ಕಣ್ಮನ ಸೆಳೆಯುತ್ತಿರುವ ಚೈತ್ರೋತ್ಸವ

| Published : Jan 28 2025, 12:46 AM IST

ಕಣ್ಮನ ಸೆಳೆಯುತ್ತಿರುವ ಚೈತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಗಣ ರಾಜ್ಯೋತ್ಸವದ ಅಂಗವಾಗಿ ಚೈತ್ರೋತ್ಸವದ ಮಾದರಿಯಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿ ಕೊಂಡಿರುವ ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿದೆ

ಜಿಲ್ಲಾ ಆಟದ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ, ಸಂಸತ್‌ ಭವನ, ಸಿರಿಧಾನ್ಯದಿಂದ ತಯಾರಿಸಿರುವ ಕಲಾಕೃತಿಗಳು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಣ ರಾಜ್ಯೋತ್ಸವದ ಅಂಗವಾಗಿ ಚೈತ್ರೋತ್ಸವದ ಮಾದರಿಯಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿ ಕೊಂಡಿರುವ ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿದೆ.ಆಟದ ಮೈದಾನದ ಆಫೀಸರ್ಸ್‌ ಕ್ಲಬ್‌ನ ಮಗ್ಗಲು ಈಗ ಹಚ್ಚಹಸುರಿನ ಸಸ್ಯ ಲೋಕದಿಂದ ಕಂಗೊಳಿಸುತ್ತಿದೆ. ವಿಸ್ಮಯ ಮೂಡಿಸುವಂತಹ ಹೂವಿನ ಚಿತ್ತಾರಗಳು ಮೂಡಿದ್ದು ನೋಡುಗರ ಮನತಣಿಸುತ್ತಿವೆ. ಮುಖ್ಯದ್ವಾರದಲ್ಲಿ ಸಂವಿಧಾನದ ಪೀಠಿಕೆ ಹಾಕಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಸಿರಿಧಾನ್ಯಗಳನ್ನು ಬಳಸಿ ನಿರ್ಮಿಸಲಾಗಿದೆ. ತೋಟಗಾರಿಕಾ ಪಿತಾಮಹ ಎಂ.ಎಚ್. ಮರೀಗೌಡ ಅವರ ಭಾವಚಿತ್ರಕ್ಕೆ ದ್ರಾಕ್ಷಿ ಹಣ್ಣಿನಿಂದ ಅಲಂಕರಿಸಲಾಗಿದೆ. ಕೆಂಪು ಮೆಣಸನ ಕಾಯಿ ಬಳಸಿ ನಿರ್ಮಿಸಿರುವ ಗರುಡ ಪಕ್ಷಿ ಕೌತುಕ ಮೂಡಿಸುತ್ತಿದೆ.ಸಿರಿಧಾನ್ಯಗಳಿಗೆ ಪ್ರಧಾನ್ಯತೆ ನೀಡಬೇಕು ಎಂಬ ಸಂದೇಶ ಸಾರಲು ಸಾಮೆ, ಕೊರಲೆ, ಸಜ್ಜೆ, ಬರಗು, ಊರಲು, ಜೋಳ , ರಾಗಿ, ಹಾರಕ, ನವಣೆ ಸಿರಿಧಾನ್ಯಗಳನ್ನು ಸಿಂಗರಿಸಿ ಇಡಲಾಗಿದೆ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಮೀನಿಗೆ ಗಾಳ ಹಾಕುತ್ತಿರುವ ದೃಶ್ಯ, ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಹೂವಿನಿಂದ ಒಡಮೂಡಿವೆ. ಅಲ್ಲಿ ಕೀಟ ಪ್ರಪಂಚ ತೆರೆದಿಡಲಾಗಿದೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರ ಭಾವಚಿತ್ರಗಳು ಕಲ್ಲಂಗಡಿ ಹಣ್ಣಿನಲ್ಲಿ ಮನೋಜ್ಞವಾಗಿ ಮೂಡಿಬಂದಿವೆ. ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಚಿತ್ರನಟಿ ಲೀಲಾವತಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ ಮತ್ತಿತರೆ ಗಣ್ಯರ ಕಲಾಕೃತಿಗಳು ಹಣ್ಣಿನಲ್ಲಿ ಕಡೆಯಲಾಗಿದೆ.ಬಾಳೆ ಕಂದನ್ನು ಬಳಸಿ ಹಾಯಿ ದೋಣಿ, ತರಕಾರಿಗಳನ್ನು ಬಳಸಿಕೊಂಡು ಹಳೆ ಸಂಸತ್ ಭವನದ ಮಾದರಿ ಬೆರಗುಗೊಳಿಸುತ್ತಿದೆ. ಪುಷ್ಪಗಳಿಂದ ನಿರ್ಮಿಸಿರುವ ತಾಯಿ ಮಗುವಿನ ಚಿತ್ರ, ಬಾತು, ಮನೆ ಮತ್ತಿತರೆ ಅನೇಕ ಕಲಾ ಕೃತಿಗಳು ಪುಷ್ಪಲೋಕದಿಂದ ತಲೆ ಎತ್ತಿ ನಿಂತಿದ್ದು ತರಹೇವಾರಿ ಹೂಕುಂಡಗಳು ಮನಸ್ಸಿಗೆ ಮುದನೀಡುತ್ತಿವೆ. ಒಮ್ಮೆ ಫಲಪುಷ್ಪ ಪ್ರದರ್ಶನದ ಒಳಾಂಗಣಕ್ಕೆ ಕಾಲಿಟ್ಟರೆ ಹೊರಗೆ ಬರಲು ಮನಸ್ಸೇ ಬಾರದಷ್ಟು ಸೋಜಿಗ ಮೂಡಿಸುವಂತಹ ಪುಷ್ಪ ಕಲಾಕೃತಿಗಳಿವೆ.ಪತ್ರಕರ್ತ, ಕಲಾವಿದ ಪಿ.ರಾಜೇಶ್ ತಯಾರಿಸಿರುವ ಗಾರುಡಿ ಬೊಂಬೆಗಳು, ಚೋಮನ ಮುಖವಾಡಗಳು ಗಮನ ಸೆಳೆಯುತ್ತಿವೆ. ಸಾರ್ವಜನಿಕರಿಗಾಗಿ ರುಚಿ, ಶುಚಿಯಾದ ಬಗೆ ಬಗೆಯ ಆಹಾರದ ಸ್ಟಾಲ್‌ಗಳಿದ್ದು ತಮಗಿಷ್ಟವಾದ ತಿಂಡಿ ತಿನಿಸನ್ನು ಸವಿಯಲು ಸದಾವಕಾಶವಿದೆ.ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಜತೆಗೆ ಶಾಸಕರಾದ ಎಚ್.ಡಿ.ತಮ್ಮಯ್ಯ, ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿವಿಧ ನಿಗಮ ಮಂಡಳಿಯ ಡಾ.ಅಂಶುಮಂತ್, ಹರೀಶ್, ಶಿವಾನಂದ ಸ್ವಾಮಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. 27 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಚೈತ್ರೋತ್ಸವದಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿರುವ ತೇಜಸ್ವಿ ಮೀನಿಗೆ ಗಾಳ ಹಾಕುತ್ತಿರುವ ದೃಶ್ಯ.