ರಾಜ್ಯದಲ್ಲಿ ಸಹಕಾರ ರಂಗದ ಅಸ್ತಿತ್ವ ಕ್ಷೀಣ

| Published : Feb 19 2025, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಸಹಕಾರಿ ಚಳುವಳಿಗೆ ನಾಂದಿ ಹಾಡಿದ್ದೇ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಇಂದು ಕರ್ನಾಟಕದಲ್ಲಿ ಸಹಕಾರಿ ರಂಗ ಅಸ್ತಿತ್ವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಚಿವ ಶಿವಾನಂದ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಸಹಕಾರಿ ಚಳುವಳಿಗೆ ನಾಂದಿ ಹಾಡಿದ್ದೇ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಇಂದು ಕರ್ನಾಟಕದಲ್ಲಿ ಸಹಕಾರಿ ರಂಗ ಅಸ್ತಿತ್ವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಚಿವ ಶಿವಾನಂದ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ನಗರದಲ್ಲಿ ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ, ಅರ್ಬನ್ ಬ್ಯಾಂಕ್‌ ಹಾಗೂ ಕ್ರೆಡಿಟ್, ಸೌಹಾರ್ದ ಸಹಕಾರಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಭವನ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಈ ನಾಡಿನಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಸಹಕಾರಿ ಸಂಘದಿಂದ ಪ್ರಾರಂಭಗೊಂಡಿವೆ. ಆದರೆ ದುರ್ದೈವ ಆ ಸಕ್ಕರೆ ಕಾರ್ಖಾನೆಗಳಲ್ಲಿರುವ ಅನೇಕರು ಅವುಗಳನ್ನು ಕ್ರಮೇಣ ಮುಚ್ಚಿ ತಮ್ಮದೆ ಆದ ಸ್ವಂತ ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಹಕಾರಿ ರಂಗ ಇಲ್ಲದಿದ್ದರೆ ಯಾವ ಕ್ಷೇತ್ರವು ಅಭಿವೃದ್ದಿಯಾಗುತ್ತಿರಲಿಲ್ಲ. ಭಾರತ ಕ್ಷೀರ ಕ್ರಾಂತಿ ಮಾಡಿದೆ ಎಂದರೆ ಅದು ಸಹಕಾರಿ ಚಳುವಳಿಯಿಂದ. ಭಾರತದಲ್ಲಿ ಮೊದಲು ಸಹಕಾರಿ ಚಳುವಳಿ ಪ್ರಾರಂಭಗೊಂಡಿದ್ದು ಕರ್ನಾಟಕದಿಂದಲೇ. ಪ್ರಸ್ತುತ ಉತ್ತರಪ್ರದೇಶ, ಮಹಾರಾಷ್ಟ್ರ ಕರ್ನಾಟಕಕ್ಕಿಂತಲೂ ಮುಂದುವರಿದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಹಕಾರಿ ತತ್ವದ ಮೇಲೆ ನಂಬಿಕೆ ಇಲ್ಲದ್ದರಿಂದ ಈ ಕ್ಷೇತ್ರ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಅಖಂಡ ಸಿಂದಗಿ ತಾಲೂಕಿನಲ್ಲಿ 362 ಸಹಕಾರಿ ಸಂಘಗಳಿವೆ. ಅವರಿಗೆಲ್ಲ ತರಬೇತಿ, ಸಹಕಾರಿ ಸಪ್ತಾಹ ಸೇರಿದಂತೆ ಅನೇಕ ಸಹಕಾರಿ ಚಟುವಟಿಕೆಗಳಿಗೆ ಸೂಕ್ತ ಜಾಗ ಇರಲಿಲ್ಲ. ಅದನ್ನು ಮನಗಂಡು ಸಿಂದಗಿಯಲ್ಲಿ ಸಹಕಾರಿ ಭವನ ನಿರ್ಮಾಣ ಮಾಡುವ ಭರವಸೆಯನ್ನು ನೀಡಿದ್ದೆ. ಅದು ಇಂದು ಕಾರ್ಯರೂಪಕ್ಕೆ ಬಂದಿದ್ದು, ಮುಂದಿನ ಒಂದು ವರ್ಷದಲ್ಲಿ ಭವನ ನಿರ್ಮಾಣವಾಗಲಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮ ಎಂದು ಸಂತಸ ವ್ಯಕ್ತಪಡಿಸಿದರು.

