ಸಮಸ್ತ ಹಿಂದೂ ಸಮಾಜ ಸೆಟೆದು ನಿಲ್ಲಬೇಕು

| Published : Apr 24 2025, 11:48 PM IST

ಸಾರಾಂಶ

ಉಗ್ರರ ದಾಳಿಯಲ್ಲಿ ಮೃತಪಟ್ಟಿವರಿಗೆ ಮೇಣದ ದೀಪಗಳನ್ನು ಹಚ್ಚುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಿಂದೂಗಳನ್ನ ಗುಂಡು ಹಾರಿಸಿ ಕೊಂದ ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿ ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ನಂತರ ಉಗ್ರರ ದಾಳಿಯಲ್ಲಿ ಮೃತಪಟ್ಟಿವರಿಗೆ ಮೇಣದ ದೀಪಗಳನ್ನು ಹಚ್ಚುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ ಕರ್ನಾಟಕ ಹಾಗೂ ಇತರೆ ಕಡೆಗಳಿಂದ ಬಂದಿದ್ದ ಹಿಂದೂಗಳ ಮೇಲೆ ಭಯೋತ್ಪಾದಕರು ಬರ್ಬರವಾಗಿ ದಾಳಿ ನಡೆಸಿ ಕೊಂದಿರುವುದು ಖಂಡನೀಯ. ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ. ಉಗ್ರಗಾಮಿಗಳು ನಡೆಸಿರುವ ಪೈಶಾಚಿಕ ಕೃತ್ಯ ರಣಹೇಡಿಗಳ ಕೆಲಸವಾಗಿದೆ. ಉಗ್ರರು ಭಾರತದ ವೀರಸೈನ್ಯವನ್ನು ಎದುರಿಸಲಾಗದೆ ಅಮಾಯಕರ ಜೀವ ತೆಗೆದಿದ್ದಾರೆ. ಹಿಂದೂಧರ್ಮವನ್ನ ಗುರಿಯಾಗಿಸಿ ಕೃತ್ಯ ನಡೆಸಲಾಗಿದೆ. ಇಂತಹ ದುಷ್ಕೃತ್ಯದ ವಿರುದ್ಧ ಸಮಸ್ತ ಹಿಂದೂ ಸಮಾಜ ಸೆಟೆದು ನಿಲ್ಲಬೇಕು. ರಣಹೇಡಿಗಳಿಗೆ ಬುದ್ದಿಕಲಿಸಲು ನಮ್ಮ ಜನತೆ ಹಾಗೂ ಸೈನ್ಯ ಸಮರ್ಥವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಲಿದೆ ಎಂದು ಮುಖಂಡರುಗಳು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ನಗರಸಭೆ ಸದಸ್ಯರುಗಳಾದ ರಾಮಮೋಹನ್, ಪದ್ಮಾತಿಮ್ಮೇಗೌಡ, ಜಯಲಕ್ಷ್ಮಿ, ಮೋಹನ್‌ಕುಮಾರ್, ಶಶಿಕಿರಣ್, ಓಹಿಲಾ, ಮುಖಂಡರುಗಳಾದ ಸಿಂಗ್ರಿದತ್ತಪ್ರಸಾದ್, ಬಿಸಲೇಹಳ್ಳಿ ಜಗದೀಶ್, ವಿಶ್ವದೀಪ್, ನಗರಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.