ಇಡೀ ರಾಜ್ಯಕ್ಕೆ ಬಿಸಿಲ ಬೇಗೆ; 40 ಡಿ.ಸೆ. ಸನಿಹಕ್ಕೆ ಬಿಸಿಲು!

| Published : Mar 10 2025, 12:22 AM IST

ಸಾರಾಂಶ

ಬಿಸಿಲನಾಡು ಕಲಬುರಗಿಯಲ್ಲಿ ದಿನೇ ದಿನೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನತ್ತ ತಲುಪಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಸಿಲನಾಡು ಕಲಬುರಗಿಯಲ್ಲಿ ದಿನೇ ದಿನೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನತ್ತ ತಲುಪಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗರಿಷ್ಠ ಉಷ್ಣಾಂಶ 2 ರಿಂದ 4 ಡಿ.ಸೆ. ವರೆಗೆ ಹೆಚ್ಚಾಗಿರಲಿದೆ.

ರಾಜ್ಯಾದ್ಯಂತ ಬಿಸಿಲಬೇಗೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಗಲು ಹೊತ್ತಿನಲ್ಲಿ ಜನ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಕಲಬುರಗಿಯಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 39 ಡಿ.ಸೆ. ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 1.9 ಡಿ.ಸೆ.ನಷ್ಟು ಅಧಿಕ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಕಲಬುರಗಿ ಜಿಲ್ಲೆಗಳಲ್ಲಿ 37.1 ಡಿ,ಸೆ. ಇರುತ್ತದೆ. ಉತ್ತರದ ಜಿಲ್ಲೆಗಳಲ್ಲಿ 36ಕ್ಕಿಂತ ಹೆಚ್ಚು:

ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ದಾಖಲಾಗಿದೆ. ಗದಗ 36.7, ಬಾಗಲಕೋಟೆ, ಧಾರವಾಡ 36.6, ಹಾವೇರಿ 36.3, ಬೀದರ್‌, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ 36 ಡಿ.ಸೆ. ದಾಖಲಾದರೆ, ದಕ್ಷಿಣ ಕರ್ನಾಟಕದ ಚಿತ್ರದುರ್ಗದಲ್ಲಿ 36.2 ಡಿ.ಸೆ. ದಾಖಲಾಗಿದೆ. ಈ ಮೂಲಕ ಸಾಮಾನ್ಯ ಬಿಸಿಲಿಗಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34.4 ಡಿ.ಸೆ. ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 1.7 ಡಿ.ಸೆ. ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.