ಸಾರಂಗಮಠ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ಸಹಕಾರಿ ಕ್ಷೇತ್ರ ಪವಿತ್ರವಾಗಿದ್ದು, ಈ ಕ್ಷೇತ್ರವು ಇನ್ನು ಹೆಚ್ಚು ಹೆಚ್ಚು ಯೋಜನೆಗಳನ್ನು ಮಾಡಬೇಕು ಎಂದು ಆಶಿಸಿದರು.

ಈ ವೇಳೆ ಸಹಕಾರಿ ಸಮಿತಿ ಅಧ್ಯಕ್ಷ ರಾಮರಾವ ನಾಯಕ, ಶ್ರೀಮಂತ ಇಂಡಿ, ಶಿವಕುಮಾರ ಗುಂದಗಿ ಮಾತನಾಡಿದರು. ಆಲಮೇಲ ಪಪಂ ಅಧ್ಯಕ್ಷ ಸಾಧಿಕ ಸುಂಬಡ, ಕೆಡಿಪಿ ಸದಸ್ಯ ಮಹಾನಂದ ಬಮ್ಮಣ್ಣಿ, ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನೀಡೋಣಿ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ ಇದ್ದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಪ್ರಕಾಶ ಕೋರಿ, ರವಿ ನಾಗೂರ, ವಿವೇಕಾನಂದ ಪಾಟೀಲ, ಸುರೇಶ ಮಲಗೊಂಡ, ಯಶವಂತ್ರಾಯಗೌಡ ರೋಗಿ, ಸಾಯಬಣ್ಣ ಬಾಗೇವಾಡಿ, ಅಪ್ಪಸಾಹೇಬ ಪಟ್ಟಣಶೆಟ್ಟಿ, ನೀಲಕಂಠ ಗುಣಾರಿ, ಮಲ್ಲನಗೌಡ ಪಾಟೀಲ, ಬಸವಂತ್ರಾಯ ಬಗಲೂರ, ಪ್ರತಿಭಾ ಚಳ್ಳಗಿ, ಜಯಶ್ರೀ ಹದನೂರ, ಶೈಲಜಾ ಸ್ಥಾವರಮಠ ಸೇರಿ ಅಖಂಡ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರು ಮತ್ತು ನೌಕರರು ಇದ್ದರು.

18ಎಸ್‌ಎನ್‌ಡಿ01: ಪಟ್ಟಣದ ಬಂದಾಳ ರಸ್ತೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ, ಅರ್ಬನ್ ಬ್ಯಾಂಕು ಹಾಗೂ ಕ್ರೆಡಿಟ್, ಸೌಹಾರ್ದ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸಹಕಾರ ಭವನ ಕಟ್ಟಡದ ಭೂಮಿ ಪೂಜೆಯನ್ನು ಸಚಿವ ಶಿವಾನಂದ ಪಾಟೀಲ ನೆರವೇರಿಸಿದರು.--------

ಕೋಟ್‌.........

ಭಾರತ ಎಲ್ಲ ಬೆಳೆಗಳನ್ನು ಬೆಳೆಯುವ ಪವಿತ್ರ ಭೂಮಿ. ಆದರೆ, ನಮ್ಮ ರೈತರು ವೈಜ್ಞಾನಿಕ ಕೃಷಿ ಪದ್ದತಿ ಅನುಸರಿಸುತ್ತಿಲ್ಲ. ಹೀಗಾಗಿ, ಕೃಷಿ ಕ್ಷೇತ್ರದಲ್ಲಿ ನಷ್ಟ ಎದುರಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಭೂಮಿ ಬರಡು ನಿಜ, ಆದರೆ ಮುಂದೆ ಈ ಭೂಮಿ ಬಂಗಾರದ ಕಡ್ಡಿಯಾಗಲಿದೆ. ಈ ಹಿಂದೆ ಶೇ 60, 70 ರಷ್ಟಿದ್ದ ಒಕ್ಕಲುತನ ಇಂದು ಶೇ.20ಕ್ಕೆ ಇಳಿದಿರುವುದು ದುರಂತ.

- ಶಿವಾನಂದ ಪಾಟೀಲ, ಸಕ್ಕರೆ ಸಚಿವ