೆಡಿಎಸ್ ಕ್ಷೇತ್ರಾಧ್ಯಕ್ಷ.೦೨ಬಿಹೆಚ್‌ಆರ್ ೧, ೨:
ರಾಜ್ಯ ಸರ್ಕಾರದ ಜನ ವಿರೋಧಿ ನೀತಿ, ರೈತರ ಒತ್ತುವರಿ ತೆರವು ನಿರ್ಧಾರ ಖಂಡಿಸಿ ಬಾಳೆಹೊನ್ನೂರಿನಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಭೆ ಮಾಡಿದರು.;Resize=(128,128))
;Resize=(128,128))
;Resize=(128,128))