ಸರ್ವಜ್ಞರ ವಚನಗಳ ಸಾರ ಎಲ್ಲರೂ ಅಳವಡಿಸಿಕೊಳ್ಳಿ: ಮಂಜೇಗೌಡ

| Published : Feb 21 2025, 12:46 AM IST

ಸರ್ವಜ್ಞರ ವಚನಗಳ ಸಾರ ಎಲ್ಲರೂ ಅಳವಡಿಸಿಕೊಳ್ಳಿ: ಮಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ನೈತಿಕ, ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಸೇರಿಸಿದ್ದಾರೆ. ಅದನ್ನು ನೀವು ತಿಳಿದುಕೊಳ್ಳಬೇಕು. ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ವಜ್ಞರು ಸಹಸ್ರಾರು ವಚನಗಳನ್ನು ರಚಿಸಿದ್ದು, ಅವರ ವಚನಗಳಲ್ಲಿ ಇರುವ ಸಾರವನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ವಜ್ಞರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ. ಸಾಧನೆ ಮಾಡುವುದಕ್ಕೆ ಛಲ, ಮನಸ್ಸು ಹಾಗೂ ಆಸಕ್ತಿ ಇರಬೇಕು ಎಂದು ಹೇಳಿದರು.

ಸರ್ವಜ್ಞನ ಇತಿಹಾಸವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳುವುದು ಬಹಳ ಮುಖ್ಯ, ಅವರು ನಮಗೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಸರ್ವಜ್ಞ ನಂತಹವರು ನಮ್ಮ ಹೆಮ್ಮೆ ಅಂತಹವರ ಜಯಂತಿ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.

ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ನೈತಿಕ, ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಸೇರಿಸಿದ್ದಾರೆ. ಅದನ್ನು ನೀವು ತಿಳಿದುಕೊಳ್ಳಬೇಕು. ಮುಂದೆ ನಡೆಯುವ ಬಜೆಟ್‌ ನಲ್ಲಿ ಮಾತನಾಡಿ ಮೈಸೂರಿನಲ್ಲಿ ಸರ್ವಜ್ಞ ವೃತ್ತ ಮತ್ತು ಬಡಾವಣೆ ಮಾಡುವುದರ ಬಗ್ಗೆ ವಿಷಯ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಸರ್ವಜ್ಞ ಸರ್ವ ವ್ಯಾಪಿ ಎಂಬುದು ಸರ್ವ ಸತ್ಯ. ಅವರ ಒಂದು ಅಂಶವನ್ನಾದರೂ ಅಳವಸಿಡಿಕೊಂಡು ಸಾಧನೆ ಮಾಡಬೇಕು ಎಂದರು.

ಸರ್ವ ವ್ಯಾಪ್ತಿಯಾಗಿ ಎಲ್ಲದರ ಬಗ್ಗೆಯೂ ಸರ್ವಜ್ಞ ತಿಳಿದು ಬರೆದಿದ್ದಾರೆ. ಸಮಾಜದ ಅಂಕುಡೊoಕುಗಳನ್ನು ಹೇಳುವುದರ ಮೂಲಕ ಮೂಢನಂಬಿಕೆಯನ್ನು ತೊಡೆದುಹಾಕಿ ಇಡೀ ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಎಂದು ಅವರು ತಿಳಿಸಿದರು.

