ಸಾರಾಂಶ
ಚಾಮರಾಜನಗರ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್‌ಗಳಿಂದ ದಲಿತರನ್ನು ಕೈಬಿಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.
ನಗರದ ಪೊಲೀಸ್ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ-ಎಸ್ಟಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿ, ಸಿಮ್ಸ್ ಆಸ್ಪತ್ರೆ ಡೀನ್ ಪ್ರಕರಣ, ಹೊಂಗನೂರು ಗಲಾಟೆ ಪ್ರಕರಣಗಳಲ್ಲಿ ದಲಿತರ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಿಂದ ದಲಿತರನ್ನು ಕೈ ಬಿಡಬೇಕು ಎಂದು ಒತ್ತಾಯಿದರು.ಸಿಮ್ಸ್‌ನಲ್ಲಿ ನಡೆದ ಘಟನೆಯಲ್ಲಿ ಭಾಗಿಯಾಗದ ಸಿಮ್ಸ್‌ನ ಕೆಲವು ದಲಿತ ಕಾರ್ಮಿಕರ ಮೇಲೆ ಪ್ರಕರಣ ದಾಖಲಾಗಿದ್ದು, 9 ಮಂದಿ ದಲಿತರಿಗೆ ಬೇಲ್ ಸಿಕ್ಕಿದೆ. ಉಳಿದ 9 ಮಂದಿ ದಲಿತರಿಗೆ ಬೇಲ್ ಸಿಕ್ಕಿಲ್ಲ ಎಂದು ತಿಳಿಸಿದರು.
ಸಿಮ್ಸ್‌ನಲ್ಲಿ ಹೊರಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ದಲಿತರ ಮೇಲೆ ಪ್ರಕರಣ ದಾಖಲಿಸಿದ ನಂತರ ನಿಮ್ಮ ಮೇಲೆ ಕೇಸ್ ಇದೆ ಆದ್ದರಿಂದ ನಿಮಗೆ ಕೆಲಸ ನೀಡುವುದಿಲ್ಲ ಎಂದು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದರಿಂದ ದಲಿತರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಿಂದ ದಲಿತರ ಮೇಲಿನ ಕೇಸ್ ಕೈಬಿಡಬೇಕು ಎಂದು ಆಗ್ರಹಿಸಿದರು.ಹೊಂಗನೂರು ಗಲಾಟೆ ಪ್ರಕರಣದಲ್ಲೂ ಸಹ ದಲಿತರ ಮೇಲೆ ಕೇಸು ದಾಖಲಾಗಿದ್ದು, ಹೊಂಗನೂರು ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಂತಿ ಸಭೆಯನ್ನು ಕರೆದು ಪ್ರಕರಣದಲ್ಲಿ ಕೇಸು ದಾಖಲಾಗಿರುವ ದಲಿತರನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಕೆಲವು ಠಾಣೆಗಳಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು, ಪ್ರಕರಣ ದಾಖಲಿಸದೇ ಹಣಪಡೆದು ಕಳುಹಿಸುತ್ತಿದ್ದಾರೆ. ಅಲ್ಲದೆ, ದೂರು ದಾಖಲಿಸಿದರೇ ಪ್ರತಿದೂರು ದಾಖಲಿಸುತ್ತಿದ್ದಾರೆ ಎಂದು ದೂರಿದರು.ಜಿಲ್ಲೆಯಲ್ಲಿ ಕ್ಲಬ್‌ಗಳಲ್ಲಿ ಜೂಜಾಟವಾಡಲು ಅನುಮತಿ ಇದೆಯೇ ಜೂಜಾಟ ನಡೆಯುತ್ತಿದ್ದರೂ ಕೂಡ ಅಲ್ಲಿಗೆ ಪೊಲೀಸ್ ಇಲಾಖೆ ಹೋಗಿ ಬಂಧಿಸುತ್ತಿಲ್ಲ, ದಲಿತರ ಬೀದಿಗಳಿಗೆ ಪೊಲೀಸರು ಸರಿಯಾಗಿ ಗಸ್ತು ನಡೆಸುತ್ತಿಲ್ಲ ಎಂದರು.
ಗ್ರಾಮ ಗಸ್ತು ಸಭೆಗಳು ನಿಂತು ಹೋಗಿದ್ದು, ಮತ್ತೇ ಗ್ರಾಮ ಗಸ್ತು ಸಭೆಯನ್ನು ನಡೆಸಲು ಮುಂದಾಗಬೇಕು, ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳು ಸರಿಯಾಗಿ ನಡೆಸುತ್ತಿಲ್ಲ, ಠಾಣೆಗೆ ಪ್ರಕರಣಗಳ ವಿಚಾರಣೆಗೆ ಹೋದವರನ್ನು ಠಾಣೆಯಲ್ಲಿ ಕೂರಿಸಿ ಪೋಟೋ ತೆಗೆದು ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ ದಲಿತ ಮುಖಂಡರಿಗೆ ಸಭೆಗೆ ಆಹ್ವಾನಿಸುವುದಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿ ಬಂದಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಮಾತನಾಡಿ, ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಿಂದ ಚರ್ಚೆಯಾದ ದಲಿತ ದೌರ್ಜನ್ಯ ವಿಷಯಗಳ ಕುರಿತು ಇಲಾಖೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚಾಮರಾಜನಗರ ಡಿವೈಎಸ್ಪಿ ಲಕ್ಷ್ಮಯ್ಯ, ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ಎಂ.ಶಿವಣ್ಣ, ಸಿ.ಕೆ.ಮಂಜುನಾಥ್, ಕೆ.ಎಂ.ನಾಗರಾಜು, ಸಂಘಸೇನಾ, ಚಾ.ಗು. ನಾಗರಾಜು, ದಡದಹಳ್ಳಿ ಶಂಕರ, ಯರಿಯೂರು ರಾಜಣ್ಣ, ಅಂಬರೀಷ್, ಸುರೇಶ್ ನಾಯುಕ, ಆರ್.ಮಹದೇವ್, ಶ್ರೀಕಂಠ, ಬ್ಯಾಡಮೂಡ್ಲು ಬಸವಣ್ಣ, ಭಾನುಪ್ರಕಾಶ್ ಇದ್ದರು.ಕೇಳದಿದ್ದರೆ ರೌಡಿಶೀಟರ್ ದಾಖಲಿಸಿ
ರತ್ನಬಾಯಿ ಮಾತನಾಡಿ, ಮಲೆಮಹದೇಶ್ವರ ಬೆಟ್ಟದಲ್ಲಿ ಕುಟುಂಬದ ಮೇಲೆ ತಮಿಳುನಾಡಿನ ವ್ಯಕ್ತಿ ಕೊಳತ್ತೂರು ಮಣಿ ಎಂಬುವವರು ದೌರ್ಜನ್ಯ ಎಸಗಿದ್ದು, ನಮ್ಮ ಮನೆ ನೆಲಸಮ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ವಾಸಮಾಡುವುದಕ್ಕೆ ಜೀವ ಭಯವಿದೆ ಎಂದು ಆರೋಪ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಆತನ ಮೇಲೆ ಕೇಸ್ ಹಾಕಿ ತಂಟೆಗೆ ಹೋಗದಂತೆ ಹೇಳಿ ಕೇಳದಿದ್ದರೆ ರೌಡಿಶೀಟರ್ ಹಾಕಿ ಎಂದು ಮಹದೇಶ್ವರ ಬೆಟ್ಟ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದರು.