ಸಾರಾಂಶ
ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಜಮೀನು ಬಿಡದೆ ರಾಮಕೃಷ್ಣಪ್ಪನ ಕುಟುಂಬ ಸಮೇತ ಕಳೆದ 15 ದಿನಗಳಿಂದಲೂ ಜಮೀನಿನಲ್ಲಿ ಧರಣಿ ಕುಳಿತಿದ್ದರು. ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ತುಮಕೂರು: ಯಾವುದೇ ನೋಟಿಸ್ ನೀಡದೇ ನಗರಸಭಾ ಅಧಿಕಾರಿಗಳು ಜಮೀನು ಒತ್ತುವರಿ ತೆರವುಗೊಳಿಸಲು ಬಂದ ಹಿನ್ನೆಲೆಯಲ್ಲಿ ಕಂಗಾಲಾದ ರೈತ ಕುಟುಂಬವೊಂದು ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿರಾ ನಗರದ ಕಲ್ಲುಕೋಟೆಯಲ್ಲಿ ಶನಿವಾರ ನಡೆದಿದೆ.
ಕಲ್ಲುಕೋಟೆ ಸರ್ವೇ ನಂಬರ್ 118ರ ಜಮೀನಿನಲ್ಲಿ ರೈತ ರಾಮಕೃಷ್ಣ ಎಂಬುವರ ಕುಟುಂಬ ಕಳೆದ 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿತ್ತು. ಇದು ಸರ್ಕಾರಿ ಜಮೀನು ಹಿನ್ನೆಲೆ ಶಿರಾ ನಗರಸಭಾ ಅಧಿಕಾರಿಗಳು ಒತ್ತುವರಿ ತೆರವಿಗೆ ಬಂದಿದ್ದರು. ಈ ವೇಳೆ ರಾಮಕೃಷ್ಣನ ಅಕ್ಕ ಮಾಲಮ್ಮ(45) ಹಾಗೂ ಮತ್ತೊಬ್ಬ ಅಕ್ಕನ ಮಗ ಲಕ್ಷ್ಮೀಕಾಂತ್(27) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಜಮೀನು ಬಿಡದೆ ರಾಮಕೃಷ್ಣಪ್ಪನ ಕುಟುಂಬ ಸಮೇತ ಕಳೆದ 15 ದಿನಗಳಿಂದಲೂ ಜಮೀನಿನಲ್ಲಿ ಧರಣಿ ಕುಳಿತಿದ್ದರು. ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಆದರೆ ಶನಿವಾರ ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ಒತ್ತುವರಿ ಜಮೀನು ತೆರವು ಮಾಡಿಸಲು ಬಂದಾಗ ಆತಂಕಗೊಂಡ ರೈತ ಕುಟುಂಬದ ಇಬ್ಬರು ಸದಸ್ಯರು ಅಧಿಕಾರಿಗಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆಸ್ಪತ್ರೆಯಲ್ಲಿ ರೈತರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ಕೂಡಲೇ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು ಸುಮಾರು 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ರೈತರ ಜಮೀನನ್ನು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಒತ್ತುವರಿ ತೆರವಿಗೆ ಬಂದಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.ನಗರಸಭೆ ಸದಸ್ಯರಾದ ರಂಗರಾಜು, ವಿಜಯರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಶಿವಲಿಂಗಯ್ಯ, ಯುವಮುಖಂಡ ರಂಗನಾಥ್, ರೈತ ಮುಖಂಡರು, ಇದ್ದರು.