ಸಾರಾಂಶ
ರಾಮನಗರ: ಪ್ರತಿ ವರ್ಷವೂ ಹೊಸ ಹೊಸ ಪ್ರಯೋಗದೊಂದಿಗೆ ಮೋದಕ ಪ್ರಿಯನ ಅನೇಕ ರೂಪಗಳ ದರ್ಶನ ಭಾಗ್ಯ ದೊರಕಿಸಿ ಭಕ್ತಾದಿಗಳಲ್ಲಿ ಹೊಸ ಸಂಚಲನ ಮೂಡಿಸುವ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ 41ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚ್ಚಿಷ್ಟ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದೆ.
ನಗರದ ಛತ್ರದ ಬೀದಿಯಲ್ಲಿ ಸೇವಾ ಸಂಘ ಮತ್ತು ಬಳಗದ ವತಿಯಿಂದ ಪ್ರತಿವರ್ಷ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈವಿದ್ಯಮಯ ಬೃಹತ್ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡಿ, ಹಲವು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ.ಈ ಬಾರಿ 41ನೇ ವಾರ್ಷಿಕೋತ್ಸವದ ಪ್ರಯುಕ್ತ ತಮಿಳುನಾಡಿನ ತಿರುನೆಲ್ವೇಲಿ ಮತ್ತು ಉಜ್ಜಯಿನಿಗಳಲ್ಲಿ ಉಚ್ಚಿಷ್ಟ ಗಣಪತಿ ಮೂರ್ತಿ ಪ್ರತಿರೂಪದಂತಿರುವ ಸುಮಾರು 7 ಅಡಿ ಎತ್ತರದ ಬೃಹತ್ ಮಣ್ಣಿನ ಗಣಪತಿ ಮೂರ್ತಿ ಪ್ರತಿಷ್ಠಾಪಿಸುತ್ತಿದೆ.
ಛತ್ರದ ಬೀದಿಯಲ್ಲಿ ಗಣೇಶೋತ್ಸವವನ್ನು ವರ್ಷದಿಂದ ವರ್ಷಕ್ಕೆ ವೈವಿಧ್ಯಮಯವಾಗಿ ಆಚರಿಸುತ್ತಾ ಕಳೆದ 40 ವರ್ಷಗಳಿಂದ ಸತತವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಗಣೇಶ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಹೊಸ ಪ್ರಯೋಗದೊಂದಿಗೆ ಮೋದಕ ಪ್ರಿಯನ ಅನೇಕ ರೂಪಗಳ ದರ್ಶನ ಭಾಗ್ಯ ದೊರಕಿಸಿ ಭಕ್ತಾದಿಗಳಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಸೇವಾ ಸಂಘ ಶ್ರಮಿಸುತ್ತಿದೆ.ಉಚ್ಚಿಷ್ಟ ಗಣಪತಿ ವಿಶಿಷ್ಟತೆ:ಸೇವಾ ಸಂಘ 25ನೇ ವರ್ಷದ ಪ್ರಯುಕ್ತ ವೆಂಕಟರಣಮಸ್ವಾಮಿ ರೂಪ ತಾಳಿದ ಗಣಪತಿ ಜೊತೆಗೆ 24 ವರ್ಷಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಭಿನ್ನ ಮಾದರಿಯ ಗಣಪತಿ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದರು. ಆನಂತರ 30ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಿಷ್ಣು ಗಣಪತಿ ಪ್ರಧಾನ ಮೂರ್ತಿಯ ಜೊತೆಗೆ ಮುದ್ಗಲ ಪುರಾಣದಲ್ಲಿ ಬರುವ 32 ಬಗೆಯ ಬಾಲಗಣಪತಿ ಮೂರ್ತಿಗಳ ಸಮೇತ ಶ್ರೀ ಲಕ್ಷ್ಮಿ, ಸರಸ್ವತಿ, ವೆಂಕಟೇಶ್ವರ, ಶ್ರೀರಾಮ, ಶ್ರೀ ಕೃಷ್ಣ, ಹನುಮಂತ, ಮಂಜುನಾಥ, ಶಿವ ಪಾರ್ವತಿ, ಅಯ್ಯಪ್ಪ, ಸುಬ್ರಹ್ಮಣ್ಯ, ಸಾಯಿಬಾಬಾ, ಅನಂತ ಪದ್ಮನಾಭ, ಬ್ರಹ್ಮ, ರಾಘವೇಂದ್ರ, ಪಾಂಡುರಂಗ, ಅನ್ನಪೂರ್ಣೇಶ್ವರಿ, ಕಾವೇರಿಮಾತೆ ಸೇರಿದಂತೆ 30 ವಿವಿಧ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು.
