ಮನುಷ್ಯನ ಬದುಕು ಸಾರ್ಥಕವಾಗಬೇಕೆಂಬುದು ಧರ್ಮದ ಸಾರ

| Published : Oct 28 2025, 12:03 AM IST

ಸಾರಾಂಶ

ಮಾನವ ಎಷ್ಟು ವರ್ಷ ಬದುಕಿದರೂ ಒಂದು ದಿನ ಎಲ್ಲವನ್ನು ಬಿಟ್ಟು ಹೊರಡಲೇಬೇಕು. ಆದ್ದರಿಂದ ಮನುಷ್ಯನ ಹುಟ್ಟು ಮತ್ತು ಸಾವಿನ ಮಧ್ಯೆ ಅವನು ನಡೆಸುವ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ರಂಭಾಪುರಿ ಪೀಠದ ಬಾಳೆಹೊನ್ನೂರಿನ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು. ಬೂದಿಹಾಳ್‌ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಮಹಾಸ್ವಾಮಿಗಳು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಜ್ಞಾನ ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಉದಾರತನವನ್ನು ಮೆಚ್ಚಿಕೊಂಡು, ರೇವಣ್ಣನವರು ಶಾಸಕರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದರೂ, ಶಾಸಕರು ರೇವಣ್ಣನವರನ್ನು ಸ್ಮರಿಸಿರುವುದು ಅವರ ವಿಶಾಲಮನಸ್ಸಿನ ಉದಾಹರಣೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಾನವ ಎಷ್ಟು ವರ್ಷ ಬದುಕಿದರೂ ಒಂದು ದಿನ ಎಲ್ಲವನ್ನು ಬಿಟ್ಟು ಹೊರಡಲೇಬೇಕು. ಆದ್ದರಿಂದ ಮನುಷ್ಯನ ಹುಟ್ಟು ಮತ್ತು ಸಾವಿನ ಮಧ್ಯೆ ಅವನು ನಡೆಸುವ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ರಂಭಾಪುರಿ ಪೀಠದ ಬಾಳೆಹೊನ್ನೂರಿನ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಶ್ರೀ ಬೂದಿಹಾಳ್‌ ವಿರಕ್ತ ಮಠದಲ್ಲಿ ಶ್ರೀ ರಾಜಶೇಖರ ಮಹಾಸ್ವಾಮಿಗಳವರ ಗದ್ದಿಗೆಯ ಪ್ರಾರಂಭೋತ್ಸವ ಮತ್ತು ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮೋಪದೇಶ ನೀಡಿದ ಸ್ವಾಮೀಜಿ, ಮನುಷ್ಯ ಹುಟ್ಟಿದಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಆದರೆ ಸಾವಿನ ಸಮಯದಲ್ಲಿ ಉಸಿರು ಇರುವುದಿಲ್ಲ ಹೆಸರು ಮಾತ್ರ ಉಳಿಯುತ್ತದೆ. ಆದ್ದರಿಂದ ಮನುಷ್ಯನು ಒಳ್ಳೆಯ ಕಾರ್ಯಗಳ ಮೂಲಕ ತನ್ನ ಹೆಸರನ್ನು ಅಚ್ಚಳಿಯುವಂತೆ ಮಾಡಬೇಕು ಎಂದು ಹೇಳಿದರು.