ಎಲ್ಲೇ ಮೀರಿದ ಆಟೋಗಳ ಆಟಾಟೋಪ

| Published : Feb 17 2025, 01:30 AM IST

ಸಾರಾಂಶ

ನಗರದಲ್ಲಿ ಆಟೋ ಚಾಲಕರ ಆಟಾಟೋಪ ಮಿತಿಮೀರಿದ್ದು, ಲಂಗು ಲಗಾಮು ಹಾಕುವವರೇ ಇಲ್ಲ ಎಂಬುವುದಕ್ಕೆ ಗೋವಾ ಪೋಂಡಾದ ಮಾಜಿ ಶಾಸಕ ಲಾವೋ ಮಾಮಲೇದಾರ ಸಾವಿನ ಪ್ರಕರಣವೇ ಸಾಕ್ಷಿಯಾಗಿದ್ದು, ಕಡಿವಾಣ ಹಾಕಬೇಕಾದ ಪೊಲೀಸ್‌ ಇಲಾಖೆಯ ಜಾಣಕುರುಡತನಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

ಸದಾನಂದ ಮಜತಿ

ಕನ್ನಡಪ್ರಭ ವಾರ್ತೆ ಬೆಳಗಾವಿನಗರದಲ್ಲಿ ಆಟೋ ಚಾಲಕರ ಆಟಾಟೋಪ ಮಿತಿಮೀರಿದ್ದು, ಲಂಗು ಲಗಾಮು ಹಾಕುವವರೇ ಇಲ್ಲ ಎಂಬುವುದಕ್ಕೆ ಗೋವಾ ಪೋಂಡಾದ ಮಾಜಿ ಶಾಸಕ ಲಾವೋ ಮಾಮಲೇದಾರ ಸಾವಿನ ಪ್ರಕರಣವೇ ಸಾಕ್ಷಿಯಾಗಿದ್ದು, ಕಡಿವಾಣ ಹಾಕಬೇಕಾದ ಪೊಲೀಸ್‌ ಇಲಾಖೆಯ ಜಾಣಕುರುಡತನಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.ಆಟೋ ಚಾಲಕರ ನಿಯಂತ್ರಣಕ್ಕೆ ಕಾಯ್ದೆ ಕಾನೂನುಗಳೇ ಇಲ್ಲದಂತಾಗಿದೆ. ಇವರು ಹೇಳಿದ್ದೇ ದರ ಎಂಬಂತಾಗಿದೆ. ಗ್ರಾಹಕರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿದ್ದಾರೆ. ಹೊರ ರಾಜ್ಯ, ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದವರಿಗೆ ನಗರದ ಸಾರಿಗೆ ವ್ಯವಸ್ಥೆಯ ಪರಿಚಯವೇ ಇರುವುದಿಲ್ಲ. ಹಾಗಾಗಿ ಹೊರಗಿನಿಂದ ಬಂದ ಬಹುತೇಕರು ಆಟೋರೀಕ್ಷಾ ಅವಲಂಬಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಮನಬಂದಂತೆ ದರ ಹೇಳಿ ದಂಗು ಬಡಿಸುತ್ತಿದ್ದು, ಪ್ರಯಾಣಿಕರು ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ.ಮಿತಿಮೀರಿದೆ ದುಂಡಾವರ್ತನೆ:

ನಗರದಲ್ಲಿ ಆಟೋ ಚಾಲಕರ ದುಂಡಾವರ್ತನೆ ಮಿತಿಮೀರಿದೆ. ಅವರು ಹೇಳಿದ ದರಕ್ಕೆ ಒಪ್ಪದೆ ಚೌಕಾಸಿ ಮಾಡಿದರೇ ಪ್ರಯಾಣಿಕರ ಜತೆಗೆ ಅಸಭ್ಯವಾಗಿ ವರ್ತಿಸುತ್ತಾರೆ. ದೊಡ್ಡವರು ಸಣ್ಣವರು ಎನ್ನದೇ ಏಕವಚನದಲ್ಲಿ ಸಂಬೋಧಿಸುತ್ತಾರೆ. ನಯವಿನಯ ಎಂಬುವುದೇ ಇವರಿಗೆ ದೂರದ ಮಾತು. ಗ್ರಾಹಕರೇನಾದರೂ ತಿರುಗಿ ಮಾತನಾಡಿದರೇ ಚಾಲಕರೆಲ್ಲ ಸೇರಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವುದು ಎಲ್ಲರ ಅನುಭವಕ್ಕೆ ಬಂದೇ ಬರುವುದು. ರಕ್ಷಣೆಗೆಂದು ಪೊಲೀಸ್‌ ಇಲಾಖೆ ಮೊರೆ ಹೋಗಬೇಕೆಂದರೇ ಸದ್ಯ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಹೆದರುವ ಪರಿಸ್ಥಿತಿಯೂ ಇಲ್ಲ, ಇವರ ಉಪಟಳಕ್ಕೆ ಪೊಲೀಸರು ಕೂಡ ಬೇಸತ್ತು ಹೋಗಿದ್ದಾರೆ. ಆಟಾಟೋಪಕ್ಕೆ ಮಾಜಿ ಶಾಸಕ ಬಲಿ

ಶನಿವಾರ ಆಟೋ ಚಾಲಕರ ಇಂತಹ ದುರ್ವರ್ತನೆ ಗೋವಾದ ಮಾಜಿ ಶಾಸಕರ ಜೀವವನ್ನೇ ಬಲಿ ಪಡೆಯಿತು. ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೂ ಮಾಮಲೆದಾರ ಅವರ ಕಾರು ಚಾಲಕ ಆಟೋಗೆ ಸ್ವಲ್ಪ ತಾಗಿಸಿದ್ದರಿಂದ 22 ವಯಸ್ಸಿನ ಚಾಲಕ 69 ವಯಸ್ಸಿನ ಮಾಜಿ ಶಾಸಕರ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದರಿಂದ ಅವರು ಆಘಾತವಾಗಿ ಸ್ವಲ್ಪ ದೂರ ಸಾಗುವಷ್ಟರಲ್ಲಿ ಕುಸಿದುಬಿದ್ದು ಮೃತಪಟ್ಟಿರುವುದು ಇವರ ವರ್ತನೆಗೆ ಸಾಕ್ಷಿಯಾಗಿದೆ.

ಬೆಳಗಾವಿಯಲ್ಲಿ ಆಟೋ ಚಾಲಕರ ಗುಂಡಾವರ್ತನೆ ಮಿತಿಮೀರಿದೆ. ಅವರು ಹೇಳಿದ್ದೇ ದರ ಆಗಿದೆ. ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಪ್ರಯಾಣಿಕರ ಜತೆಗೆ ಸೌಜನ್ಯದ ಮಾತು ದೂರ, ವಾಗ್ವಾದಕ್ಕಿಳಿದರೇ ಗುಂಪು ಕಟ್ಟಿಕೊಂಡು ಹಲ್ಲೆಗೆ ಮುಂದಾಗುತ್ತಾರೆ. ಇಂತಹ ಘಟನೆಗಳು ಸಾಮಾನ್ಯವಾಗಿವೆ. ಬೆಳಗಾವಿಯಲ್ಲಿ ಆಟೋ ರೀಕ್ಷಾ ಹತ್ತುವುದಕ್ಕೆ ಭಯ ಆಗುತ್ತದೆ. ಹೆಲ್ಮೆಟ್‌ ಹಾಕದ, ದಾಖಲೆ ಇಲ್ಲ ಎಂಬ ನೆಪ್ಪದಲ್ಲಿ ಪ್ರತಿದಿನ ನೂರಾರು ಪ್ರಯಾಣಿಕರಿಗೆ ದಂಡ ಹಾಕುವ ಪೊಲೀಸರು ಆಟೋ ಚಾಲಕರು ಎಲ್ಲ ಕಾನೂನು ಉಲ್ಲಂಘಿಸಿದರು ಜಾಣಮೌನ ವಹಿಸುತ್ತಾರೆ.

-ಅಭಿಷೇಕ ಪಾಟೀಲ, ಖಾಸಗಿ ನೌಕರ.