ಪ್ರಸಕ್ತ ವರ್ಷ 41ನೇ ವಾರ್ಷಿಕೋತ್ಸವ ಪ್ರಯುಕ್ತ ರಾಮನಗರದಲ್ಲಿ ಮೊದಲ ಬಾರಿ ಎನ್ನಲಾದ ಉಚ್ಚಿಷ್ಟ ಗಣಪತಿಯನ್ನು ಸೇವಾ ಸಂಘ ಕೂರಿಸುತ್ತಿದೆ. ತಲೆ ಮೇಲೆ ಕಿರೀಟ ಧರಿಸಿದ್ದು, ಷಟ್ಭುಜ, ಎಡ ತೊಡೆ ಮೇಲೆ ಶಕ್ತಿ ದೇವತೆ ಆಸೀನರಾಗಿದ್ದಾಳೆ. ಇದು ಈ ಬಾರಿಯ ವಿಶೇಷತೆಯಾಗಿದೆ. ಮಾಗಡಿಯ ಕಲಾವಿದ ಉಮಾಶಂಕರ್ ಮತ್ತು ಸಹೋದರರು ಕೈಚಳಕದಲ್ಲಿ ಉಚ್ಚಿಷ್ಟ ಗಣಪತಿ ಮೂರ್ತಿ ತಯಾರಾಗಿದೆ.ಪ್ರತಿ ವರ್ಷ ಹೊರ ಜಿಲ್ಲೆಗಳ ಲಕ್ಷಾಂತರ ಭಕ್ತರು ಆಗಮಿಸಿ ಗಣಪತಿ ಮೂರ್ತಿಗಳ ದರ್ಶನ ಪಡೆಯುತ್ತಾರೆ. ಎಲ್ಲಾ ಜನಾಂಗದ ಸಮೃದ್ಧಿ ಮತ್ತು ರಕ್ಷಣೆಯ ಪ್ರತಿರೂಪವಾಗಿ ಈ ಬಾರಿ ಪುರಿ ಜಗನ್ನಾಥ ಗಣೇಶನನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗಣೇಶೋತ್ಸವವನ್ನು ಆಚರಿಸಿರುವುದು ನಮ್ಮ ಸೇವಾ ಸಂಘದ ಪ್ರಯತ್ನ ಎಂದು ಸಂಘದ ಅಧ್ಯಕ್ಷ ಪಿ.ವಿ.ರವೀಂದ್ರ ಹೇರ್ಳೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.
ಬಾಕ್ಸ್ .............ಪೂಜಾ ಕಾರ್ಯಕ್ರಮ :
ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಜಿಲ್ಲೆಯಲ್ಲಿ ಮನೆ ಮಾತಾಗಿದ್ದು, ಪ್ರತಿ ವರ್ಷ ವಿಭಿನ್ನ ಮಾದರಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬರುತ್ತಿದೆ. ಈ ಬಾರಿ ಉಚ್ಛಿಷ್ಠಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘದ ಅಧ್ಯಕ್ಷ ಪಿ.ವೈ ರವಿಂದ್ರ ಹೇರ್ಳೆ ಹಾಗೂ ಕಾರ್ಯದರ್ಶಿ ಉಮಾಮಹದೇವಪ್ಪ ಪತ್ರಿಕೆಗೆ ತಿಳಿಸಿದರು.ಆ.27ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಪ್ರತಿಷ್ಠಾಪನಾ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ವಹಿಸಲಿದ್ದಾರೆ. ಸಂಸದ ಡಾ.ಸಿಎನ್.ಮಂಜುನಾಥ್. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ , ಮುಖಂಡರಾದ ಸಿಎಂ ಲಿಂಗಪ್ಪ, ಕೆ.ರಾಜು, ಎ.ಮಂಜುನಾಥ್, ಗಾಣಕಲ್ ನಟರಾಜು. ಪಿ.ನಾಗರಾಜು, ಅಶ್ವಥ್ ನಾರಾಯಣ್ ಗೌಡ, ಮುತ್ತುರಾಜ್, ಲಕ್ಷ್ಮಣ್ , ನಾಗೇಶ್ ಪ್ರದೀಪ್ ಭಾಗವಹಿಸಲಿದ್ದಾರೆ. ಡೀಸಿ ಯಶವಂತ್ ವಿ ಗುರುಕರ್, ಎಸ್ಪಿ ಶ್ರೀನಿವಾಸ್ ಗೌಡ, ತಹಸೀಲ್ದಾರ್ ತೇಜಶ್ವಿನಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಸತೀಶ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಇತರರು ಪಾಲ್ಗೊಳ್ಳುವರು.
ಬಾಕ್ಸ್ .............ವಿಘ್ನ ನಿವಾರಕನ ವಿವಿಧ ರೂಪಗಳು
ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ ಇದುವರೆಗೆ ಶ್ರೀ ಚಕ್ರ ಗಣಪತಿ, ಚಂದ್ರಾಶನ, ಸೂರ್ಯ, ಗಜವದನ, ನಾಟ್ಯ ಗಣಪತಿ, ನೀಲವರ್ಣ, ಷಟ್ಪುಜ, ತ್ರಿಮುಖ, ಆಚಾರ್ಯ, ಭೂವರಾಹ, ಹರಿಹರ, ಗರುಡ, ಅಶ್ವತ್ಥಾಮ ಸೇರಿದಂತೆ ವಿವಿಧ ಅವತಾರ ತಾಳಿರುವ ವಿಶೇಷ ಗಣಪತಿಗಳನ್ನು ಪ್ರತಿವರ್ಷ ಪ್ರತಿಷ್ಠಾಪಿಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ವರ್ಷ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಚಿಷ್ಟ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಭಕ್ತರನ್ನು ತನ್ನೆಡೆಗೆ ಆಕರ್ಷಿಸಲಿದೆ.26ಕೆಆರ್ ಎಂಎನ್ 1.ಜೆಪಿಜಿ
ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಚಿಷ್ಟ ಗಣಪತಿ.