ಜಿಲ್ಲೆಯಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭ: ಎನ್.ಎಸ್. ಬೋಸರಾಜು

| Published : Mar 28 2025, 12:30 AM IST

ಸಾರಾಂಶ

ಕೊಡಗಿನ ಮತದಾರರು ವಿದ್ಯಾವಂತ ಯುವಕರನ್ನು ಶಾಸಕರನ್ನು ಆಯ್ಕೆ ಮಾಡಿರುವ ಕಾರಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ ಎಂದು ಸಚಿವ ಬೋಸರಾಜು ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗಿನ ಮತದಾರರು ವಿದ್ಯಾವಂತ ಯುವಕರನ್ನು ಶಾಸಕರನ್ನು ಆಯ್ಕೆ ಮಾಡಿರುವ ಕಾರಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಜಿಲ್ಲಾ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಕೊಡವ ಸಮಾಜದಲ್ಲಿ ನಡೆದ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕಾಗಿ ತ್ಯಾಗ ಮಾಡಿದವರು ಪಕ್ಷದ ಆಸ್ತಿಯಾಗಿದ್ದಾರೆ. ಅಂತಹವರಿಗೆ ಪಕ್ಷ ಯಾವತ್ತು ಚಿರಋಣೆಯಾಗಿರುತ್ತದೆ.

ಪಂಚ ಗ್ಯಾರೆಂಟಿಗಳು ಎಲ್ಲ ಮನೆಗಳಿಗೆ ತಲುಪಿವೆ. ಪ್ರತಿ ಕುಟುಂಬಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಯ ಉದ್ದೇಶಗಳನ್ನು ಪ್ರತಿ ಕುಟುಂಬಗಳಿಗೂ ತಿಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಈ ಮೂಲಕ ಪಕ್ಷದ ಸಂಘಟನೆ ಮಾಡಬೇಕು ಎಂದು ಹೇಳಿದರು.

ಕೊಡಗಿನಲ್ಲಿ ಬಿಜೆಪಿ ಶಾಸಕರು 25 ವರ್ಷ ಅಧಿಕಾರ ನಡೆಸಿದ್ದಾರೆ. ಆದರೆ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿಲ್ಲ. ಗ್ರಾಮೀಣ ರಸ್ತೆಗಳು ಹಾಗು ರಾಜ್ಯಹೆದ್ದಾರಿಗಳನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತೆ. 25 ವರ್ಷಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿದ್ದಾರೆ. ಇನ್ನು ಯಾವತ್ತೂ ಕೋಮುವಾದಿ ಬಿಜೆಪಿಯ ಶಾಸಕರು ಕೊಡಗಿನಲ್ಲಿ ಆಯ್ಕೆಯಾಗಬಾರದು. ಕಾಂಗ್ರೆಸ್ ಕಾರ್ಯಕರ್ತರು ಮನಸ್ಸು ಮಾಡಿದರೆ, ಎಲ್ಲವೂ ಸಾಧ್ಯ ಎಂದು ಹೇಳಿದರು.

ಪಂಚ ಗ್ಯಾರೆಂಟಿಗಳೊಂದಿಗೆ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ಕೊಟ್ಟಿದೆ. ಮಡಿಕೇರಿ ಹಾಗು ವಿರಾಜಪೇಟೆಯ ಮತದಾರರು ವಿದ್ಯಾವಂತ ಶಾಸಕರನ್ನು ಆಯ್ಕೆ ಮಾಡಿರುವುದರಿಂದ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ ಎಂದು ಹೇಳಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 1500 ಕೋಟಿ ರು. ಗಳ ಅನುದಾನ ನೀಡಿದೆ ಎಂದು ಹೇಳಿದರು. 25 ವರ್ಷ ಜಿಲ್ಲೆಯಲ್ಲಿ ಶಾಸಕರು ಏನೂ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಸಿ ಆ್ಯಂಡ್ ಡಿ ಭೂಮಿಯ ಭೂತವನ್ನು ಸಂರಕ್ಷಿಸಿಕೊಂಡು ಬಂದವರೇ ಬಿಜೆಪಿ ಶಾಸಕರು, ಈಗ ಅಧಿಕಾರ ಕಳೆದುಕೊಂಡ ಮೇಲೆ ಸಿ ಆ್ಯಂಡ್ ಡಿ ಪರ ಹೋರಾಟ ಮಾಡುತ್ತೇವೆ ಎಂದು ಜೇಸಿ ವೇದಿಕೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕಾನೂನತ್ಮವಾಗಿ ಯಾವುದೇ ಹೋರಾಟ ಮಾಡಿಲ್ಲ ಎಂದು ಹೇಳಿದರು. ಕೇಂದ್ರ ಬಿಜೆಪಿ ಸರ್ಕಾರದ ಕಸ್ತೂರಿ ರಂಗನ್ ವರದಿ ರಾಜ್ಯದಲ್ಲಿ ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ರಾಜ್ಯ ಸರ್ಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳು ಬಡವರು, ಕಾರ್ಮಿಕರು, ರೈತರು, ಶೋಷಿತರ ಮನೆಯ ಬೆಳಕಾಗಿದೆ. ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಬಿಜೆಪಿ ನಾಯಕರು, ಫಲಾನುಭವಿಗಳನ್ನು ಅವಮಾನ ಮಾಡುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ಜನರ ಹಕ್ಕು. ಅಂತಹ ಹಕ್ಕುಗಳನ್ನೇ ಅವಮಾನ ಮಾಡುವವರನ್ನು ಜನರು ಕ್ಷಮಿಸಬಾರದು. ಅವಮಾನಿಸಿದವರಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರ ಕುಟುಂಬದವರೇ ಫಲಾನುಭವಿಗಳಾಗಿದ್ದಾರೆ. ಅವರನ್ನು ಅವರುಗಳೇ ಅವಮಾನ ಮಾಡುತ್ತಿರುವುದು ಹಾಸ್ಯಸ್ಪದ ಎಂದು ಮೂದಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ವಿ.ಪಿ. ಶಶಿಧರ್, ಹಂಸ, ಉಸ್ತುವಾರಿಗಳಾದ ಗಫೂರ್, ಬ್ರಿಜೇಶ್, ಪಕ್ಷದ ನಾಯಕರಾದ ಟಿ.ಪಿ. ರಮೇಶ್, ಕೆ.ಎಂ. ಲೋಕೇಶ್, ಎಸ್.ಎಂ. ಚಂಗಪ್ಪ, ಸುರಯ್ಯ ಅಬ್ರಾರ್, ಕಾಂತರಾಜ್, ಆದಂ, ಶೀಲಾ ಡಿಸೋಜ, ಬಿ.ಇ. ಜಯೇಂದ್ರ, ಕೆ.ಎ. ಯಾಕೂಬ್ ಮತ್ತಿತರರು ಇದ್ದರು.