ಸಾರಾಂಶ
ಕನ್ನಡದ ನಾಮಫಲಕಗಳನ್ನು ಹಾಕಬೇಕೆಂದು ಜಾಗೃತಿಯೊಂದಿಗೆ ನಡೆದ ಕರವೇ ರ್ಯಾಲಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಹಾಕಲಾಗಿದ್ದ ಸಂಪೂರ್ಣ ಇಂಗ್ಲೀಷ್ ನಾಮಫಲಕಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ನಗರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಇಂಗ್ಲೀಷ್ ನಾಮಫಲಕಗಳನ್ನು ಕಿತ್ತೊಗೆದ ಪ್ರತಿಭಟನಾಕಾರರು ಕನ್ನಡ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕನ್ನಡದ ನಾಮಫಲಕಗಳನ್ನು ಹಾಕಬೇಕೆಂದು ಜಾಗೃತಿಯೊಂದಿಗೆ ನಡೆದ ಕರವೇ ರ್ಯಾಲಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಹಾಕಲಾಗಿದ್ದ ಸಂಪೂರ್ಣ ಇಂಗ್ಲೀಷ್ ನಾಮಫಲಕಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಪೊಲೀಸರ ಹಾಗೂ ಕರವೇ ಪದಾಧಿಕಾರಿಗಳ ಮಧ್ಯೆ ವಾಗ್ವಾದವೂ ನಡೆಯಿತು. ಕೈಯಲ್ಲಿ ದೊಣ್ಣೆ ಹಿಡಿದು ನಾಮಫಲಕಗಳನ್ನು ಧ್ವಂಸ ಮಾಡುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಹೊರಟ ಶಹರ ಪೊಲೀಸರ ವಿರುದ್ಧವೇ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ತದ ನಂತರ ಪದಾಧಿಕಾರಿಗಳ ಬಳಿ ಇದ್ದ ದೊಣ್ಣೆ ವಶಕ್ಕೆ ಪಡೆದು ಇನ್‌ಸ್ಪೆಕ್ಟರ್ ವಿಶ್ವನಾಥ ಚೌಗಲೇ ರ್‍ಯಾಲಿಗೆ ಅವಕಾಶ ಮಾಡಿಕೊಟ್ಟರು. ಮಾರ್ಚ್ 13ರ ವರೆಗೆ ಗಡುವು ನೀಡಲಾಗುತ್ತಿದ್ದು ಅಂಗಡಿ ಮುಂಗಟ್ಟುಗಳು ಶೇ. 60ರಷ್ಟು ಕನ್ನಡದ ನಾಮಫಲಕಗಳನ್ನು ಹಾಕಬೇಕು. ಇಲ್ಲದೇ ಹೋದಲ್ಲಿ ತಾವೇ ತೆರವುಗೊಳಿಸುವುದಾಗಿ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಎಚ್ಚರಿಕೆ ನೀಡಿದರು.