ಭಾರತ ದೇಶವು ಆಧ್ಯಾತ್ಮದ ತವರೂರು. ಇಂತಹ ವೈವಿಧ್ಯಮಯ ಧರ್ಮ ಮತ್ತು ಸಂಪ್ರದಾಯಗಳು ಬೇರೆ ಯಾವುದೇ ದೇಶದಲ್ಲಿಲ್ಲ. ಮನುಷ್ಯ ಸ್ವಾರ್ಥದಿಂದ ಬದುಕುತ್ತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಪ್ರತಿಯೊಬ್ಬನಲ್ಲಿಯೂ ಧರ್ಮ, ದೇಶದ ಬಗ್ಗೆ ಅಭಿಮಾನ ಬೆಳೆಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಇಂದಿನ ದಿನಗಳಲ್ಲಿ ಜನರು ಧರ್ಮ ಮತ್ತು ಜಾತಿಗಳ ಅಂತರದಿಂದ ದೂರವಾಗುತ್ತಿದ್ದಾರೆ. ಆದರೆ ಮನುಷ್ಯ ಧರ್ಮಕ್ಕೆ ಒಳಿತಾಗಲಿ ಎಂಬ ಸಂಕಲ್ಪವೇ ವಿಶ್ವ ಶಾಂತಿಯ ಮಾರ್ಗ ಎಂದು ತಿಳಿಸಿದರು.ಬೂದಿಹಾಳ್‌ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಮಹಾಸ್ವಾಮಿಗಳು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಜ್ಞಾನ ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಉದಾರತನವನ್ನು ಮೆಚ್ಚಿಕೊಂಡು, ರೇವಣ್ಣನವರು ಶಾಸಕರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದರೂ, ಶಾಸಕರು ರೇವಣ್ಣನವರನ್ನು ಸ್ಮರಿಸಿರುವುದು ಅವರ ವಿಶಾಲಮನಸ್ಸಿನ ಉದಾಹರಣೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಾಲೂಕಿನ ಜನರಿಗಾಗಿ ನನ್ನ ಜೀವ ಮುಡಿಪಾಗಿದೆ. ಈ ತಾಲೂಕಿನ ಅಭಿವೃದ್ಧಿಯೇ ನನ್ನ ಧ್ಯೇಯ. ಜನರ ವಿಶ್ವಾಸ ಮತ್ತು ಪ್ರೀತಿಯೇ ನನ್ನ ಶಕ್ತಿ. ಶಿಕ್ಷಣ, ಆರೋಗ್ಯ, ರಸ್ತೆ, ನೀರು, ಉದ್ಯೋಗ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ತರುವುದು ನನ್ನ ಪ್ರಮುಖ ಗುರಿ. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಲಭ್ಯಗಳು ತಲುಪುವಂತೆ ಮಾಡಲು ಸತತ ಪ್ರಯತ್ನಿಸುತ್ತಿದ್ದೇನೆ. ಅರಸೀಕೆರೆಯನ್ನು ಜಿಲ್ಲೆಯ ಮಾದರಿ ತಾಲೂಕಾಗಿಸುವುದು ನನ್ನ ಕನಸು, ಅದರ ಪೂರ್ಣತೆಗೆ ಎಲ್ಲ ರೀತಿಯ ಕೆಲಸಗಳಿಗೆ ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದರು. ಒಮ್ಮೆ ಅಭಿವೃದ್ಧಿ ಇಲ್ಲದ ತಾಲೂಕು ಎಂಬ ಹೆಸರು ಪಡೆದಿದ್ದ ಅರಸೀಕೆರೆ, ಇಂದು ಜಿಲ್ಲಾ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.“ಮಠಮಾನ್ಯರು ಸನಾತನ ಧರ್ಮದ ಇತಿಹಾಸವನ್ನು ಉಳಿಸಿಕೊಂಡಿದ್ದರಿಂದಲೇ ಹಿಂದುತ್ವ ಇಂದು ಜೀವಂತವಾಗಿದೆ. ಅರಸೀಕೆರೆಯು ಮಠಾಧೀಶರ ಬೀಡು ಸಿದ್ಧರ ನಾಡು. ಈ ನಾಡಿನಲ್ಲಿ ಧಾರ್ಮಿಕ ಚಿಂತನೆ ಮತ್ತು ಆಧ್ಯಾತ್ಮಿಕತೆ ತುಂಬಿ ತುಳುಕಿದೆ. ನಾವು ನಮ್ಮ ಇತಿಹಾಸವನ್ನು ಅರಿತುಕೊಂಡರೆ ವೈಕುಂಠವೇ ಈ ಭೂಮಿಯಲ್ಲಿ ಪ್ರತ್ಯಕ್ಷವಾಗುತ್ತದೆ,” ಎಂದು ಹೇಳಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯುವ ವಯಸ್ಸಿನಲ್ಲಿಯೇ ಉತ್ತಮ ಸ್ಥಾನಕ್ಕೆ ಏರಿದ್ದಾರೆ. ಯಡಿಯೂರಪ್ಪನವರ ರಾಜಕೀಯ ಸಂಸ್ಕಾರಕ್ಕೆ ಗೌರವ ನೀಡುತ್ತಾ, ವಿಜಯೇಂದ್ರ ಅವರು ಇನ್ನೂ ಉನ್ನತ ಹುದ್ದೆಗೆ ಏರಲಿ ಎಂಬುದು ನನ್ನ ಹಾರೈಕೆ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಮಠದ ಅಭಿವೃದ್ಧಿಗೆ ದೇವೇಗೌಡರವರ ಅನುದಾನದಿಂದ 13.5 ಲಕ್ಷ ನೀಡಲಾಗಿದೆ. ದಾಸೋಹ ಭವನದ ನಿರ್ಮಾಣಕ್ಕೂ ಅಗತ್ಯ ಅನುದಾನವನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಮಠಮಾನ್ಯರನ್ನು ಗುರುತಿಸಿದ ಒಬ್ಬ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪನವರು. ಕುಮಾರಸ್ವಾಮಿ, ದೇವೇಗೌಡ ಮತ್ತು ಯಡಿಯೂರಪ್ಪನವರು ಒಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು. ಇವರ ಸೇವೆ ಇನ್ನೂ ರಾಜ್ಯಕ್ಕೆ ಅಗತ್ಯವಿದೆ,” ಎಂದು ಹೇಳಿದರು.ದೊಡ್ಡಮೇಟಿಕುರ್ಕೆಯ ಶ್ರೀ ಬೂದಿಹಾಳ್‌ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮಿ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ 50 ಲಕ್ಷ ಅನುದಾನ ನೀಡಿದರು. ನಂತರ ಬೊಮ್ಮಾಯಿ ಅವರ ಸರ್ಕಾರದಿಂದ ಮತ್ತೊಂದು 50 ಲಕ್ಷ ದೊರಕಿತು. ವಿಜಯೇಂದ್ರ ಮತ್ತು ರುದ್ರಮುನಿ ಸ್ವಾಮಿಗಳ ಸಹಕಾರದಿಂದ 25 ಲಕ್ಷ ಅನುದಾನ ದೊರೆತಿದೆ. ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಮಠಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ನೆರವಾಗಿದ್ದಾರೆ ಎಂದು ಹೇಳಿದರು.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಕೆ.ವಿ. ನಿರ್ವಾಣಸ್ವಾಮಿ ಮಾತನಾಡಿ, ಈ ಮಠವು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಭಕ್ತರು ಸಹಭಾಗಿತ್ವ ನೀಡಿದರೆ ಮಠವು ಜನಸೇವೆಯ ಕೇಂದ್ರವಾಗುತ್ತದೆ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ತಿಪಟೂರು ಷಡಕ್ಷರಿ ಮಠದ ಶ್ರೀ ಡಾ. ರುದ್ರಮುನಿ ಮಹಾಸ್ವಾಮಿ, ವಾಗೀಶ್ ಪಂಡಿತಾರಾಧ್ಯರು, ಕೆ.ಪಿ. ಪ್ರಭುಕುಮಾರ್, ವತ್ಸಲ ಶೇಖರಪ್ಪ, ಕೆ.ಎನ್. ಶಿವಕುಮಾರ್‌, ಹೊಸಳ್ಳಿ ಮಲ್ಲಿಕಾರ್ಜುನಪ್ಪ, ಹೊಸೂರು ಗಂಗಾಧರ್, ಆರ್.ಎನ್. ಶೇಖರಪ್ಪ, ಅಣ್ಣಾಯಕನಹಳ್ಳಿ ವಿಜಯ್, ಅರೇಹಳ್ಳಿ ಅಮಿತ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.