ಕಾರವಾರದ ಕಾಳಿಕಾ ದೇವಿಯ ಜಾತ್ರೆ ಸಂಪನ್ನ

| Published : Jan 13 2025, 12:46 AM IST

ಸಾರಾಂಶ

ಈ ದ್ವೀಪವು ಕಾಳಿ ನದಿಯಿಂದ ಆವೃತವಾಗಿದ್ದು, ದೇವಿ ಜಾತ್ರೆಗೆ ತೆರಳುವ ಪ್ರತಿಯೊಬ್ಬರೂ ದೋಣಿಯನ್ನೇ ಅವಲಂಬಿಸಬೇಕು. ಇಂತಹ ವಿಶಿಷ್ಟ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಆಗಮಿಸಿದ್ದರು.

ಕಾರವಾರ: ಇಲ್ಲಿನ ಕಾಳಿ ನದಿ ದ್ವೀಪದಲ್ಲಿ ಇರುವ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ಶ್ರದ್ಧಾ- ಭಕ್ತಿಯಿಂದ ಜರುಗಿತು. ನೂರಾರು ಜನರು ದೋಣಿಗಳ ಮೂಲಕ ತೆರಳಿ ಮಾತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ನಗರದ ಕೋಡಿಬಾಗದಿಂದ 2 ಕಿಮೀ ದೂರದಲ್ಲಿ ವಿಶಾಲವಾದ ದ್ವೀಪದಲ್ಲಿ ನೆಲೆಸಿರುವ ಕಾಳಿ ದೇವಿಯನ್ನು ಅನಾದಿ ಕಾಲದಿಂದಲೂ ಪೂಜಿಸಲಾಗುತ್ತಿದೆ. ಕಾಳಿಯ ಬೃಹತ್ ಮೂರ್ತಿಗೆ ಹೂವಿನ ಮಾಲೆಯ ಜತೆಗೆ ಲಿಂಬು ಮಾಲೆಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿತ್ತು. ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಾತ್ರೆಯ ಮೊದಲ ದಿನವಾದ ಶುಕ್ರವಾರ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ವಿವಿಧ ಹರಕೆಯನ್ನು ತೀರಿಸಿದರು.ಈ ದ್ವೀಪವು ಕಾಳಿ ನದಿಯಿಂದ ಆವೃತವಾಗಿದ್ದು, ದೇವಿ ಜಾತ್ರೆಗೆ ತೆರಳುವ ಪ್ರತಿಯೊಬ್ಬರೂ ದೋಣಿಯನ್ನೇ ಅವಲಂಬಿಸಬೇಕು. ಇಂತಹ ವಿಶಿಷ್ಟ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಆಗಮಿಸಿದ್ದರು. ಕಾಳಿಮಾತೆಯ ದೇಗುಲಕ್ಕೆ ತೆರಳಲು ನಂದನಗದ್ದಾದ ಸಂತೋಷಿ ಮಾತಾ ದೇವಸ್ಥಾನ ಬಳಿಯ ಕಾಳಿ ನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಜಾತ್ರೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ರಾಜ್ಯದಿಂದಲೂ ಸಾಕಷ್ಟು ಭಕ್ತರು‌ ಆಗಮಿಸಿದ್ದರು. ಇಲ್ಲಿಗೆ ಬಂದು ಶ್ರೀದೇವಿಯ ದರ್ಶನ ಪಡೆಯುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಕಾಳಿ ದೇವಿಗಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಕಾಳಿ ನದಿ ಹಾಗೂ ಅರಬ್ಬಿ ಸಮುದ್ರದ ಸಂಗಮ ಪ್ರದೇಶವಾದ್ದರಿಂದ ದ್ವೀಪ ಉಪ್ಪು ನೀರಿನಿಂದ ಜಲಾವೃತಗೊಂಡಿದೆ. ಆದರೆ ಇದರ ತಪ್ಪಲಿನ ಎರಡು ಬಾವಿಗಳು ಮಾತ್ರ ಸದಾ ಸಿಹಿಯಾಗಿದ್ದು, ಇದು ದೇವಿಯ ಮಹಿಮೆಯಿಂದ ಸಾಧ್ಯವಾಗಿದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.ಕಲಿಯುಗದ ಶಕ್ತಿ ಮಂತ್ರ ಹನುಮಾನ ಚಾಲಿಸಾ

ಹಳಿಯಾಳ: ಜೀವನದಲ್ಲಿ ಅಖಂಡ ಸಮಾಧಾನ ಹಾಗೂ ಸಂತೋಷ ಸಂತೃಪ್ತಿಪಡೆಯಲು ನಿತ್ಯವೂ ಶ್ರೀ ಹನುಮಾನ ಚಾಲಿಸಾ ಹಾಗೂ ಶ್ರೀ ರಾಮನಾಮ ಸ್ಮರಣೆ ಮಾಡಬೇಕು ಎಂದು ಶ್ರೀಕ್ಷೇತ್ರ ಹೆಬ್ಬಳ್ಳಿಯ ಶ್ರೀ ದತ್ತಾವಧೂತರು ಹೇಳಿದರು.ಪಟ್ಟಣದ ಕಸಬಾ ಓಣಿಯಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ ಅವರು ಶ್ರೀ ಹನುಮಾನ ಸೇವಾ ಸಮಿತಿಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು. ಇಂದು ಮಾನವ ಜಗತ್ತಿನ ಭೌತಿಕ ಸುಖದ ಬೆನ್ನಟ್ಟಿ ತನ್ನ ಮಾನಸಿಕ ನೆಮ್ಮದಿ ಕಳೆದುಕೊಳ್ಳಲಾರಂಭಿಸಿದ್ದಾನೆ. ನೈಜ ಸಂತೃಪ್ತಿ, ಸುಖ ನಮ್ಮಲ್ಲಿಯೇ ಇದ್ದು ಅದನ್ನು ನಾವು ಹೊರಗೆ ಹುಡುಕುತ್ತಿರುವುದರಿಂದ ದಾರಿ ತಪ್ಪುತ್ತಿದ್ದೇವೆ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸಮಯವನ್ನು ಆದಷ್ಟು ಸತ್ಕಾರ್ಯಗಳಿಗಾಗಿ ಹಾಗೂ ಆಧ್ಯಾತ್ಮ ಮತ್ತು ಧಾರ್ಮಿಕ ಚಟುವಟಿಕೆಗಳಿಗಾಗಿ ಮೀಸಲಾಗಿಡಬೇಕು. ಒಳ್ಳೆಯ ಸತ್ಕಾರ್ಯಗಳನ್ನು ಮಾಡಬೇಕು. ನಿತ್ಯವೂ ದೇವನಾಮ ಸ್ಮರಣೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಒಂದು ತಾಸು ಹನುಮಾನ ಚಾಲಿಸಾ ಪಠಣ ಮಾಡಲಾಯಿತು. ಪಟ್ಟಣದ ಹಿರಿಯ ವೈದ್ಯ ಡಾ. ಮದುರಕರ ಗೋಖಲೆ, ತಾಲೂಕು ವಿಎಚ್‌ಪಿ ಅಧ್ಯಕ್ಷ ಶ್ರೀಪತಿ ಭಟ್ ಇದ್ದರು. ಹನುಮಾನ ಚಾಲಿಸಾದ ಮಹತ್ವವನ್ನು ಗುರುನಾಥ ಇನಾಮದಾರ ತಿಳಿಸಿದರು. ಶ್ರೀ ಸಾಯಿ ಶೇಡಿ, ಗೋಪಾಲಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.