ದೊಡ್ಡಬಳ್ಳಾಪುರ: ಇಲ್ಲಿನ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ವಿವಿಧ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು
ದೊಡ್ಡಬಳ್ಳಾಪುರ: ಇಲ್ಲಿನ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ವಿವಿಧ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು.
ದಸರಾ ಅಂಗವಾಗಿ ಸಂಸ್ಥೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಗೊಂಬೆಗಳನ್ನು ಕೂರಿಸಲಾಗಿತ್ತು. ಪಟ್ಟದ ಗೊಂಬೆಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಶ್ರೀಶಾರದಾ ಮಾತೆ, ದುರ್ಗಾ ಮಾತೆ, ಚಾಮುಂಡೇಶ್ವರಿ ದೇವಿಯರ ಪೂಜಾ ಮಹೋತ್ಸವವೂ ನಡೆಯಿತು.ಆರ್ಎಲ್ಜೆಐಟಿಯ ವಿದ್ಯಾರ್ಥಿಗಳು ದಸರಾ, ನವರಾತ್ರಿ ಸಂಭ್ರಮದ ಭಾಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇಸಿ ವಿಭಾಗದ ಒಳಾಂಗಣದ ಹುಲ್ಲುಹಾಸಿನ ಮೇಲೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ ವಿಭಾಗ, ಅಲೈಡ್ ಸೈನ್ಸ್ ವಿಭಾಗ, ಎಐಎಂಎಲ್ ವಿಭಾಗಗಳ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳನ್ನು ನೀಡಿದರು. ಕೋಲಾಟ, ದಾಂಡಿಯಾ, ಗರ್ಬಾ ಸೇರಿದಂತೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳು ನಡೆದವು. ಸಿರ್ವಿ ತಂಡದಿಂದ ಆಯೋಜಿಸಿದ್ದ ಗುಜರಾತಿ ದಾಂಡಿಯಾ ನೃತ್ಯ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಪಠ್ಯ ಕೇಂದ್ರಿತ ಶಿಕ್ಷಣವನ್ನಷ್ಟೇ ಕೇಂದ್ರೀಕರಿಸುವುದು ಸರಿಯಲ್ಲ. ಸ್ಥಳೀಯ ಹಬ್ಬ ಹರಿದಿನಗಳ ಆಚರಣೆ, ಅವುಗಳ ಹಿನ್ನಲೆ, ಸಾಮಾಜಿಕ ಹಾಗೂ ಸಾಂಸ್ಕೃತಿಯ ವೈವಿಧ್ಯತೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವುದು ಅಗತ್ಯ. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ದಸರೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ವಿದ್ಯಾರ್ಥಿಗಳು ಮತ್ತು ತಂಡಗಳಿಗೆ ಬಹುಮಾನ, ಸ್ಮರಣಿಕೆಗಳನ್ನು ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಜೆ.ಆರ್.ರಾಕೇಶ್, ಎನ್.ಉತ್ತಮ್ಕುಮಾರ್, ವಿದ್ವತ್, ಸಂಜಯ್, ಉಪಪ್ರಾಂಶುಪಾಲ ಡಾ.ಸುನಿಲ್ಕುಮಾರ್, ಡಾ.ಶ್ರೀನಿವಾಸರೆಡ್ಡಿ, ಡಾ.ಎನ್.ಬಿ.ಶಂಕರ್, ಪ್ರೊ.ಎನ್.ಎಸ್.ಬಾಬುರೆಡ್ಡಿ, ಪ್ರೊ.ಕೆ.ಆರ್.ರವಿಕಿರಣ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಂಚಾಲಕರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಶೈಕ್ಷಣಿಕ ಘಟಕಗಳು ಮತ್ತು ವಿಭಾಗಗಳಲ್ಲಿ ಆಯುಧಪೂಜೆ, ವಿಜಯದಶಮಿ ಆಚರಣೆ ನಡೆಯಿತು.
17ಕೆಡಿಬಿಪಿ1-ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಕಣ್ಮನ ಸೆಳೆದ ಗೊಂಬೆ ಪ್ರದರ್ಶನ.
17ಕೆಡಿಬಿಪಿ2-ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.