ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಗ್ರಾಮೀಣ ಭಾರತದ ನಿಜವಾದ ರೂಪ, ಅದರ ಬವಣೆಗಳು, ಮಣ್ಣಿನ ಸುಗಂಧ, ಜನರ ಸರಳತೆ ಮತ್ತು ಸಂತೋಷದ ಮಜಲುಗಳು ಇವೆಲ್ಲವನ್ನೂ ಹತ್ತಿರದಿಂದ ಕಂಡು ಬಂದಿರುವ ಹಿರಿಯರು, ಇಂದು ನಾಗರೀಕತೆಯ ಹೊಸ ಹೊಳೆ ಮುಂದೆ ನಿಂತು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಬದುಕಿನ ಸತ್ವ ನಶಿಸುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಬೇಸರ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಪ್ರತಿಮಾ ಟ್ರಸ್ಟ್ ಮತ್ತು ಕಸಾಪ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಮೇಶ್ ತೆಂಕನಹಳ್ಳಿ ಅನುಭವ ಅಂತರಾಳದ ಕೃತಿ "ಕಪ್ಪು ಹಲ್ಲಿನ ಕಥೆ " ಕಾದಂಬರಿಯ ಎರಡನೇ ಅವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಮ್ಮೆ ಸಮಯ ನಿಧಾನವಾಗಿ ಸಾಗುತ್ತಿತ್ತು, ಬದಲಾವಣೆಗಳಿಗೆ ಗಾಢವಾದ ಅರ್ಥವಿತ್ತು. ಆದರೆ ೨೦೦೦ರ ಇಸವಿ ನಂತರ ನಮ್ಮ ಬದುಕಿನ ವೇಗವೇ ಬದಲುಗೊಂಡಿದೆ. ಬದಲಾವಣೆಯ ಈ ಬಿರುಸಿನಲ್ಲಿ ಮನುಷ್ಯನ ಮನಸ್ಥಿತಿಯೇ ಮಾರ್ಪಟ್ಟಿದೆ. ಅನೇಕರು ಗ್ರಾಮೀಣ ಬದುಕಿನ ಮೌಲ್ಯಗಳನ್ನು ಅರಿಯದೇ ಬದುಕುತ್ತಿರುವುದು ವಿಷಾದನೀಯ ಎಂದರು. ಇಂದಿನ ಆಧುನಿಕ ಕಾಲದಲ್ಲಿ ಅನೇಕ ಪುರುಷರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಮನುಷ್ಯನ ಮೌಲ್ಯ ಬಟ್ಟೆ, ಕಾರು, ಕಟ್ಟಡಗಳಲ್ಲಿ ಅಳೆಯಲಾಗುತ್ತಿದೆ. ತಾಯ್ತನದ ಮಹತ್ವವೂ ಮಸುಕಾಗುತ್ತಿರುವುದು ದೊಡ್ಡ ನಷ್ಟ ಎಂದು ಜೀವನಾನುಭವ ಹಂಚಿಕೊಂಡರು. ತಾಯಿ ಎಂಬ ಸ್ಥಾನವನ್ನು ಯಾರೂ ತುಂಬಲಾರರು. ಒಂದು ಕ್ಷಣದ ನಿರ್ಲಕ್ಷ್ಯಕ್ಕೂ ಮಗುವಿನ ಭವಿಷ್ಯ ಕತ್ತಲೆಯಾಗಬಹುದು. ಮನುಷ್ಯನನ್ನು ಮನುಷ್ಯನಾಗಿಸುವ ಮೊದಲ ಪಾಠ ಮನೆಯ ತಾಯಿಯ ಮಮತೆಯಲ್ಲಿದೆ ಎಂದು ಕಿವಿಮಾತು ಹೇಳಿದರು.
ಪೂರ್ವಿಕರ ಬದುಕು ನೆನಪಿಸಿಕೊಂಡ ಅವರು, ಬದುಕನ್ನೇ ಆಟವಾಗಿ ಆಡುವ ಸಾಮರ್ಥ್ಯವಿಟ್ಟಿದ್ದರು. ಮಣ್ಣಿನ ನಡುವೆಯೇ ಜೀವನದ ಮೌಲ್ಯವನ್ನು ಕಂಡಿದ್ದರು. ಆದರೆ ನಾವು ನಾಗರೀಕರು ಆಟವನ್ನೇ ಮರೆಯುತ್ತಿದ್ದೇವೆ. ಮಣ್ಣಿನಿಂದ ದೂರವಾಗಿ, ಮನುಷ್ಯರಿಂದ ದೂರವಾಗಿ ಯಂತ್ರಗಳ ನಡುವೆ ಬದುಕುತ್ತಿದ್ದೇವೆ ಎಂಬ ಆತಂಕ ವ್ಯಕ್ತಪಡಿಸಿದರು.ಇಂದಿನ ಹಳ್ಳಿಗಳೂ ಹಳ್ಳಿ ಆಗಿ ಉಳಿದಿಲ್ಲ! ಭೂತಕಾಲದ ಸುಗಂಧ ಕಳೆದು, ಹೊಸ ಜಗತ್ತಿನ ಗೊಂದಲದ ಮಧ್ಯೆ ಮಕ್ಕಳು ಬೆಳೆದಿದ್ದಾರೆ. ಅವರ ಬದುಕಿನ ನಿರ್ಧಾರಗಳು ಮತ್ತು ನಮ್ಮ ಹಾದಿಗಳು ಒಂದೇ ನಕ್ಷೆಯಲ್ಲಿ ಕಾಣುವುದು ಕಷ್ಟ. ಜೀವನದ ಗತಿಯೇ ಬದಲಾಗಿದೆ ಎಂದರು. ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನೂ ಅವರು ಸ್ಪರ್ಶಿಸಿ, ಒಂದು ಕೃತಿ ವಿಶ್ವಾಸ ಮೂಡಿಸಿದರೆ ಅದು ಗೆದ್ದಂತೇ. ನಾವೂ ಹೇಳುವ ಪದಗಳಿಗೆ ಜವಾಬ್ದಾರರು. ಸತ್ಯಸಂಧ, ಅರ್ಥಪೂರ್ಣ ಮಾತುಗಳು ಸಮಾಜ ರೂಪಿಸಬಲ್ಲವು ಎಂದು ಹೇಳಿದರು. ನಮ್ಮ ಮಾತೇ ನಮ್ಮ ಬೇರಿನ ಗುರುತು. ಈ ಭಾಷೆಯೇ ನಮ್ಮ ಬದುಕಿನ ಮಣ್ಣು. ಇದನ್ನು ಉಳಿಸುವುದು ಪ್ರತಿ ಪೀಳಿಗೆಯ ಕರ್ತವ್ಯ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿಶ್ಚಲನಂದನಾಥ ಸ್ವಾಮೀಜಿ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಸಾಹಿತಿ ಮತ್ತು ರಂಗಕರ್ಮಿ ಉಮೇಶ್ ತೆಂಕನಹಳ್ಳಿ, ಸಾಹಿತಿ ದಯಾ ಗಂಗನಘಟ್ಟ, ಚನ್ನರಾಯಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎನ್. ಲೋಕೇಶ್ ಇತರರು ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))