ಸರ್ವಜ್ಞ ಎಂಬ ಮಾತು ಎಲ್ಲರ ಬಾಯಲ್ಲಿ ಬರುವಂತ ವಿಚಾರ. ಇವರು ಶಿಕ್ಷಣದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಇವರು ಶಿಕ್ಷಣಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು, ಸಾರ್ವಜನಿಕರ ಸೇವೆಯಲ್ಲಿ ಅವರನ್ನು ಅವರು ತೊಡಗಿಸಿಕೊಂಡಿದ್ದಾರೆ ಎಂದರೆ ಅದು ಅವರು ಪಡೆದಂತ ಶಿಕ್ಷಣ, ಸಂಸ್ಕಾರ ಇವೆಲ್ಲವೂ ಸಹಕಾರ ಆಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಕರಾಗಬೇಕು ಎಂಬ ಕರೆಯನ್ನು ನಮಗೆ ಕೊಟ್ಟಿದ್ದಾರೆ ಅದನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಸರ್ವಜ್ಞ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ನಡೆದುಕೊಂಡು ಬಂದ ತತ್ವಗಳು ನಮಗೆ ಪಾಲನೆಯಾಗಬೇಕು. ಅವರ ಒಂದು ಅಂಶಗಳನ್ನು ನಮ್ಮಲ್ಲಿ ಮತ್ತೆ ನಮ್ಮ ಮಕ್ಕಳಲ್ಲಿ ಅಳವಡಿಸಬೇಕು. ಸರ್ವಜ್ಞರು ಎಲ್ಲರಿಗೂ ಮಾದರಿ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜ್ಞರ ಜಯಂತಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರ ಆದರ್ಶ ಮತ್ತು ತತ್ವಗಳನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಮಾಡಬೇಕು. ಬರಿ ಜಯಂತಿಗೆ ಸೀಮಿತವಾಗದೆ ಅವರ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಿ ಅವರ ವಚನಗಳು ಹಾಗೂ ಚಿಂತನೆಗಳ ಚರ್ಚೆ ಪ್ರಾರಂಭವಾಗುವಂತೆ ಮಾಡಬೇಕು. ಸರ್ವಜ್ಞನ ವಚನಗಳು ಸಾರ್ವಜನಿಕವಾಗಿ ಮುಂದಿನ ಜನಾಂಗಗಳಿಗೆ ತಲುಪಿಸಬೇಕು ಎಂದು ಅವರು ಹೇಳಿದರು.

ಮಡಿಕೇರಿ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ.ಸಿ. ರೇಣುಕಾಂಬ ಮಾತನಾಡಿ, ಕನ್ನಡ ವಾಗ್ದೇವಿ ತನ್ನ ಬಾಹುಗಳಿಂದ ಅನೇಕ ವ್ಯಕ್ತಿಗಳನ್ನು ರೂಪಿಸಿದ್ದಾರೆ. ಅಂತಹ ವಾಗ್ದೇವಿಯ ಪುತ್ರರಾಗಿರುವವರಲ್ಲಿ ಸರ್ವಜ್ಞರು ಒಬ್ಬ ಎಂದು ಹೇಳಿದರು.

ಸರ್ವಜ್ಞ ಎಂಬುದು ಹೆಸರಲ್ಲಿಯೇ ಅಡಗಿದೆ ಸರ್ವಜ್ಞ ಎಂದರೆ ದೇವರು. ಎಲ್ಲವನ್ನೂ ತಿಳಿದ ವ್ಯಕ್ತಿಯನ್ನು ದೇವರು ಎಂದು ಕರೆಯುತ್ತೇವೆ. ಇಂತಹ ರೀತಿಯ ನಾಮಾಂಕಿತ ಪ್ರಪಂಚದ ಯಾವುದೇ ರಾಷ್ಟ್ರದ ಕವಿಗಳಿಗೆ ಸಿಕ್ಕಿಲ್ಲ ನಮ್ಮ ಜನಾಂಗದ ಸರ್ವಜ್ಞ ಪಡೆದುಕೊಂಡಿದ್ದಾರೆ ಇದು ಸಮಾಜದಿಂದ ದೊರಕಿರುವಂತಹ ಬಿರುದು ಎಂದು ತಿಳಿಸಿದರು.

ಇವರು ಇಡೀ ಪ್ರಪಂಚದಲ್ಲಿಯೇ ಅಮರ ಕವಿ. ಕನ್ನಡ ಭಾಷೆ ಹಾಗೂ ಆಡು ಭಾಷೆಗೆ ಇವರ ಕೊಡುಗೆ ಅಪಾರವಾಗಿದೆ. ಇವರು ಜನತಾ ಕವಿಯಾಗಿದ್ದರು ಜನರ ಮಧ್ಯೆಯಲ್ಲಿಯೇ ಕನ್ನಡವನ್ನು ಉತ್ತುಂಗಕ್ಕೆ ಏರಿಸಿವರು ಕವಿ ಸರ್ವಜ್ಞ ಮಾತ್ರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸೋಮಶೇಖರ್, ಪಿಡಬ್ಲೂಡಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್‌ ಶ್ರೀನಿವಾಸ್, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್, ಶಾಲಿವಾಹನ ವಿವಿಧೋದ್ದೇಶ ಕೈಗಾರಿಕಾ ಸಂಘದ ಮಂಜುನಾಥ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಶಿವರಾಮ್ ಮೊದಲಾದವರು ಇದ್ದರು.