ಸಾರಾಂಶ
ಎನ್ಆರ್ ಪುರ ಪಟ್ಟಣದ ಮಹಾವೀರ ಭವನದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಖಕಿ ಭಾಗ್ಯನಂಜುಂಡಸ್ವಾಮಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ದುರ್ಬಲ ಮನಸ್ಸಿನವರು ಬಹು ಬೇಗ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಲೇಖಕಿ ಭಾಗ್ಯ ನಂಜುಂಡಸ್ವಾಮಿ ಹೇಳಿದರು.ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಭೆಯಲ್ಲಿ "ವಿಶ್ವ ತಂಬಾಕು ರಹಿತ ದಿನಾಚರಣೆ " ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ವಿಶ್ವ ಸಂಸ್ಥೆಯು 1988 ರಲ್ಲಿ ವಿಶ್ವ ತಂಬಾಕು ರಹಿತ ದಿನ ಆಚರಿಸಲು ನಿರ್ಣಯ ಕೈಗೊಂಡು ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಧೂಮಪಾನ ರಹಿತ ದಿನವೆಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮ ಬೀರಿ ಕ್ಯಾನ್ಸರ್, ಬುದ್ಧಿಮಾಂಧ್ಯತೆ, ಹೃದಯ ಸಂಬಂಧಿ ಖಾಯಿಲೆಗಳು, ಶ್ವಾಸಕೋಶದ ರೋಗಗಳು ಹರಡುತ್ತವೆ ಎಂದರು.ಉದ್ಯಮದ ಹಸ್ತಕ್ಷೇಪದಿಂದ ನಿಮ್ಮನ್ನು ರಕ್ಷಿಸುತ್ತದೆ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ತಂಬಾಕು ಉತ್ಪಾದನೆಯು ಪರಿಸರದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿದ್ದು, ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಬೇಕು. ಯುವ ಜನಾಂಗ ಕ್ರೀಡೆ, ಮನೋರಂಜನೆ, ಉದ್ಯೋಗದ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಲಾಪುರ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ವಹಿಸಿದ್ದರು. ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸುವಿಧಾ ಸಹಾಯಕಿ ಪವಿತ್ರ, ಸೇವಾ ಪ್ರತಿನಿಧಿ ಶಶಿಕಲಾ, ಕವಿತಾ, ನಾದ್ಮಿನ್, ಗಾಯಿತ್ರಿ ಇದ್ದರು.