ಸಾಲದ ಸುಳಿಯಿಂದ ರೈತ ಬದುಕುವ ಆಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ-ರಾಮಣ್ಣ ಕೆಂಚಳ್ಳೇರ ವಿಷಾದ

| Published : Jan 12 2025, 01:16 AM IST

ಸಾಲದ ಸುಳಿಯಿಂದ ರೈತ ಬದುಕುವ ಆಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ-ರಾಮಣ್ಣ ಕೆಂಚಳ್ಳೇರ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಎಲ್ಲ ರಂಗಗಳಿಗಿಂತಲೂ ಕೃಷಿರಂಗ ದೇಶದ ಅಸ್ತಿತ್ವವನ್ನು ನಿರ್ಧಾರ ಮಾಡುವುದಾಗಿದೆ. ಆದರೆ ಇಂದು ರೈತ ಬೆಳೆದ ಬೆಳೆಗಳು ಮಳೆಯ ಏರಿಳಿತಕ್ಕೆ ಸಿಲುಕಿ ಹಾನಿಯಾಗಿ ಸಾಲದ ಸುಳಿಯಿಂದ ಬದುಕುವ ಆಸೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾನೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ವಿಷಾದ ವ್ಯಕ್ತಪಡಿಸಿದರು.

ಹಿರೇಕೆರೂರು: ಸಮಾಜದ ಎಲ್ಲ ರಂಗಗಳಿಗಿಂತಲೂ ಕೃಷಿರಂಗ ದೇಶದ ಅಸ್ತಿತ್ವವನ್ನು ನಿರ್ಧಾರ ಮಾಡುವುದಾಗಿದೆ. ಆದರೆ ಇಂದು ರೈತ ಬೆಳೆದ ಬೆಳೆಗಳು ಮಳೆಯ ಏರಿಳಿತಕ್ಕೆ ಸಿಲುಕಿ ಹಾನಿಯಾಗಿ ಸಾಲದ ಸುಳಿಯಿಂದ ಬದುಕುವ ಆಸೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾನೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊನ್ನ ಬಿತ್ತೇವು ಜಗಕೆಲ್ಲ ಗೋಷ್ಠಿಯಲ್ಲಿ ನೇಗಿಲಯೋಗಿಯ ತವಕ-ತಲ್ಲಣಗಳು ವಿಷಯ ಕುರಿತು ಅವರು ಮಾತನಾಡಿದರು.50 ವರ್ಷದ ಹಿಂದೆ ಕೃಷಿಕರ ಬದುಕು ಕಡಿಮೆ ಖರ್ಷಿನಲ್ಲಿ ಸಾಗುತ್ತಿತ್ತು. ಹೈಬ್ರಿಡ್ ಕೃಷಿ ಆರಂಭವಾದಾಗಿಂದ ಕಳಪೆ ಬೀಜ, ರಸಗೊಬ್ಬರ,ಕ್ರಿಮಿನಾಶಕಗಳಿಂದ ಕೃಷಿಯ ಖರ್ಚು ಹೆಚ್ಚಾಗಿ ರೈತನ ಸಾಲ ದ್ವಿಗುಣವಾಗುತ್ತಾ ಸಾಗಿದೆ. ದೇಶದಲ್ಲಿ ರಾಜಕೀಯ ಪಕ್ಷಗಳು ರೈತರನ್ನು ಕಡೆಗಣಿಸಿ ಉದ್ದಿಮೆದಾರರ ಸಾಲಗಳನ್ನು ಮನ್ನಾ ಮಾಡಿ ರೈತ ವಿರೋಧಿ ಧೋರಣೆ ಅನುಸರಿಸಿ ನಮ್ಮ ಉಗ್ರ ರೂಪ ಹೊರಬೀಳುವಂತೆ ಮಾಡಿದ್ದಾರೆ ಎಂದರು.ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಕರ್ನಾಟಕದಲ್ಲಿ ರೈತ ಚಳುವಳಿಯ ಹೆಜ್ಜೆ ಗುರುತುಗಳು ವಿಷಯ ಕುರಿತು ಮಾತನಾಡಿ, ಕನ್ನಡ ನಾಡು-ನುಡಿ ಉಳಿವಿಗಾಗಿ ಇಂದು ಹೋರಾಟಗಳು ನಡೆಯುತ್ತಿದ್ದರೂ ನಾವು ನಮ್ಮತನವನ್ನು ಬಿಟ್ಟು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಹಾಗೆಯೇ ದೇಶಕ್ಕೆ ಅನ್ನ ನೀಡುವ ರೈತನ ಬದುಕಿನ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಗಳು ನಡೆಯಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿದ್ದನಗೌಡ ಪಾಟೀಲ ಮಾತನಾಡಿ, ರೈತನ ಮಕ್ಕಳಿಗೆ ಹೆಣ್ಣು ಸಿಗದೇ ಜೀವನಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಪರಿಸ್ಥಿತಿ ಎದುರಾಗಿದ್ದು, ಕೃಷಿಯು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ತಾನು ಬೆಳೆದ ಬೆಳೆಗೆ ದಲ್ಲಾಳಿಗಳು ಬೆಲೆ ನಿಗದಿ ಮಾಡುವ ಪದ್ದತಿಯಿಂದ ರೈತ ಹೈರಾಣಾಗಿ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳಿಗೆ ಮುಂದಾಗುತ್ತಿದ್ದಾನೆ ಎಂದರು.