ಮಳೆ ಬರಲಿ ಎಂದು ಪ್ರತಿದಿನ ಆಕಾಶದತ್ತ ಕಣ್ಣಿಟ್ಟಿರುವ ರೈತರು, ಈಗ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಮುಂಗಾರು ಮಳೆ ಕೈಕೊಟ್ಟರೆ ರೈತನ ಬದುಕು ಹೇಗೆ ತತ್ತರಿಸುತ್ತದೆ ಎಂಬುದಕ್ಕೆ ತಾಲೂಕಿನ ಗುಮಗೇರ ಗ್ರಾಮದ ರೈತರು ಬಾಡುತ್ತಿರುವ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿರುವದು ಜೀವಂತ ಸಾಕ್ಷಿಯಾಗಿದೆ.

ಆಷಾಢ ಹೊಸ್ತಿಲಲ್ಲೂ ಮಳೆ ಕೈಕೊಟ್ಟಿರುವ ಪರಿಣಾಮ ಹೊಲದಲ್ಲಿನ ಹಸಿರು ಮಾಯವಾಗಿದ್ದು, ಅನ್ನದಾತನ ಮುಖದಲ್ಲಿ ಆತಂಕದ ಛಾಯೆ ಆವರಿಸಿದೆ. ಮಳೆ ಬರಲಿ ಎಂದು ಪ್ರತಿದಿನ ಆಕಾಶದತ್ತ ಕಣ್ಣಿಟ್ಟಿರುವ ರೈತರು, ಈಗ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ.

ಅಶ್ವಿನಿ, ಭರಣಿ, ಕೃತಿಕಾ, ಮೃಗಶಿರ ಕಳೆದು ಹೋದರೂ ನಿರೀಕ್ಷಿತ ಮಳೆಯಾಗಿಲ್ಲ. ಆರಂಭದಲ್ಲಿ ಸುರಿದ ಒಂದೆರಡು ಮಳೆ ನಂಬಿ ರೈತರು ತೊಗರಿ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಹೊಲದಲ್ಲಿನ ತೇವಾಂಶ ಕಣ್ಮರೆಯಾಗಿ ಬೆಳೆಗಳು ಬಾಡತೊಡಗಿವೆ.

ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ರೈತ ವೀರನಗೌಡ ಪೊಲೀಸ್ ಪಾಟೀಲ ಅವರು ಸುಮಾರು ಎಂಟು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿದ್ದಾರೆ. ಮಳೆ ಬಾರದ ಕಾರಣ ಗಿಡಗಳು ಒಣಗಲು ಆರಂಭಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವೆಚ್ಚವಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿ ಬೆಳೆಗೆ ಹಾಯಿಸುತ್ತಿದ್ದಾರೆ.

ಸಾಮಾನ್ಯವಾಗಿ ಕುಡಿವ ನೀರು ಪೂರೈಸುವ ಟ್ಯಾಂಕರ್‌ಗಳು ಈಗ ತೊಗರಿ ಬೆಳೆಗೆ ಜೀವದಾನ ನೀಡುತ್ತಿರುವುದು ಈ ಭಾಗದ ರೈತರ ಸಂಕಷ್ಟದ ಗಂಭೀರತೆ ಎತ್ತಿ ತೋರಿಸುತ್ತಿದೆ.

ಬಿತ್ತಿದ ಬೆಳೆಗೆ ನೀರಿಲ್ಲ: ಈ ಬಾರಿ ರೈತರು ಸಾಲ ಸೋಲ ಮಾಡಿ ಬೀಜ, ಗೊಬ್ಬರ, ಔಷಧ ಖರೀದಿಸಿ ಬಿತ್ತನೆ ನಡೆಸಿದ್ದರು. ಆದರೆ ಮಳೆ ವೈಫಲ್ಯದಿಂದ ಅನೇಕ ಹೊಲಗಳಲ್ಲಿ ಬೀಜ ಮೊಳಕೆ ಒಡೆಯದೆ ಮಣ್ಣಿನಲ್ಲೇ ಉಳಿದಿದೆ.ಇನ್ನೂ ಕೆಲವು ಕಡೆ ಮೊಳಕೆಯೊಡೆದ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡುತ್ತಿವೆ. ಇದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿವೆ.

ಟ್ಯಾಂಕರ್ ವೆಚ್ಚ ಮತ್ತೊಂದು ಹೊರೆ: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುವುದು ರೈತರಿಗೆ ಹೆಚ್ಚುವರಿ ವೆಚ್ಚ ತಂದೊಡ್ಡಿದೆ. ಈಗಾಗಲೇ ಸಾಲ ಮಾಡಿ ಕೃಷಿ ನಡೆಸಿರುವ ರೈತರು ಮತ್ತಷ್ಟು ಹಣ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೂ ಬೆಳೆ ಉಳಿದರೆ ಸಾಕು ಎನ್ನುವ ಆಶಯದಿಂದ ಈ ಪ್ರಯತ್ನ ಮುಂದುವರಿಸಿದ್ದಾರೆ.

ಸೂಕ್ತ ಪರಿಹಾರ ಘೊಪಿಸಿ: ಮಳೆ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಪ್ರತಿ ವರ್ಷ ಬೆಳೆ ವಿಮೆ ಮಾಡಿಸಿಕೊಂಡರೂ ನಷ್ಟಕ್ಕೆ ಅನುಗುಣವಾಗಿ ವಿಮೆ ಮೊತ್ತ ಸಿಗುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಬಾರಿ ಬೆಳೆ ಹಾನಿ ಹೆಚ್ಚಿರುವುದರಿಂದ ವಿಮೆ ಮೊತ್ತ ವಿಳಂಬವಿಲ್ಲದೆ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ವರ್ಷ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಅಂತ ಗೊತ್ತಿತ್ತು ಆದರೂ ಕೃಷಿ ಮಾಡದೆ ಇರಲು ಆಗಲ್ಲ ಎಂಟು ಎಕರೆ ತೊಗರಿ ಬಿತ್ತಿದ್ದೇನೆ ಈಗ ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದೇನೆ ಖರ್ಚು ಜಾಸ್ತಿಯಾದರೂ ಚಿಂತೆಯಿಲ್ಲ ಬೆಳೆ ಉಳಿದರೆ ನಮ್ಮ ಬದುಕು ಉಳಿಯುತ್ತದೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಗುಮ್ಮಗೇರ ರೈತ ವೀರನಗೌಡ ಪೊಲೀಸ್ ಪಾಟೀಲ ತಿಳಿಸಿದ್ದಾರೆ.