ಮರೆಯಾಗುತ್ತಿದೆ ನಾಗ ಪಂಚಮಿ ಹಬ್ಬದ ಸಡಗರ

| Published : Jul 28 2025, 12:32 AM IST

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ನಾಗರ ಪಂಚಮಿ ಹಬ್ಬದ ಗತ್ತು-ಗಮ್ಮತ್ತು ಹಾಗೂ ಅದರ ಮಹತ್ವ ಕಡಿಮೆಯಾಗುತ್ತಿದೆ. ಪಂಚಮಿ ಹಬ್ಬಕ್ಕಾಗಿ ತಿಂಗಳುಗಟ್ಟಲೆ ಕಾತರಿಸುತ್ತಿದ್ದ ಮಕ್ಕಳು, ಮಹಿಳೆಯರು ಈಗ ಹಬ್ಬ ಆಚರಿಸಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ನಾಡಿಗೆಲ್ಲ ಸಂಭ್ರಮ ತರುವ ನಾಗಪಂಚಮಿ ಹಬ್ಬವು ಮುಂಬರುವ ಗಣೇಶ ಚತುರ್ಥಿ, ವಿಜಯದಶಮಿ, ದೀಪಾವಳಿ ಮೊದಲಾದ ಹಬ್ಬಗಳಿಗೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯಿಂದ ಆರಂಭವಾಗುವ ಹಬ್ಬಗಳ ಸರಣಿಯು ಯುಗಾದಿ ಹಬ್ಬದ ವರೆಗೂ ಮುಂದುವರಿಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ನಾಗರ ಪಂಚಮಿ ಹಬ್ಬದ ಗತ್ತು-ಗಮ್ಮತ್ತು ಹಾಗೂ ಅದರ ಮಹತ್ವ ಕಡಿಮೆಯಾಗುತ್ತಿದೆ. ಪಂಚಮಿ ಹಬ್ಬಕ್ಕಾಗಿ ತಿಂಗಳುಗಟ್ಟಲೆ ಕಾತರಿಸುತ್ತಿದ್ದ ಮಕ್ಕಳು, ಮಹಿಳೆಯರು ಈಗ ಹಬ್ಬ ಆಚರಿಸಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಜನಜೀವನ ಆಧುನಿಕತೆಯ ಪರಿಣಾಮವಾಗಿ ತೀರಾ ಯಾಂತ್ರೀಕೃತವಾಗಿದ್ದು, ಜನರು ಹಬ್ಬಗಳನ್ನು ಆಚರಿಸಲು ಮೊದಲಿನ ಉತ್ಸಾಹ ತೋರುತ್ತಿಲ್ಲ, ಸಾಂಕೇತಿಕವಾದ ಹಬ್ಬ ಮಾತ್ರವಾಗಿದೆ. ಈ ಹಿಂದೆ ವಾರಕ್ಕೂ ಮೊದಲೇ ಮಕ್ಕಳಿಗಾಗಿ ಜೋಕಾಲಿ ಕಟ್ಟುತ್ತಿದ್ದರು. ಈಗ ಜೋಕಾಲಿ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮಾತ್ರ, ಅದು ಬೆರಳೆಣಿಕೆಯ ಜೋಕಾಲಿಗಳು ಕಂಡು ಬರುತ್ತಿವೆ.

ರೋಮಾಂಚನ ಸ್ಪರ್ಧೆಗಳು ಮಾಯ: ಜೋಕಾಲಿಯ ವಿರುದ್ಧ ದಿಕ್ಕಿನ ಗಿಡದ ಟೊಂಗೆಯಲ್ಲಿ ಒಣ ಕೊಬ್ಬರಿ ಬಟ್ಟಲು, ಉತ್ಪತ್ತಿ, ಉಂಡೆ ಮೊದಲಾದವುಗಳ ಮಾಲೆಯನ್ನು ಮಾಡಿ ತೂಗು ಬಿಡಲಾಗುತ್ತಿತ್ತು. ಯುವಕ, ಯುವತಿಯರು ಜೋಕಾಲಿ ಜೀಕುತ್ತಾ ಮರದ ಇನ್ನೊಂದು ತುದಿಗೆ ಕಟ್ಟಿರುವ ಸರವನ್ನು ಕಾಲಿನಿಂದ ಕಿತ್ತುಕೊಳ್ಳಬೇಕಿತ್ತು. ಇಂತಹ ರೋಮಾಂಚಕ ಸ್ಪರ್ಧೆಗಳು ಈಗ ಮರೆಯಾಗುತ್ತವೆ.

