ಸಾರಾಂಶ
ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ಭಾಗದಲ್ಲಿ ತುಸು ಪ್ರಮಾಣ ಮಳೆ ಹಾಗೂ ಬೆಳೆಗಳು ಹಸಿರು ಇರುವ ಕಾರಣ ಈ ಪಟ್ಟಿಯಿಂದ ಹೊರಗಿದ್ದವು. 2ನೇ ಪಟ್ಟಿಯಲ್ಲಿ ಕಲಘಟಗಿ, ಅಣ್ಣಿಗೇರಿ, ಅಳ್ನಾವರ ತಾಲೂಕುಗಳನ್ನೂ ಘೋಷಿಸಲಾಗಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ಬರ ಪೀಡಿತ ತಾಲೂಕಿನ ಮೊದಲ ಪಟ್ಟಿಯಿಂದ ಹೊರಗಿದ್ದ ಜಿಲ್ಲೆಯ ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕುಗಳನ್ನು ಸೋಮವಾರ ಬಿಡುಗಡೆಗೊಂಡ ಹೆಚ್ಚುವರಿ ಪಟ್ಟಿಯಲ್ಲಿ ಘೋಷಣೆ ಮಾಡಿದ್ದು, ಇಡೀ ಧಾರವಾಡ ಜಿಲ್ಲೆಯು ಬರ ಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿಗೆ ಮಳೆ ಕೊರತೆಯಿಂದಾಗಿ ರಾಜ್ಯ ಸರ್ಕಾರ ಜಿಲ್ಲೆಯ ಐದು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಇತ್ತೀಚೆಗೆ ಘೋಷಣೆ ಮಾಡಿತ್ತು. ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದಗೋಳ, ನವಲಗುಂದ ತಾಲೂಕುಗಳು ಬರಪೀಡಿತವಾಗಿದ್ದು, ವಿವಿಧ ರೀತಿಯ ಬೆಳೆಹಾನಿ ಸಂಭವಿಸಿದ್ದರಿಂದ ಈ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿದ್ದವು. ಆದರೆ, ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ಭಾಗದಲ್ಲಿ ತುಸು ಪ್ರಮಾಣ ಮಳೆ ಹಾಗೂ ಬೆಳೆಗಳು ಹಸಿರು ಇರುವ ಕಾರಣ ಈ ಪಟ್ಟಿಯಿಂದ ಹೊರಗಿದ್ದವು.
ಹೋರಾಟ, ಸಮೀಕ್ಷೆನೈಜ ಪರಿಸ್ಥಿತಿ ಬೇರೆ ಇತ್ತು. ಅಸಮರ್ಪಕ ಮಳೆ ಹಿನ್ನೆಲೆಯಲ್ಲಿ ಈ ಮೂರು ತಾಲೂಕುಗಳಲ್ಲೂ ಬೆಳೆ ಹಾನಿ ಸಾಕಷ್ಟಾಗಿತ್ತು. ಈ ತಾಲೂಕುಗಳಲ್ಲಿ ಹೆಚ್ಚು ಬೆಳೆಯುವ ಭತ್ತ, ಗೋವಿನ ಜೋಳ ಹಾಗೂ ಕಬ್ಬು ಬೆಳವಣಿಗೆಯಲ್ಲಿ ತೀವ್ರ ಕುಂಠಿತವಾಗಿತ್ತು. ಹೀಗಾಗಿ ಈ ತಾಲೂಕುಗಳ ರೈತರು ನಮ್ಮ ತಾಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಣೆ ಮಾಡಬೇಕೆಂದು ತೀವ್ರ ರೀತಿಯ ಹೋರಾಟ ಸಹ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಅಳ್ನಾವರ ಹಾಗೂ ಕಲಘಟಗಿ ತಾಲೂಕು ಬಂದ್ ಸಹ ಮಾಡಲಾಗಿತ್ತು. ಎರಡು ದಿನಗಳ ಹಿಂದಷ್ಟೇ ಬರ ಅಧ್ಯಯನಕ್ಕೆ ಬಂದ ಕೇಂದ್ರ ತಂಡಕ್ಕೂ ಮೂರು ತಾಲೂಕುಗಳ ರೈತ ಮುಖಂಡರು ತಾಲೂಕುಗಳಲ್ಲಿ ಇರುವ ಸ್ಥಿತಿಯನ್ನು ಮನವರಿಕೆ ಮಾಡಿದ್ದರು. ಅದಕ್ಕೂ ಮುಂಚೆ ಜಿಲ್ಲಾಡಳಿತ ಮೂರು ತಾಲೂಕಗಳ ಬರ ಸ್ಥಿತಿಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಅಳ್ನಾವರ, ಕಲಘಟಗಿ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲೂ ಬರ ಪೀಡಿತ ತಾಲೂಕು ಎಂದು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಿ ರಾಜ್ಯ ಸರ್ಕಾರ ಆದೇಶಿದೆ. ಈ ಮೂಲಕ ಜಿಲ್ಲೆಯ ಎಲ್ಲ ಎಂಟೂ ತಾಲೂಕುಗಳು ಬರ ಪೀಡಿತ ತಾಲೂಕುಗಳೆಂದು ಘೋಷಣೆಯಾದಂತಾಗಿದೆ. ಬರ ಪೀಡಿತ ತಾಲೂಕುಗಳಲ್ಲಿ ಸರ್ಕಾರ ಕೈಗೊಳ್ಳಬೇಕಾದ ನರೇಗಾ ಕಾರ್ಯಚಟುವಟಿಕೆ, ಮೇವು ಸಂಗ್ರಹಣೆ, ಉತ್ಪಾದನೆ, ಕುಡಿಯುವ ನೀರು ಸೇರಿದಂತೆ ಸರ್ಕಾರದ ನಿಯಮಾವಳಿ ಪ್ರಕಾರ ಇಡೀ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ದೊರೆಯಲಿದೆ. ಜೊತೆಗೆ ರೈತರಿಗೆ ಬರ ಪರಿಹಾರದ ನಿರೀಕ್ಷೆಯೂ ಇದೆ.