ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಯ ಉಳಿವಿಗಾಗಿ ಎಂತಹದ್ದೇ ಹೋರಾಟಕ್ಕೂ ನಾವು ಸಿದ್ಧರಿದ್ದು, ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ಮಂಜುನಾಥ ಸ್ವಾಮಿ ಭಕ್ತರು, ಪಕ್ಷಾತೀತವಾಗಿ ಮುಖಂಡರು, ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.ನಗರದ ರೋಟರಿ ಬಾಲಭನದಲ್ಲಿ ಮಂಗಳವಾರ ಕರಾವಳಿ ಮಿತ್ರ ಮಂಡಳಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಧರ್ಮ ಸಂರಕ್ಷಣಾ ಸಭೆಯಲ್ಲಿ ಸೇರಿದ್ದ ಭಕ್ತರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ, ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಕ್ಷೇತ್ರಕ್ಕೆ ನಿರಂತರ ಅವಮಾನ ಮಾಡಲಾಗುತ್ತಿದೆ. ವಿನಾಕಾರಣ ಶ್ರೀಕ್ಷೇತ್ರದ ಭಕ್ತರ ತಾಳ್ಮೆ ಪರೀಕ್ಷಿಸುವುದೂ ಸಲ್ಲದು ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ಭಕ್ತರು ರವಾನಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ವಿಶ್ವಾದ್ಯಂತ ಭಕ್ತರನ್ನು ಹೊಂದಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಕೆಲವರಿಂದ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಅಸಂಖ್ಯಾತ ಭಕ್ತರನ್ನು ಕೆರಳಿಸಿದೆ. ಈಗಾಗಲೇ ಎಸ್ಐಟಿ ತನಿಖೆ ಕೈಗೊಂಡಿದೆ. ವೀರೇಂದ್ರ ಹೆಗ್ಗಡೆ ತನಿಖೆಗೆ ಸ್ವಾಗತಿಸಿದ್ದಾರೆ. ಹೀಗಿದ್ದರೂ ಯುಟ್ಯೂಬ್, ಜಾಲತಾಣಗಳಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಜಾಲತಾಣಗಳಲ್ಲಿ ಶೇ.95ರಷ್ಟು ಸುಳ್ಳು ಸುದ್ದಿ ಬಿತ್ತರವಾಗುತ್ತಿದೆ ಎಂದರು.ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರು ಯಾರೋ ಗೊತ್ತಿಲ್ಲ. ಯಾವುದೇ ಮತಗಳ ಬಗ್ಗೆಯೂ ಅಪನಂಬಿಕೆ ಮಾತುಗಳು ಬೇಡ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ನಾವೆಲ್ಲರೂ ಕಾನೂನನ್ನು ಗೌರವಿಸೋಣ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನಾವೆಲ್ಲರೂ ಧರ್ಮಸ್ಥಳ ಕ್ಷೇತ್ರದ ಪರವಿದ್ದೇವೆ. ಮಹೇಶ ಶೆಟ್ಟಿ ತಿಮ್ಮ
ರೋಡಿ ಮತ್ತು ಗ್ಯಾಂಗ್ ಗೆ ಶ್ರೀಕ್ಷೇತ್ರ ಧರ್ಮಸ್ಥಳದ ಇತಿಹಾಸವೇ ಗೊತ್ತಿಲ್ಲ. ತಿಮ್ಮರೋಡಿ ಮತ್ತು ತಂಡದ ಬಳಿ ಸಾಕ್ಷ್ಯಗಳು, ದಾಖಲೆಗಳಿದ್ದರೆ ಮೊದಲು ಎಸ್ಐಟಿ ತಂಡಕ್ಕೆ ಕೊಡಲಿ. ಅದನ್ನು ಬಿಟ್ಟು, ಮೊಬೈಲ್‌ನಲ್ಲಿ ತಮ್ಮಲ್ಲಿ ಸಾಕ್ಷ್ಯವಿದೆಯೆಂದು ಅಪಪ್ರಚಾರ ಮಾಡುವುದು ಸಲ್ಲದು ಎಂದು ಆಕ್ಷೇಪಿಸಿದರು.ಪಾಲಿಕೆ ಮಾಜಿ ಉಪ ಮೇಯರ್, ಕಾಂಗ್ರೆಸ್ ಮುಖಂಡ ಸೋಗಿ ಶಾಂತಕುಮಾರ, ಹಿರಿಯ ಪತ್ರಕರ್ತ ಎಸ್.ಬಿ.ಜಿನದತ್ತ. ಭಕ್ತ ಮಂಡಳಿ ಅಧ್ಯಕ್ಷ ವರುಣ್, ಹಿರಿಯ ವರ್ತಕ ಎಸ್.ಟಿ.ಕುಸುಮ ಶ್ರೇಷ್ಠಿ, ಹೊಟೆಲ್ ಉದ್ಯಮಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ಅಣಬೇರು ಮಂಜುನಾಥ, ಜಯಪ್ರಕಾಶ, ನಾಗಪ್ರಕಾಶ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ, ಹಿರಿಯ ಕಬಡ್ಡಿ ಪಟು ಕಬಡ್ಡಿ ಮಲ್ಲು, ಶ್ರೀಕಾಂತ ಬಗರೆ, ರಾಜು ಭಂಡಾರಿ, ಎಲ್.ಎಂ.ಎಚ್.ಸಾಗರ್, ಅಂಕಿತ್, ಮಹೇಶ ಶೆಟ್ಟಿ, ಮಹಾಂತೇಶ, ಸೌಮ್ಯ, ಸರ್ವಮಂಗಳ, ಕಾವ್ಯ ಇತರರು ಇದ್ದರು.
ಸರ್ಕಾರಗಳು ಮಾಡದ ಅಭಿವೃದ್ಧಿ ಕೆಲಸಗಳನ್ನು ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಮಾಡುತ್ತಾ ಬಂದಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಾಲಸೌಲಭ್ಯ, ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳು, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಅಭಿವೃದ್ಧಿಗಳನ್ನು ಮಾಡಿದ್ದು, ಮಾಧ್ಯಮಗಳು ಇವುಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ.ಸೋಗಿ ಶಾಂತಕುಮಾರ, ಮಾಜಿ ಉಪ ಮೇಯರ್.
ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನ ಖಂಡಿಸಿ, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಪರವಾಗಿ ಆ.20ರಂದು ಬೆಳಿಗ್ಗೆ 10ಕ್ಕೆ ಭಕ್ತ ಮಂಡಳಿಯಿಂದ ದಾವಣಗೆರೆಯ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು, ಪ್ರತಿಭಟನೆ ನಂತರ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜಾಥಾದಲ್ಲಿ ಸುಮಾರು 10 ಸಾವಿರಕ್ಕೂ ಅದಿಕ ಭಕ್ತರು ಸೇರುವ ನಿರೀಕ್ಷೆಯಿದೆ.ಅಣಬೇರು ಮಂಜುನಾಥ, ಶ್ರೀಕ್ಷೇತ್ರದ ಭಕ್ತ.