ಕೆ.ಬೆಟ್ಟಹಳ್ಳಿಯಲ್ಲಿ ಪ್ರಸಿದ್ಧ ಶ್ರೀಲಕ್ಷ್ಮಿದೇವಿ ಬಂಡಿ ಉತ್ಸವ

| Published : Mar 20 2025, 01:19 AM IST

ಸಾರಾಂಶ

ಪ್ರತಿ ವರ್ಷ ನಡೆಯುವ ಐತಿಹಾಸಿಕ ಶ್ರೀಲಕ್ಷ್ಮೀದೇವಿ ಬಂಡಿ ಉತ್ಸವದಲ್ಲಿ ಹಾರೋಹಳ್ಳಿ- ಶಂಭೂವಿನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕರೆ ಗ್ರಾಮದ ಎತ್ತಿನ ಬಂಡಿಗಳ ಉತ್ಸವಗಳು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಬಂಡಿ ಉತ್ಸವ ನೋಡಿದ ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆ.ಬೆಟ್ಟಹಳ್ಳಿಯಲ್ಲಿ ಪ್ರತಿ ವರ್ಷ ನಡೆಯುವ ಪ್ರಸಿದ್ಧ ಶ್ರೀಲಕ್ಷ್ಮಿದೇವಿ ಬಂಡಿ ಉತ್ಸವದ ಜಾತ್ರಾ ಮಹೋತ್ಸವವು ಬುಧವಾರ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಅದ್ಧೂರಿಯಾಗಿ ನಡೆಯಿತು.

ಪ್ರತಿ ವರ್ಷ ನಡೆಯುವ ಐತಿಹಾಸಿಕ ಶ್ರೀಲಕ್ಷ್ಮೀದೇವಿ ಬಂಡಿ ಉತ್ಸವದಲ್ಲಿ ಹಾರೋಹಳ್ಳಿ- ಶಂಭೂವಿನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕರೆ ಗ್ರಾಮದ ಎತ್ತಿನ ಬಂಡಿಗಳ ಉತ್ಸವಗಳು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಬಂಡಿ ಉತ್ಸವ ನೋಡಿದ ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಕೆ.ಬೆಟ್ಟಹಳ್ಳಿ ಬಂಡಿ ಉತ್ಸವಕ್ಕೆ ಗ್ರಾಮ ಸೇರಿದಂತೆ ಅಕ್ಕ-ಪಕ್ಕದ ಗ್ರಾಮಗಳಾದ ಹಾರೋಹಳ್ಳಿ, ಶಂಭೂನಹಳ್ಳಿ, ಡಾಮಡಹಳ್ಳಿ, ಹುಲ್ಕೆರೆ, ಹುಲ್ಕೆರೆಕೊಪ್ಪಲು, ಶ್ಯಾದನಹಳ್ಳಿ, ಎಂ.ಬೆಟ್ಟಹಳ್ಳಿ, ಚಾಗಶೆಟ್ಟಹಳ್ಳಿ, ವಡ್ಡರಹಳ್ಳಿ, ಹರವು, ಅರಳಕುಪ್ಪೆ ಗ್ರಾಮಗಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯನ್ನು ಯಶಸ್ಸಿಗೊಳಿಸಿದರು.

ಪ್ರತಿ ವರ್ಷದಂತೆ ಜಾತ್ರೆ ಹಿಂದಿನ ದಿನವಾದ ಮಂಗಳವಾರ ರಾತ್ರಿಯೇ ಹಣ್ಣಿನ ಹೆಡಿಗೆಗಳನ್ನು ಎತ್ತಿನ ಬಂಡಿಯ ಮೂಲಕ ಆಯಾ ಗ್ರಾಮಸ್ಥರು ಕೆ.ಬೆಟ್ಟಹಳ್ಳಿ ಶ್ರೀಲಕ್ಷ್ಮಿದೇವಿ ದೇವಸ್ಥಾನಕ್ಕೆ ತಂದು ಪದ್ದತಿಯಂತೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಅಕ್ಕ-ಪಕ್ಕ ಗ್ರಾಮಗಳಿಂದ ಎತ್ತಿನ ಬಂಡಿ ಹೊಡೆದುಕೊಂಡು ಬಂದಿದಂತಹ ಭಕ್ತರು ಶ್ರೀ ಲಕ್ಷ್ಮಿದೇವಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಎತ್ತಿನ ಬಂಡಿಯಲ್ಲಿ ತರಲಾಗಿದ್ದ ಹೂ, ಹಣ್ಣುಗಳನ್ನು ದೇವಸ್ಥಾನಕ್ಕೆ ನೀಡಿ ವಿಶೇಷ ಪೂಜೆಸಲ್ಲಿಸಿದರು.

ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ದೇವಸ್ಥಾನವನ್ನು ಮೂರು ಸುತ್ತುಸುತ್ತಿ ದೇವರ ಅರಿಕೆ ತೀರಿಸಿದರು.

ಬುಧವಾರ ಜಾತ್ರೆಯ ಅಂಗವಾಗಿ ಕೆ.ಬೆಟ್ಟಹಳ್ಳಿ ಲಕ್ಷ್ಮಿದೇವಿ ದೇವಸ್ಥಾನದ ಮುಂದೆ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಭಾಗವಹಿಸಿತ್ತು. ಮೊದಲು ನಾಲ್ಕು ಗ್ರಾಮದ ದೇವರ ಪೂಜೆಗಳನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಗುತ್ತಿದೆ. ಈ ವೇಳೆ ಭಕ್ತರು ಹಣ್ಣು ಜವನಗಳನ್ನು ದೇವರಿಗೆ ಸರ್ಮಪಿಸಿದರು.

ಹೂ ಹೊಂಬಾಳೆಯಿಂದ ಸಿದ್ಧಗೊಂಡಿದ್ದ ಐದು ಗ್ರಾಮಗಳ ಕನ್ನಂಕಾಡಿ ಹಾಗೂ ಪೂಜೆ ಕುಣಿತಗಳು ಮೆರವಣಿಗೆಯಲ್ಲಿ ಸಾಗಿದ್ದವು. ಈರ ಮಕ್ಕಳು ಹಾಗೂ ದೇವರ ಗುಡ್ಡರುಗಳು ಚಕ್ರಬಳೆ ಬಡಿದು ‘ಒಲಿದು ಬಾರೆ ಒಲಿದು ಬಾರೆ ತಾಯಿಲಕ್ಷ್ಮಿದೇವಿ ಒಲಿದು ಬಾರೆ...’ ಎಂದು ಹಾಡಿ ಓಲೈಸಿದರು. ಇದರೊಂದಿಗೆ ಗೊರವರ ಕುಣಿತ, ತಮಟೆಯ ಮೇಳಗಳು ಮೇಳೈಸಿದವು.

ಪೂಜಾಕುಣಿತ, ಪೂಜಾ ವಿಧಾನಗಳು ಮುಗಿಯುತ್ತಿದ್ದಂತೆಯೇ ಜಾತ್ರೆ ಮುಖ್ಯಭಾಗವಾದಲ್ಲಿ ಎತ್ತಿನ ಬಂಡಿ ಉತ್ಸವವನ್ನು ದೇವರಗುಡ್ಡರು ಮುನ್ನಡೆಸಿದಾಗ ಯುವಕರು ಪಟಾಕಿ ಸಿಡಿಸಿ ಊಘೇ ಊಘೇ ಎಂದು ಕೂಗಿ ಪುಸಲಾಯಿಸಿದರು.

ಎತ್ತುಗಳನ್ನು ಬಂಡಿಯನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೂರು ಸುತ್ತಿದವು. ಬಂಡಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಹಿಸಿದ್ದರು. ಪೊಲೀಸರು ಹಗ್ಗದಿಂದ ಜನರನ್ನು ತಡೆಹಿದು ನಿಯಂತ್ರಿಸಿದರು.