ಹಿಂದೂಗಳಿಗೆ ಯುಗಾದಿ ಹಬ್ಬ ಪವಿತ್ರವಾದುದು: ಎ.ವಿ. ಪಾಟೀಲ

| Published : Apr 03 2025, 12:33 AM IST

ಹಿಂದೂಗಳಿಗೆ ಯುಗಾದಿ ಹಬ್ಬ ಪವಿತ್ರವಾದುದು: ಎ.ವಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಿಇಡಿ ಕಾಲೇಜಿನಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಎಸ್‌ವೈಎಸ್‌ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ.ವಿ. ಪಾಟೀಲ ಉದ್ಘಾಟಿಸಿದರು.

ನರಗುಂದ: ಚಳಿಗಾಲ ಕಳೆದು ಬೇಸಿಗೆ ವಸಂತ ಋತುವಿನ ಆಗಮನ ಹೊತ್ತಿನಲ್ಲಿ ಪ್ರಕೃತಿಯಲ್ಲಿ ಚಿಗುರಿ ಫಲಗಳು ಸಿಗುವ ಹೊತ್ತಿನಲ್ಲಿ ಯುಗಾದಿ ಆಚರಿಸುತ್ತಿದ್ದು, ದಕ್ಷಿಣ ಭಾರತೀಯರಲ್ಲಿ ಇದರ ಆಚರಣೆ ಹೆಚ್ಚು ಎಂದು ಎಸ್‌ವೈಎಸ್‌ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ.ವಿ. ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಿಇಡಿ ಕಾಲೇಜಿನಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಆನಂತರ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಹಿಂದೂಗಳಾದವರು ಈ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಣೆ ಮಾಡುವರು. ಉತ್ತರ ಭಾರತೀಯರು ಈ ದಿನವನ್ನು ಚೈತ್ರ ನವರಾತ್ರಿಯ ಮೊದಲ ದಿನವೆಂದು ಆಚರಿಸುತ್ತಾರೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಯುಗಾದಿ ಹಬ್ಬ ನಾಡಿನಲ್ಲಿ ಹಿಂದೂಗಳಿಗೆ ಪವಿತ್ರವಾದುದು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಆರ್.ಬಿ. ಪಾಟೀಲ್ ಮಾತನಾಡಿ, ಯುಗಾದಿ ಹಬ್ಬ ಭಾರತೀಯರಿಗೆ ಸಂಭ್ರಮದ ಹಬ್ಬ. ವಿಶಿಷ್ಟವಾದ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿದು, ಪ್ರಕೃತಿಯಲ್ಲಿ ಹೊಸ ಚಿಗುರು ತರುವ, ಬದುಕಿನಲ್ಲಿಯೂ ಹೊಸ ಪ್ರಾರಂಭವನ್ನು ತರುವ ಯುಗಾದಿ ಹಬ್ಬ ಹೊಸತನವನ್ನು ಸೃಷ್ಟಿಸಿ, ಜೀವನದಲ್ಲಿ ಸಿಹಿ-ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಸಾಂಕೇತಿಕವಾಗಿ ಜಗತ್ತಿಗೆ ಸಾರಿದ ಹಬ್ಬ ಎಂದು ಹೇಳಿದರು.

ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಚಕ್ಕಡಿಗಳಲ್ಲಿ ಅತಿಥಿಗಳನ್ನು ಸ್ವಾಗತಿಸಿಕೊಂಡರು. ಜತೆಗೆ ಜೋಳದ ರಾಶಿಯನ್ನು ಮಾಡಿ, ಜೋಳದ ರಾಶಿಗೆ ಜೋಳ ಹಾಕುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಿದರು.

ಯುಗಾದಿ ಹಬ್ಬದ ನಿಮಿತ್ತ ಮಹಾವಿದ್ಯಾಲಯದಲ್ಲಿ ನಮ್ಮ ಭಾರತೀಯ ಕಲೆಗಳಾದ ಹಂತಿ ಪದ, ಜಾನಪದ ನೃತ್ಯಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಉಪನ್ಯಾಸಕರಾದ ಎಸ್.ವಿ. ಕೋಟಿ, ಎಸ್.ಎ. ಬಾರಕೇರ, ಲಕ್ಷ್ಮೀ ತಳವಾರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಮಂಜುನಾಥ ಬಸನಗೌಡ ಮತ್ತು ರೇವತಿ ಮಠ ಸ್ವಾಗತಿಸಿದರು. ವೀಣಾ ಮುಂಡಾಸದ ಮತ್ತು ಬಸವರಾಜ ಕುಮ್ಮಿ ಕಾರ್ಯಕ್ರಮ ನಿರೂಪಿಸಿದರು. ಬಸಮ್ಮ ಅರಹುಣಿಸಿ ವಂದಿಸಿದರು.