ಬೇಡ್ತಿ ವರದಾ ನದಿ ಜೋಡಣೆ ಹೋರಾಟ ಯಾರ ವಿರುದ್ಧವೂ ಅಲ್ಲ, ಅದು ನಮ್ಮ ಬದುಕಿನ ಪ್ರಶ್ನೆ. ನಮ್ಮ ಬದುಕುವ ಹಕ್ಕಿಗಾಗಿ, ನಮ್ಮ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಬೇಡ್ತಿ ವರದಾ ನದಿ ಜೋಡಣೆ ಹೋರಾಟ ಯಾರ ವಿರುದ್ಧವೂ ಅಲ್ಲ, ಅದು ನಮ್ಮ ಬದುಕಿನ ಪ್ರಶ್ನೆ. ನಮ್ಮ ಬದುಕುವ ಹಕ್ಕಿಗಾಗಿ, ನಮ್ಮ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಹುಕ್ಕೇರಿಮಠದಲ್ಲಿ ಸೋಮವಾರ ಜರುಗಿದ ವಿಶೇಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಾಗಿ, ಸಂಘಟನಾತ್ಮಕವಾಗಿ ಗುರಿಮುಟ್ಟುವ ತನಕ ಹೋರಾಟ ಮಾಡುವುದು ಅವಶ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವರದಾ-ಬೇಡ್ತಿ ಜಾರಿ ಬಗ್ಗೆ ಒತ್ತಡ ಮತ್ತು ಮನವರಿಕೆ ಮಾಡುವ ಗುರಿ ಹೊಂದಿದ್ದೇವೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ನೀರು ಸಂಗ್ರಹಿಸುವ ಸ್ಟೋರೇಜ್ ವ್ಯವಸ್ಥೆ ಮಾಡುವ ಪ್ರಸ್ತಾವನೆಯನ್ನು ಡಿಪಿಆರ್‌ನಲ್ಲಿ ಸೇರಿಸಬೇಕೆಂಬ ಒತ್ತಾಯವನ್ನೂ ಸರಕಾರಕ್ಕೆ ಮಾಡಿದ್ದೇನೆ ಎಂದರು.ರಾಜ್ಯದ ಸಿಎಂ, ಡಿಸಿಎಂರಿಗೆ ರಾಜ್ಯದ ಸಂಸತ್ ಸದಸ್ಯರು, ಸಚಿವರು, ಪರಮಪೂಜ್ಯರು, ಶಾಸಕರು, ಮಾಜಿ ಶಾಸಕರು, ರೈತ ಸಂಘಟನೆ ಮುಖಂಡರು ಎಲ್ಲರೂ ಸೇರಿ ಭೇಟಿಯಾಗಿ ಮನವರಿಕೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ. ಒಂದೇ ನಿಯೋಗ ಎರಡು ಕಡೆಗಳಲ್ಲೂ ಭೇಟಿಯಾಗಲಿದೆ. ಸಿಎಂ, ಡಿಸಿಎಂ ಹಾಗೂ ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದರು.ಗ್ರಾಮಗಳಲ್ಲಿ ಜನಜಾಗೃತಿ ಸಭೆ: ವರದಾ ಮತ್ತು ಧರ್ಮಾ ನದಿ ತೀರದ ಜನತೆಗೆ ಅಷ್ಟೇಯಲ್ಲ, ಜಿಲ್ಲೆಯ ಇಡೀ ಗ್ರಾಮಗಳಿಗೆ ಇದರ ಅವಶ್ಯಕತೆ ಇದೆ. ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಯೋಜನೆಗಳು ಇದರ ಮೇಲೆ ಅವಲಂಬಿತವಾಗಿವೆ. ಪ್ರತಿಗ್ರಾಮಕ್ಕೂ ಅವಶ್ಯಕತೆ ಇದೆ. ಹಾವೇರಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವಿ, ಸವಣೂರು ತಾಲೂಕುಗಳು, ನಗರಸಭೆ, ಪುರಸಭೆಗಳಿಗೆ ಅವಶ್ಯಕತೆ ಇದೆ. ಹೀಗಾಗಿ ಅತ್ಯಂತ ಮಹತ್ವದ ಯೋಜನೆ ಆಗಿರುವುದರಿಂದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಜನಜಾಗೃತಿ ಸಭೆಗಳನ್ನು ಮಾಡಿ ಮನವರಿಕೆ ಮಾಡಿಕೊಡಲಾಗುತ್ತದೆ. ನಿರಂತರವಾಗಿ ಯೋಜನೆ ಬೆಂಬಲಿಸುವ ಉದ್ದೇಶದಿಂದ ತಜ್ಞರ ಸಮಿತಿ, ಕಾನೂನು ಸಲಹಾ ಸಮಿತಿ ರಚನೆ ಮಾಡುತ್ತೇವೆ ಎಂದರು. ಶ್ರೀಗಳ ನೇತೃತ್ವದಲ್ಲಿ ನಿಯೋಗ: ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಿಯೋಗ ಹೋಗಲಿದೆ. ಮಧ್ಯದಲ್ಲಿ ಹೋರಾಟದ ಅಗತ್ಯವಿದ್ದರೂ ಹೋರಾಟ ಮಾಡುತ್ತೇವೆ. ಈಗಾಗಲೇ ಗದಗ ಜಿಲ್ಲಾ ಉಸ್ತುವಾರಿ ಎಚ್.ಕೆ ಪಾಟೀಲ ಜತೆಗೂ ಮಾತನಾಡಿದ್ದೇವೆ. ಅಲ್ಲಿಯ ಶಾಸಕರು, ಸಂಸತ್ ಸದಸ್ಯರು, ಜನರು ಸಂಪೂರ್ಣ ಬೆಂಬಲ ಪಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ದೊಡ್ಡ ಆಂದೋಲನ ಮಾಡುತ್ತೇವೆ. ಅಂತಿಮವಾಗಿ ಯಾರ ವಿರುದ್ದವೂ ಅಲ್ಲö, ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ ಎಂದರು. ಸ್ವರ್ಣವಲ್ಲಿ ಶ್ರೀಗಳು ಶಿರಸಿಯಲ್ಲಿ ಮಾಡಿದ ದೊಡ್ಡ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಮುಂದಿನ ಭಾಗದಲ್ಲಿ ನೋಡೋಣ. ಮೊದಲು ಜಿಲ್ಲೆಯಲ್ಲಿ ಜನಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಮಾಡಿ ಅವಶ್ಯಕತೆ ಬಿದ್ದರೆ ಮುಂದೆ ದೊಡ್ಡ ಪ್ರಮಾಣದಲ್ಲಿ ಹಾವೇರಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದರು.