ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ರೈತ ಸಂಘ ಆಗ್ರಹ
KannadaprabhaNewsNetwork | Published : Oct 14 2023, 01:00 AM IST
ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ರೈತ ಸಂಘ ಆಗ್ರಹ
ಸಾರಾಂಶ
ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ರೈತ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣವಾಗಿ ಬರ ಪೀಡಿತವೆಂದು ಘೋಷಿಸಬೇಕು ಹಾಗೂ ರೈತರಿಗೆ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆ ಯಾಗಿರುವುದರಿಂದ ಮುಂಗಾರು- ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆ ಬೆಳೆಯದ ಪರಿಸ್ಥಿತಿ ಉಂಟಾಗಿದೆ ಎಂದರು. ಅಕಾಲಿಕ ಮಳೆಯಿಂದ ಆಲೂಗೆಡ್ಡೆ, ಟೊಮೇಟೋ, ಮೆಣಸಿನಕಾಯಿ ಗಿಡ, ಬೀನ್ಸ್ ಸೇರಿದಂತೆ ಯಾವುದೇ ತರಕಾರಿ ಬೆಳೆಗಳು ರೈತರಿಗೆ ಲಾಭ ತಂದುಕೊಟ್ಟಿಲ್ಲ, ಭತ್ತದ ಸಸಿಗಳು ಮಡಿಯಲ್ಲಿ ಒಣಗಿ ಹೋಗಿವೆ. ರಾಗಿ ಮೊಳಕೆಯಲ್ಲೇ ಮರುಗಟ್ಟಿದೆ. ಕಾಫಿ, ಏಲಕ್ಕಿ, ಮೆಣಸು ಮಳೆ ಅಭಾವದಿಂದ ಸೊರಗಿ ಹೋಗಿದೆ ಎಂದು ಹೇಳಿದರು. ತುಂಗಾ, ಭದ್ರಾ, ಹೇಮಾವತಿ ನದಿಗಳ ಒಡಲು ಬರಿದಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ. ಹಿಂಗಾರಿನಲ್ಲೂ ಮಳೆ ವಿಫಲವಾಗಿದೆ. ಕೆರೆಕಟ್ಟೆಗಳಲ್ಲೂ ನೀರಿಲ್ಲ, ಅದ್ದರಿಂದ ರಾಜ್ಯ ಸರ್ಕಾರ ಚಿಕ್ಕಮಗಳೂರು ಸಂಪೂರ್ಣ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದ ಅವರು, ರೈತರ ಸಾಲ ವಸೂಲಾತಿ ನಿಲ್ಲಿಸಬೇಕು, ಸಾಲಮನ್ನಾ ಮಾಡಬೇಕು, ಬೆಳೆವಿಮೆ ಮಾಡಿರುವ ರೈತರಿಗೆ ಸೌಲಭ್ಯ ನೀಡಬೇಕು, ಬರ ಪರಿಹಾರ ಕಾಮಗಾರಿಗಳ ಮೂಲಕ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದರು. ವಿದ್ಯುತ್‌ನ ಲೋಡ್ ಶೆಡ್ಡಿಂಗ್ ಹೆಚ್ಚಿನ ಸಮಯದವರೆಗೆ ಆಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಯಾಗುತ್ತಿದೆ. ಸರ್ಕಾರದ ಈ ಕ್ರಮ ಖಂಡಿಸಿ ಅ.19 ರಂದು ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಹೇಳಿದರು. ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ತನ್ನ ಸ್ವಂತ ಖರ್ಚಿನಲ್ಲಿ ಪಡೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಸೆ.22 ರಂದು ಆದೇಶ ಹೊರಡಿಸಿದೆ. ಇದು, ರೈತರಿಗೆ ತುಂಬಾ ಹೊರೆಯಾಗಲಿದೆ. ಅದ್ದರಿಂದ ಈ ಆದೇಶ ವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಶಿವಣ್ಣ, ಲೋಕೇಶ್, ದಯಾನಂದ್ ಇದ್ದರು.