ಚಿಕ್ಕಮಗಳೂರುರಾಜ್ಯ ಸರ್ಕಾರ ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಜೊತೆಗೆ ಶೈಕ್ಷಣಿಕವಾಗಿ ಗಟ್ಟಿಗೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

- ಸಾದರಹಳ್ಳಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಸರ್ಕಾರ ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಜೊತೆಗೆ ಶೈಕ್ಷಣಿಕವಾಗಿ ಗಟ್ಟಿಗೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾದರಹಳ್ಳಿ ಗ್ರಾಮದಲ್ಲಿ ಊರ ಮುಂದಿನ ಕೆರೆಯಿಂದ ಬೀರ ಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯಿಂದ ₹50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಬಳಕೆ ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ ಈ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು ಬಿಜೆಪಿ ಇಡೀ ದೇಶದ ಚುನಾವಣೆಗಳನ್ನು ನಡೆಸುತ್ತಿದೆ. ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್ ಮುಂತಾದ ಮಹಾ ಪುರುಷರ ವಿಚಾರಧಾರೆ ಮತ್ತು ಆದರ್ಶ ಕನಸುಗಳನ್ನು ರಾಜ್ಯ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದರು.ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡಿದವರನ್ನು ಜನತೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಎಂಬುದನ್ನು ಮನಗಾಣಬೇಕು. ಕಾಂಗ್ರೆಸ್ ಸರ್ಕಾರಕ್ಕೆ 138 ಸ್ಥಾನಗಳನ್ನು ನೀಡಿ ಅಧಿಕಾರ ನೀಡಿದ್ದಾರೆ. ಇದಕ್ಕಾಗಿ ಸರ್ಕಾರ ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಬಡಜನರ ಪರವಾಗಿ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಯಲ್ಲಿ ಹಿಂದೆ ಬೀಳದೆ ಸಾಧನೆ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.ಸಾದರಹಳ್ಳಿಯಿಂದ ಕ್ಯಾತನಬೀಡುವರೆಗೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಗ್ರಾಮಸ್ಥರು ಮನವಿ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ₹60 ಲಕ್ಷ ಮೀಸಲಿಟ್ಟಿದ್ದು, ಸಧ್ಯದಲ್ಲೇ ರಸ್ತೆ ಅಭಿವೃದ್ಧಿಗೆ ಕಾರ್ಯ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದರು.ಕ್ಷೇತ್ರದ ಹಲವಾರು ರಸ್ತೆಗಳು ಹಾಗೂ ಚಿಕ್ಕಮಗಳೂರು ನಗರದಲ್ಲಿ ಮಾರ್ಚ್‌ 31 ರೊಳಗೆ ಅಭಿವೃದ್ಧಿ ಕಾರ್ಯ ಪೂರ್ಣ ಗೊಳ್ಳಲಿವೆ. ಅದೇ ರೀತಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದ್ದು, ಬಹುತೇಕ ರಸ್ತೆಗಳ ಅಭಿವೃದ್ಧಿ ಕಾರ್ಯ ಇದೇ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಂಜಿನಿಯರ್‌ಗಳು ಶಾಶ್ವತವಾಗಿ ಉಳಿಯುವ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಒತ್ತಡ ಹಾಕಿ ಕೆಲಸ ಮಾಡಿಸಬೇಕು ಎಂದು ಸೂಚಿಸಿದ ಅವರು, ಹಿಂದೂ ದೇವಾಲಯ ಮತ್ತು ಸಮುದಾಯ ಭವನಗಳಿಗೆ ₹7 ಕೋಟಿ ವ್ಯಯಿಸಿ ಕ್ಷೇತ್ರದಲ್ಲಿ ಇರುವ 34 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಶಾಸಕ ಎಚ್.ಡಿ.ತಮ್ಮಯ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಅತಿವೃಷ್ಟಿ ಹಾನಿಯಿಂದ ಸಂಪೂರ್ಣ ಕೊಚ್ಚಿ ಹೋಗಿದ್ದ ಗ್ರಾಮದ ಸೇತುವೆ ನಿರ್ಮಾಣಕ್ಕೆ ₹10 ಲಕ್ಷವನ್ನು ಭೂ ಸೇನಾ ನಿಗಮಕ್ಕೆ ನೀಡಿದ್ದರು. ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂಬ ಮನವಿ ಮೇರೆಗೆ ₹ 50 ಲಕ್ಷ ವೆಚ್ಚದಲ್ಲಿ ಉತ್ತಮ ಸೇತುವೆ ನಿರ್ಮಾಣ ಮಾಡಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಗೌಜ ಗ್ರಾಪಂ ಅಧ್ಯಕ್ಷೆ ಮಂಜುಳಾ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಗ್ರಾಮಸ್ಥರಾದ ಬೀರೇಗೌಡ, ಮಲ್ಲೇಗೌಡ, ಈಶ್ವರಯ್ಯ, ನಾಗಣ್ಣ, ಜಗದೀಶ್, ಪರಮೇಶ್, ಲೋಕಯ್ಯ, ಹುಲಿಯಪ್ಪ, ಕಾಂತರಾಜ್, ಮಧು, ಶಶಿಧರ್, ಸಿದ್ದೇಗೌಡ, ಸಿದ್ದೇಶ್ ಹಾಗೂ ಎಇಇ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಶಿವಕುಮಾರ್ ಸ್ವಾಗತಿಸಿದರು. 16 ಕೆಸಿಕೆಎಂ 1

ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

----------------------------------