ಗದಗ: ತೋಂಟದಾರ್ಯ ಮಠದ ಮಹಾರಥೋತ್ಸವ ಭಕ್ತಸಾಗರದ ಮಧ್ಯೆ ಗುರುವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು.

ಮಠದ ಪ್ರಾಂಗಣದಿಂದ ಆರಂಭವಾದ ರಥೋತ್ಸವವು ತೇರಿನ ಬೀದಿಯಲ್ಲಿ ಭಕ್ತಸಾಗರದ ನಡುವೆ ನೆರವೇರಿತು. ಸಾಹಿತ್ಯ, ಕೃಷಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಶ್ರೀಮಠದ ಜಾತ್ರೆಯಲ್ಲಿ ಹಲವಾರು ಪುಸ್ತಕಗಳು ಲೋಕಾರ್ಪಣೆಗೊಂಡವು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವವದುದ್ದಕ್ಕೂ ಗುರುಬಸವಲಿಂಗಾಯ ನಮಃ ಜಯ ಘೋಷ ಕೂಗಿದರು.ವಚನಕಟ್ಟು ಮೆರವಣಿಗೆ: ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯೊಂದಿಗೆ ನಡೆದು ಬಂದರು. ರಥೋತ್ಸವದಲ್ಲಿ 10ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಂಡಿದ್ದವು.ರಥೋತ್ಸವ ಪ್ರಾರಂಭಕ್ಕೂ ಮುನ್ನ ಪರಂಪರೆಯಂತೆ ಎಸ್.ಎಸ್. ಕಳಸಾಪೂರಶೆಟ್ರ ನಿವಾಸದಿಂದ ಅಲಂಕೃತ ತೆರೆದ ವಾಹನದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀಗಳ ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಆಗಮಿಸಿದರು. ರಸ್ತೆಯುದ್ದಕ್ಕೂ ರಂಗೋಲಿಯನ್ನು ಹಾಕಿ ಭಕ್ತಿಯಿಂದ ಪೂಜ್ಯರನ್ನು ಸ್ವಾಗತಿಸಿದರು. ಭಜನಾ ಮಂಡಳಿ, ನಂದಿಕೋಲು, ಸಾಂಪ್ರದಾಯಿಕ ಉಡುಪಿನೊಂದಿಗೆ ಸಾಗಿದ ಛತ್ರಚಾಮರಗಳು ಭಕ್ತರ ಮನಸೂರೆಗೊಂಡವು. ತೆರೆದ ವಾಹನದಲ್ಲಿ ಆಗಮಿಸಿದ ಶ್ರೀಗಳಿಗೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಹಿಂದಿ ಭಾಷೆ ಪರೀಕ್ಷೆ ಗ್ರೇಡಿಂಗ್ ಗೆ ವಿರೋಧ

ಮುಂಡರಗಿ: ರಾಜ್ಯ ಸರ್ಕಾರ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಅಂಕ ನೀಡುವ ಪದ್ಧತಿಯನ್ನು ಏಕಾಏಕಿ ರದ್ದುಗೊಳಿಸಿ ಗ್ರೇಡ್ ಗೆ ಬದಲಾಯಿಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎಸ್. ಗಡ್ಡದ ಆರೋಪಿಸಿದ್ದಾರೆ.ಈ ಕುರಿತು ಮಂಗಳವಾರ ಪ್ರಕಟಣೆ ನೀಡಿರುವ ಅವರು, ಇದರಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ಹಿಂದಿ ಕಲಿಕೆಯಿಂದ ವಂಚಿತಗೊಳ್ಳುತ್ತಾರೆ. ಪರೀಕ್ಷೆ ನಡೆಯುವ ಈ ಸಂದರ್ಭದಲ್ಲಿ ಮಕ್ಕಳಿಗೆ ಮಾನಸಿಕವಾಗಿ ಗಲಿಬಿಲಿಯಾಗುತ್ತದೆ. ತ್ರಿಭಾಷಾ ನೀತಿಯಿಂದ ದ್ವಿಭಾಷಾ ನೀತಿಗೆ ಬದಲಾಯಿಸುವುದು ಸರಿಯಲ್ಲ. ರಾಜಕೀಯಕ್ಕಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರ ಅಕ್ಷಮ್ಯ ಅಪರಾಧ ಎಂದಿದ್ದಾರೆ.ಶೈಕ್ಷಣಿಕ ರಂಗದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ ಶೈಕ್ಷಣಿಕ ವರ್ಷದ ಪೂರ್ವದಲ್ಲಿಯೇ ಶಿಕ್ಷಕ ವೃಂದ, ಶಿಕ್ಷಣ ತಜ್ಞರು ಮತ್ತು ಸಮಾಜ ಚಿಂತಕರ ಜತೆಗೆ ಚರ್ಚಿಸಿ ಅವಶ್ಯಕತೆ ಕಂಡುಬಂದರೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬದಲಾವಣೆ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.