ಉಚಿತ ಪ್ರಸಾದ ನಿಲಯಗಳ ಜನಕ ಶ್ರೀಗಳು

| Published : Mar 09 2025, 01:52 AM IST

ಸಾರಾಂಶ

ಶೂನ್ಯಪೀಠ ಪರಂಪರೆ ಜಯದೇವ ಜಗದ್ಗುರುಗಳು ಶಿಕ್ಷಣದಿಂದ ವಂಚಿತರಾದ ಬಡಮಕ್ಕಳ ಕಲ್ಯಾಣಕ್ಕೋಸ್ಕರ ಜಂಗಮಮೂರ್ತಿಯಾಗಿ ಸಂಚರಿಸಿ 25 ಕ್ಕೂ ಹೆಚ್ಚು ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅವರ ಬದುಕಿಗೆ ಬೆಳಕಾದರು ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಶೂನ್ಯಪೀಠ ಪರಂಪರೆ ಜಯದೇವ ಜಗದ್ಗುರುಗಳು ಶಿಕ್ಷಣದಿಂದ ವಂಚಿತರಾದ ಬಡಮಕ್ಕಳ ಕಲ್ಯಾಣಕ್ಕೋಸ್ಕರ ಜಂಗಮಮೂರ್ತಿಯಾಗಿ ಸಂಚರಿಸಿ 25 ಕ್ಕೂ ಹೆಚ್ಚು ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅವರ ಬದುಕಿಗೆ ಬೆಳಕಾದರು ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.ಅವರು ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೊಡುಗೈ ದಾನಿಯಾಗಿದ್ದ ಶ್ರೀಗಳು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಅವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ಲ್ಯಾಬೊರೇಟರಿ ನಿರ್ಮಿಸಲು ನಲವತ್ತು ಸಾವಿರ ರು. ಗಳನ್ನು ನೀಡಿದರು. 1934ರಲ್ಲಿ ಹಾವೇರಿಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಭೇಟಿ ಮಾಡಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಮಹಾತ್ಮಗಾಂಧೀಜಿ ಕೈಗೊಂಡಿದ್ದ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಗಾಂಧೀಜಿಯವರಿಗೆ ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣ ಇಂತಹ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದನೆಂದು ತಿಳಿಸಿದ್ದರು ಎಂದರು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು 1927 ರಲ್ಲಿ ದಾವಣಗೆರೆಯಲ್ಲಿ ನಡೆದ ಏಳನೇ ಕರ್ನಾಟಕ ಏಕೀಕರಣ ಪರಿಷತ್ತಿನ ಸಮಾರೋಪವನ್ನು ಉದ್ಘಾಟಿಸಿ, ಮನೆ ಮಠಗಳಲ್ಲಿ ಮೂಲೆ ಹಿಡಿದು ಕುಳಿತುಕೊಳ್ಳುವುದು ಸರಿಯಲ್ಲ. ಮಠಾಧಿಪತಿಗಳು ಸಮಾಜದ ಜ್ವಲಂತ ಸಮಸ್ಯೆಗಳಿಗೆ ದಾರಿ ತೋರಬೇಕು. ನಮ್ಮ ಕುಲ, ಸಂಸ್ಕೃತಿ ಕನ್ನಡವಾಗಬೇಕು ಎಂದು ಹೇಳುತ್ತಾ ಕರ್ನಾಟಕ ಜನಾಂಗದ ಅಭಿನ್ನತೆಯನ್ನು ಎತ್ತಿಹಿಡಿದರು ಎಂದರು.

ತುಮಕೂರು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಜಯಣ್ಣ ಮಾತನಾಡಿ ಜಯದೇವ ಜಗದ್ಗುರುಗಳು ಧರ್ಮವನ್ನು ಹೇಳದೆ ಧರ್ಮದಂತೆ ಬದುಕಿದವರು. ಅವರು ನಿಗದಿತ ಜೀವನವನ್ನು ಆಚರಿಸಿದರು. ಅವರಲ್ಲಿ ಬೋಧೆ ಮತ್ತು ಬೆಳಕು ಇತ್ತು. ಅವರು ತಮ್ಮ ಬಳಿಗೆ ಬರುವವರಿಗೆಲ್ಲ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಎನಗಿಂತ ಕಿರಿಯರಿಲ್ಲ ಎನ್ನುವ ಭಾವನೆ ಅವರದಾಗಿತ್ತು. ಅವರು ಯಾವಾಗಲೂ ಧರ್ಮ, ನೀತಿ ಹಾಗೂ ಸಾರ್ವಜನಿಕರ ಬಗ್ಗೆ ಚಿಂತಿಸುತ್ತಿದ್ದರು ಎಂದರು.ವೇದಿಕೆಯಲ್ಲಿ ಶರಣ ತತ್ವ ಚಿಂತಕ ಗುರುನಾಥಪ್ಪ ಬೂದಿಹಾಳ್ ಮಾತನಾಡಿ ಜಯದೇವ ಜಗದ್ಗುರುಗಳಿಗೆ ಬಸವಾದಿ ಪ್ರಮಥರ ಆಶಯದಂತೆ ಬದುಕಿ ಇಡೀ ಸಮಾಜವನ್ನು ಸುಧಾರಿಸಿದರು. ಇಂದಿನ ಮಠಾಧಿಪತಿಗಳು ಅವರ ಆಶಯ ಮತ್ತು ಆದರ್ಶ ಗುಣಗಳನ್ನು ಅನುಸರಿಸಬೇಕು ಎಂದರು.ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಮಕೃಷ್ಣಪ್ಪ, ಡಾ. ಬಿ.ನಂಜುಂಡಸ್ವಾಮಿ, ಡಿ.ವಿ.ಶಿವಾನಂದ್, ಶ್ರೀಮತಿ ಕಲ್ಪನಾ ಬಿ. ಉಪಸ್ಥಿತರಿದ್ದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು. ಕುಮಾರಸ್ವಾಮಿ ವಂದಿಸಿದರು.