ಕೋಳಘಟ್ಟ ಜೆಲ್ಲಿ ಕ್ರಷರ್ ನಿಲ್ಲಿಸಲು ಹೋರಾಟ ನಿರಂತರ: ರೇಣುಕಯ್ಯ

| Published : Mar 17 2025, 12:34 AM IST

ಕೋಳಘಟ್ಟ ಜೆಲ್ಲಿ ಕ್ರಷರ್ ನಿಲ್ಲಿಸಲು ಹೋರಾಟ ನಿರಂತರ: ರೇಣುಕಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಜೆಲ್ಲಿ ಕ್ರಷರ್ ಘಟಕವನ್ನು ಸ್ಥಗಿತಗೊಳಿಸುವ ತನಕ ಹೋರಾಟವನ್ನು ಸಾರ್ವಜನಿಕರು, ರೈತಾಪಿಗಳು ಮತ್ತು ರೈತ ಸಂಘಟನೆಗಳ ಸಹಯೋಗದಲ್ಲಿ ನಿರಂತರವಾಗಿ ಮುಂದುವರೆಸಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಂ.ಬಿ.ರೇಣುಕಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಜೆಲ್ಲಿ ಕ್ರಷರ್ ಘಟಕವನ್ನು ಸ್ಥಗಿತಗೊಳಿಸುವ ತನಕ ಹೋರಾಟವನ್ನು ಸಾರ್ವಜನಿಕರು, ರೈತಾಪಿಗಳು ಮತ್ತು ರೈತ ಸಂಘಟನೆಗಳ ಸಹಯೋಗದಲ್ಲಿ ನಿರಂತರವಾಗಿ ಮುಂದುವರೆಸಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಂ.ಬಿ.ರೇಣುಕಯ್ಯ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೋಳಘಟ್ಟದ ಜೆಲ್ಲಿ ಕ್ರಷರ್ ಘಟಕವನ್ನು ಸ್ಥಬ್ದಗೊಳಿಸಬೇಕೆಂದು ಆಗ್ರಹಿಸಿ ತಾವು ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಪರವಾಗಿ ತಾವೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೆ. ಆದರೆ ತಾಂತ್ರಿಕ ಕಾರಣದಿಂದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಆದರೆ ಜೆಲ್ಲಿ ಕ್ರಷರ್ ನ್ನು ಸ್ಥಬ್ದಗೊಳಿಸಬೇಕೆಂಬ ತಮ್ಮ ಆಗ್ರಹ ಮುಂದುವರೆಯಲಿದೆ. ಈ ಸಲುವಾಗಿ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ರೇಣುಕಯ್ಯ ಹೇಳಿದರು. ಕೋಳಘಟ್ಟದ ಜೆಲ್ಲಿ ಕ್ರಷರ್ ನ್ನು ಅಕ್ರಮವಾಗಿ ಸ್ಥಾಪಿಸಲಾಗಿದೆ. ಸರ್ವೇ ನಂಬರ್ 55 ಗೋಮಾಳವಾಗಿದೆ. ಆ ಪ್ರದೇಶವನ್ನೂ ಸಹ ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಕಲ್ಲುಗಳನ್ನು ಮನಸೋ ಇಚ್ಚೆ ಸ್ಪೋಟಿಸಲಾಗುತ್ತಿದೆ. ಜೆಲ್ಲಿ ಕ್ರಷರ್ ಘಟಕದ ಕಲ್ಮಶವನ್ನು ಮಲ್ಲಾಘಟ್ಟ ಕೆರೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರು ಕಲುಷಿತಗೊಂಡು ಸಾರ್ವಜನಿಕರು ಕುಡಿಯಲು ಯೋಗ್ಯವಾಗಿಲ್ಲ ಎಂದು ರೇಣುಕಯ್ಯ ದೂರಿದರು. ಅತಿ ಹೆಚ್ಚು ಜೆಲ್ಲಿ ಕಲ್ಲುಗಳನ್ನು ತುಂಬಿರುವ ವಾಹನಗಳನ್ನು ರಸ್ತೆಯ ಮೇಲೆ ಓಡಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ವಿಷಯವನ್ನು ಖಂಡಿಸಿ ಪ್ರತಿಭಟಿಸಿದರೆ ದಂಡಿನಶಿವರ ಪೊಲೀಸರನ್ನು ಮುಂದಿಟ್ಟುಕೊಂಡು ಅಮಾಯಕ ಜನರ ಮೇಲೆ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗುತ್ತಿದೆ. ಜೆಲ್ಲಿ ಕ್ರಷರ್ ನ ಮಾಲೀಕ ರಾಜುಗೌಡ ಈಗಾಗಲೇ ಗ್ರಾಮಸ್ಥರ ಮೇಲೆ ಜಾತಿ ನಿಂದನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಪೊಲೀಸರಲ್ಲಿ ದಾಖಲಿಸಿ ಅಮಾಯಕರು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳುವುದೇ ತಪ್ಪಾಗಿದೆ. ಈ ಜೆಲ್ಲಿ ಘಟಕದ ವಿರುದ್ಧ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.

ಈ ಜೆಲ್ಲಿ ಕ್ರಷರ್ ನಿಂದ ಗ್ರಾಮಸ್ಥರಿಗೆ ಸಾಕಷ್ಟು ಅನಾನುಕೂಲವಾಗುತ್ತಿದ್ದರೂ ಸಹ ತಾಲೂಕು ಆಡಳಿತ, ಜಿಲ್ಲಾಡಳಿತ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಜಾಣಕುರುಡನ್ನು ವಿರೋಧಿಸಿ ತಾಲೂಕು ರೈತ ಸಂಘದ ವತಿಯಿಂದ ಘಟಕದ ಬಳಿ ಹಾಗೂ ತಾಲೂಕು ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗಂಗಾಧರಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಗಂಗಾಧರಯ್ಯ, ಮುಖಂಡರಾದ ಜಯರಾಮ್, ನಾಗರಾಜು, ವಿಜಯಕುಮಾರ್, ಶಶಿ, ಸಿದ್ದರಾಮಣ್ಣ, ಗೌರಮ್ಮ, ಭಾಗ್ಯಮ್ಮ, ಉಮೇಶ್, ಲೋಕೇಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.