ಪಂಚಮಿ ಹಬ್ಬದಲ್ಲಿ ಯುವಕರ ತಂಡಗಳು ತಮ್ಮ ಓಣಿಯಲ್ಲಿ ಗುಂಪು ಗುಂಪಾಗಿ ಸೇರಿ ಹೊಟ್ಟೆಪ್ಪ (ಕಲ್ಲಿನ ಮೇಲೆ ಕಲ್ಲಿಟ್ಟು ಆಡುವುದು), ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಗದಿತ ಸ್ಥಳ ತಲುಪುವುದು ಮೊದಲಾದ ಗ್ರಾಮೀಣ ಹಾಗೂ ಜಾನಪದದ ಆಟಗಳಲ್ಲಿ ತೊಡಗುತ್ತಿದ್ದರು. ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಬಂದು ಹಬ್ಬದಾಟಗಳು ಅವನತಿಯ ಹಂಚಿನಲ್ಲಿ ಸರಿಯುವಂತಾಗಿದೆ.

ಕೆಲವು ವರ್ಷಗಳ ಹಿಂದೆ ಬಹುತೇಕ ಭಾಗಗಳಲ್ಲಿ ಒಂದುವಾರ ಮೊದಲೆ ಪಂಚಮಿ ಹಬ್ಬದ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಈಗ ಪಟ್ಟಣ ಹಾಗೂ ನಗರದಂತಹ ಪ್ರದೇಶಗಳಲ್ಲಿ ಅಡುಗೆ ಮನೆಗಳು ಭಣಗೂಡುತ್ತಿದ್ದು, ಹಬ್ಬಕ್ಕಾಗಿ ಮನೆಯಲ್ಲಿ ಬಗೆ ಬಗೆಯ ಉಂಡೆ, ತಿಂಡಿ, ತಿನಿಸು ತಯಾರಿಸುವುದು ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಎಲ್ಲವೂ ಸುಲಭವಾಗಿ ದೊರೆಯುತ್ತಿದ್ದು, ಜನರು ಸಿದ್ಧಪಡಿಸಿದ ಆಹಾರ ಪದಾರ್ಥಗಳಿಗೆ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ.

ನಮ್ಮ ಸಂಸ್ಕೃತಿ ಪ್ರತೀಕ: ಆಧುನೀಕರಣದ ಪ್ರಭಾವ ಹಾಗೂ ಮಿತಿ ಮೀರಿ ಮೊಬೈಲ್ ಬಳಕೆಯಿಂದ ಬಹುತೇಕ ಜನರು ಹಬ್ಬದಲ್ಲಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪರಂಪರೆಯ ಪ್ರತಿಬಿಂಬಗಳಾಗಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹನುಮನಾಳ ನಿವಾಸಿ ಉಮಾದೇವಿ ಪೊಲೀಸ್‌ಪಾಟೀಲ್‌ ಹೇಳಿದರು.

ನಾಗರ ಪಂಚಮಿ ಹಬ್ಬ ಕೆಲವು ವರ್ಷಗಳ ಹಿಂದೆ ತುಂಬಾ ಸಡಗರದ ಹಬ್ಬವಾಗಿತ್ತು. ಆದರೆ ಆಧುನಿಕತೆಯ ಪರಿಣಾಮ ಎಲ್ಲವೂ ಮರೆಯಾಗಿದೆ. ಜೋಕಾಲಿ ಆಟ, ಬೋಲ್ ಬಗರಿ ಆಟಗಳು ಸಹಿತ ಮರೆಯಾಗಿ ಹೊರಟಿದ್ದು ವಿಪರ್ಯಾಸ. ನಾಗಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿ ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕಿರುವುದು ಈಗಿನ ಪೀಳಿಗೆಯ ಕರ್ತವ್ಯವಾಗಿದೆ ಎಂದು ಕುಷ್ಟಗಿ ನಿವಾಸಿ ಶಾರದಾ ಶೆಟ್ಟರ ಹೇಳಿದರು.