ಸಾರಾಂಶ
ಮನೆ, ಅಂಗಡಿ ಮುಂಗಟ್ಟುಗಳಲ್ಲಿ ವಿದ್ಯುತ್ ದೀಪಾಲಂಕಾರ, ಆಕಾಶ ಬುಟ್ಟಿಯ ಬೆಳಕಿನೊಂದಿಗೆ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಗೋಕರ್ಣ:
ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನ ಪುಣ್ಯ ಕ್ಷೇತ್ರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೋಮವಾರ ಅಭ್ಯಂಗ ಸ್ನಾನ ಅಂದರೆ ಮುಂಜಾನೆ ಮನೆಯಲ್ಲಿ ಸಹೋದರರಿಗೆ ಸಹೋದರಿಯರು ಹಾಗೂ ಮನೆ ಸಂಬಂಧಿಕರು ಒಂದಾಗಿ ಎಣ್ಣೆ ಹನಿಸಿ, ಆರತಿ ಬೆಳಗಿ ಎಣ್ಣೆ ಹನಿಸುವ ಶಾಸ್ತ್ರ ಮುಗಿಸಿ ಸಿಹಿತಿನಿಸಿನೊಂದಿಗೆ ಉಪಹಾರ ಸೇವಿಸಿ ನಂತರ ಸ್ನಾನ ಮಾಡಿ ಹಬ್ಬದ ಪೂಜೆಗೆ ಅಣಿಯಾಗುವ ಸಂಪ್ರದಾಯವಿದ್ದು ಅದರಂತೆ ನೆರವೇರಿತು. ನಂತರ ಹಲವು ಮನೆಗಳಲ್ಲಿ ಮೂರು ದಿನ ಬಲೀಂದ್ರ ದೇವರ ಆರಧಾನೆ ಮಾಡಲಾಗುತ್ತಿದ್ದು, ಈ ದಿನದಂದು ಪ್ರತಿಷ್ಠಾಪಿಸಿ ವಿಶೇಷ ಭಕ್ಷದ ನೈವೇದ್ಯದೊಂದಿಗೆ ವಿಶೇಷ ಪೂಜೆ ಪೂಜೆ ನೆರವೇರಿತು.ಮನೆ, ಅಂಗಡಿ ಮುಂಗಟ್ಟುಗಳಲ್ಲಿ ವಿದ್ಯುತ್ ದೀಪಾಲಂಕಾರ, ಆಕಾಶ ಬುಟ್ಟಿಯ ಬೆಳಕಿನೊಂದಿಗೆ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟಿದೆ.ಹೂವು-ಹಣ್ಣಿನ ವ್ಯಾಪಾರ ಜೋರು:
ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಗಾಗಿ ಹೂವುಗಳ ಖರೀದಿ ಜೋರಾಗಿ ನಡೆದಿದೆ. ಹೊರ ಊರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಆಗಮಿಸಿದ್ದು, ಇಲ್ಲಿನ ಪ್ರಮುಖ ರಸ್ತೆ ಅಂಚಿನಲ್ಲಿ ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ.ಗೊಂಡೆಹೂವು ಮಾರಿಗೆ ₹೫೦-೧೦೦ವರೆಗೆ ದರ ನಿಗದಿಯಾಗಿದೆ. ಸೇವಂತಿಗೆ ಹೂವು ಮಾರಿಗೆ ₹೧೨೫ರಿಂದ ೧೫೦ ದರ ಇದ್ದು, ದರ ಹೊಂದಿಸುತ್ತಾ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಉತ್ತರ ಕರ್ನಾಟಕದ ಭಾಗದ ವ್ಯಾಪಾರಿಗಳೇ ಹೆಚ್ಚಾಗಿದ್ದಾರೆ. ಇನ್ನೂ ಹಣ್ಣಿನ ದರ ಸಹ ಏರಿಕೆಯಾಗಿದ್ದು, ಬೆಲೆ ಎಷ್ಟೇ ಹೆಚ್ಚಾದರೂ ಬೆಳಕಿನ ಹಬ್ಬಕ್ಕೆ ಅಗತ್ಯ ವಸ್ತುಗಳನ್ನ ಜನರು ಖರೀದಿಸುತ್ತಿದ್ದಾರೆ.