ಸಂಭ್ರಮದ ಶ್ರೀಜಂಬುನಾಥೇಶ್ವರ ಸ್ವಾಮಿ ರಥೋತ್ಸವ

| Published : Apr 11 2025, 12:30 AM IST

ಸಾರಾಂಶ

ನಗರದ ಹೊರವಲಯದ ಐತಿಹಾಸಿಕ ಶ್ರೀ ಜಂಬುನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದೊಂದಿಗೆ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಹೊರವಲಯದ ಐತಿಹಾಸಿಕ ಶ್ರೀ ಜಂಬುನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದೊಂದಿಗೆ ರಥೋತ್ಸವ ಜರುಗಿತು.

ಜಾತ್ರಾ ವೈಭವದಲ್ಲಿ ಭಕ್ತಾದಿಗಳು ಮಿಂದೆದ್ದರು. ರಥೋತ್ಸವದಲ್ಲಿ ಭಕ್ತರು ದೇವಸ್ಥಾನದ ಆವರಣದಲ್ಲಿ ರಥವನ್ನು ಎಳೆದು ಮತ್ತೆ ಮೂಲ ಸ್ಥಾನಕ್ಕೆ ತಂದು ನಿಲ್ಲಿಸಿದರು. ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಸಂಡೂರು ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿ, ಕಲ್ಲಹಳ್ಳಿ, ಗಾದಿಗನೂರು, ಸಂಡೂರು ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವಕ್ಕೆ ಸಾಕ್ಷಿಯಾದರು. ಹರ್ಷೋದ್ಗಾರದೊಂದಿಗೆ ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದರು. ಒಂದು ಗಂಟೆ ಕಾಲ ನಡೆದ ಈ ರಥೋತ್ಸವದ ಉದ್ದಕ್ಕೂ ಭಕ್ತರು ಭಕ್ತಿ ಭಾವದೊಂದಿಗೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿದರು.

ಬೆಳಗ್ಗೆಯಿಂದ ಅರ್ಚಕರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದರು. ನಂತರ ಪಲ್ಲಕ್ಕಿಯಲ್ಲಿ ಶ್ರೀ ಜಂಬುನಾಥೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಂತರ ರಥದ ಧ್ವಜ ಹರಾಜು ಮಾಡಲಾಯಿತು. ವಿಶೇಷವಾಗಿ ಅಲಂಕರಿಸಲಾಗಿದ್ದ ಜಂಬುನಾಥೇಶ್ವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಲಾಯಿತು.ಚಿತ್ತವಾಡ್ಗಿಯ ಆಂಜನೇಯ ಸ್ವಾಮಿ ರಥೋತ್ಸವ:

ಹೊಸಪೇಟೆ ನಗರದ ಚಿತ್ತವಾಡ್ಗಿಯ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.ರಥೋತ್ಸವಕ್ಕೂ ಮುನ್ನ ಪಟ ಹರಾಜು ಪ್ರಕ್ರಿಯೆ ನಡೆಸಲಾಯಿತು. ನಂತರ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ರಥ ಎಳೆಯಲು ಆದೇಶಿಸಿದರು. ಅದರಂತೆ ದೇವಸ್ಥಾನದಿಂದ ಎದುರು ಬಸವಣ್ಣ ಪಾದಗಟ್ಟಿವರೆಗೆ ರಥವು ಸಾಗಿಬಂದಿತು.ನೆರೆದ ಸಾವಿರಾರು ಜನರು ರಥೋತ್ಸವಕ್ಕೆ ಹೂ, ಹಣ್ಣು ಮತ್ತು ಉತ್ತತ್ತಿಯನ್ನು ಎಸೆಯುವುದರ ಮೂಲಕ ಭಕ್ತಿ ಮೆರೆದರು. ಈ ಸಂದರ್ಭ ಚಿತ್ತವಾಡ್ಗಿಯ ಯುವಕರು ವಿವಿಧ ಹಲಗೆ ನಾದ ನುಡಿಸಿ ನೆರೆದ ಜನರ ಮನ ಸೆಳೆದರು. ಬಿಸಿಲಿನ ಧಗೆಯನ್ನು ತಣಿಸಲು ಗೋವಿಂದ ನಗರ ಮತ್ತು ಸಂತೆ ಬಯಲು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ರಥೋತ್ಸವಕ್ಕೆ ಬಂದ ಭಕ್ತರಿಗೆ ಮಜ್ಜಿಗೆ ಮತ್ತು ತಂಪು ಪಾನಿಯ ವಿತರಿಸಿದರು.

ಚಿತ್ತವಾಡ್ಗಿ, ಅಮರಾವತಿ, ಎರೆಬಯಲು, ಹೊಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು.