ಸಾರಾಂಶ
ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮೈಕ್ರೋ ಫೈನಾನ್ಸ್‌ನವರು ಇಡೀ ಕುಟುಂಬವನ್ನೇ ಮನೆಯಿಂದ ಹೊರಹಾಕಿದ್ದು, ರೈತ ಸಂಘದ ಮುಖಂಡರು ಮನೆಗೆ ಹಾಕಿದ್ದ ಬೀಗ ಒಡೆದು ಕೊಟ್ಟಿಗೆಯಲ್ಲಿದ್ದ ಕುಟುಂಬವನ್ನು ಮನೆಗೆ ಸೇರಿಸಿದ ಘಟನೆ ತಾಲೂಕಿನ ಆಲದಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಹಾಸನ
ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮೈಕ್ರೋ ಫೈನಾನ್ಸ್‌ನವರು ಇಡೀ ಕುಟುಂಬವನ್ನೇ ಮನೆಯಿಂದ ಹೊರಹಾಕಿದ್ದು, ರೈತ ಸಂಘದ ಮುಖಂಡರು ಮನೆಗೆ ಹಾಕಿದ್ದ ಬೀಗ ಒಡೆದು ಕೊಟ್ಟಿಗೆಯಲ್ಲಿದ್ದ ಕುಟುಂಬವನ್ನು ಮನೆಗೆ ಸೇರಿಸಿದ ಘಟನೆ ತಾಲೂಕಿನ ಆಲದಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ಮಂಜೇಗೌಡ ಎಂಬುವವರು ಮನೆ ನಿರ್ಮಾಣಕ್ಕಾಗಿ ಆಧಾರ್ ಹೌಸಿಂಗ್ ಫೈನಾನ್ಸ್‌ನಿಂದ ೯ ಲಕ್ಷ ರು. ಸಾಲ ಮಾಡಿದ್ದರು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ ಹಾಕಿ ಮನೆಯಲ್ಲಿದ್ದವರನ್ನು ಹೊರ ಹಾಕಲಾಗಿತ್ತು. ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಿಲಾಗಿತ್ತು.
ನಂತರ ಮನೆಯಿಲ್ಲದೆ ಬೀದಿಪಾಲಾಗಿ ಕೊಟ್ಟಿಗೆಯಲ್ಲಿ ಕುಟುಂಬ ನೆಲೆಸಿತ್ತು. ಮನೆ ಗೃಹ ಪ್ರವೇಶಕ್ಕೂ ಮುನ್ನವೇ ಮನೆ ಸೀಜ್ ಮಾಡಿದ್ದು, ಸಾಲ ಕಟ್ಟಲಾಗದೆ ಆರು ತಿಂಗಳಿಂದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿದ್ದು, ಇದರಿಂದಲೇ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಸಾಲ ಪಡೆದಿದ್ದ ಕುಟುಂಬ ಸಮಸ್ಯೆಯಲ್ಲಿತ್ತು. ಕರುಣೆ ತೋರದೆ ಮನೆಗೆ ಬೀಗ ಹಾಕಿ ಸೀಜ್ ಮಾಡಿದ್ದರು.ಮನೆಗೆ ಹಾಕಿದ್ದ ಬೀಗವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಒಡೆದು ಕುಟುಂಬವನ್ನು ಮನೆಯ ಒಳಗಡೆ ಕಳಿಸಿ ಫೈನಾನ್ಸ್‌ನವರಿಗೆ ಧಿಕ್ಕಾರ ಕೂಗಿ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸಬಾರದಾಗಿ ಎಚ್ಚರಿಕೆ ನೀಡಿದರು.ಜಿಲ್ಲಾ ರೈತ ಮುಖಂಡರಾದ ಕಣಗಾಲ್ ಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಜಿ. ಮಂಜು, ಬೇಲೂರು ತಾಲೂಕು ಅಧ್ಯಕ್ಷ ಕೆ.ಪಿ. ಕುಮಾರ್, ಅರಕಲಗೂಡು ತಾಲೂಕು ಅಧ್ಯಕ್ಷ ಹೆಚ್.ಈ. ಜಗದೀಶ್, ಹಾಸನ ತಾಲೂಕು ಅಧ್ಯಕ್ಷ ಪ್ರಕಾಶ್, ಲಕ್ಕಯ್ಯ ಇದ್ದರು.