ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮನುಷ್ಯನಿಗೆ ಹೃದಯ ಎಷ್ಟು ಮುಖ್ಯವೋ ಕಣ್ಣು ಕೂಡ ಅಷ್ಟೇ ಮುಖ್ಯ. ಸಣ್ಣಪುಟ್ಟ ದೋಷಗಳು ಕಂಡಲ್ಲಿ ಉಚಿತ ನೇತ್ರಚಿಕಿತ್ಸಾ ಶಿಬಿರಗಳಲ್ಲಿ ಭಾಗವಹಿಸಿ ಚಿಕಿತ್ಸೆಯನ್ನು ಪಡೆಯಿರಿ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ತಿಳಿಸಿದರು.ನಗರದ 19ನೇ ವಾರ್ಡಿನ ಬುಧವಾರ ಲಿಟ್ಲ್ ಏಂಜಲ್ ನರ್ಸರಿ ಸ್ಕೂಲ್ ಮತ್ತು ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಿದ್ದು, ಕ್ಷೇತ್ರದ ಮತದಾರರು ಕಣ್ಣಿನ ಸಮಸ್ಯೆಯಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ನಿರಂತರವಾಗಿ ಕಣ್ಣಿನ ಸಮಸ್ಯೆ ಇರುವಂತವರಿಗೆ ಉಚಿತವಾಗಿ ಸೇವೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಈಗಾಗಲೇ ಕ್ಷೇತ್ರದ ಬಹುತೇಕ ಕಳ್ಳಿಗಳಲ್ಲಿ ಶಿಬಿರವನ್ನು ನಡೆಸಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ, ಏಳು ಸಾವಿರ ಜನರಿಗೆ ಕಣ್ಣಿನ ಕನ್ನಡಕವನ್ನು ವಿತರಿಸಲಾಗಿದೆ, ಯಾವುದೇ ಜನರಿಂದಲೂ ಸಹ ಹಣವನ್ನು ತೆಗೆದುಕೊಳ್ಳದೆ ಉಚಿತವಾಗಿ ಕೆಲಸವನ್ನು ನಮ್ಮ ಮಾವನವರಾದ ದೊಡ್ಡಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಅಂಜಿನಪ್ಪ ಕೆಳಗೋಟೆ ಮಾತನಾಡಿ, ಉಚಿತ ಆರೋಗ್ಯ ಶಿಬಿರಗಳು ಎಂದು ಯಾರು ಸಹ ನಿರ್ಲಕ್ಷವಹಿಸದೆ, ಇತಂಹ ಶಿಬಿರಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವುದು ಅಗತ್ಯವಾಗಿದೆ. ವೃದ್ಧರು, ಮಕ್ಕಳು, ಮಹಿಳೆಯರು ಯಾರೇ ಕಣ್ಣಿನ ಸಮಸ್ಯೆ ಇದ್ದಲ್ಲಿ ಪ್ರತಿ ವಾರವು ಸಹ ಕಣ್ಣಿನ ತಪಾಸಣೆಯನ್ನು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಆರ್.ಕೆ ಸರ್ದಾರ್ , ವಾಸಿಮ್, ರೆಹಮಾನ್ ಜಲೀಲ್ ಹಾಗೂ ಇತರರು ಇದ್ದರು.