ಮಾ.9ಕ್ಕೆ ವರ್ಷದ ಮೊದಲ ಮೆಗಾ ಲೋಕ ಅದಾಲತ್

| Published : Jan 31 2024, 02:19 AM IST

ಸಾರಾಂಶ

ಈ ವರ್ಷವೂ ಒಟ್ಟು 4 ಮೆಗಾ ಲೋಕ್ ಅದಾಲತ್‍ನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮೊಟ್ಟ ಮೊದಲನೆಯ ಲೋಕ್ ಅದಾಲತ್ ಮಾರ್ಚ್ 9 ರಂದು ಚಿತ್ರದುರ್ಗ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿಯೂ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ತೀರ್ಮಾನದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಈ ವರ್ಷದ ಮೊದಲ ಮೆಗಾ ಲೋಕ್ ಅದಾಲತ್‍ನ್ನು ಮಾರ್ಚ್ 9ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಲೋಕ ಅದಾಲತ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 2023 ನೇ ಸಾಲಿನಲ್ಲಿ ಒಟ್ಟು 4 ಮೆಗಾ ಲೋಕ್ ಅದಾಲತ್ ಮಾಡಿದ್ದು, ಅವುಗಳಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 10,601 ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ 3,34,251 ಪ್ರಕರಣಗಳನ್ನು ಸೇರಿಸಿ ಒಟ್ಟು 3,44,852 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇವೆ. ಚಿತ್ರದುರ್ಗ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 18 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದು ತಿಳಿಸಿದರು.

ಈ ವರ್ಷವೂ ಒಟ್ಟು 4 ಮೆಗಾ ಲೋಕ್ ಅದಾಲತ್‍ನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮೊಟ್ಟ ಮೊದಲನೆಯ ಲೋಕ್ ಅದಾಲತ್ ಮಾರ್ಚ್ 9 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿಯೂ ನಡೆಯಲಿದೆ. 21,687 ಸಿವಿಲ್, 18,376 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 40,063 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸುಮಾರು 10 ಸಾವಿರ ಪ್ರಕರಣಗಳನ್ನು ರಾಜೀ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸೌಹಾರ್ದಯುತವಾದ ಜೀವನವನ್ನು ನಡೆಸಲು ಸಾಧ್ಯವಾಗಬೇಕು ಎಂಬುದು ಲೋಕ್ ಅದಾಲತ್ ಉದ್ದೇಶ. ಪ್ರಕರಣಗಳನ್ನು ಸುಲಭವಾಗಿ ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ ಇನ್ನೂ ನ್ಯಾಯಾಲಯವನ್ನು ಪ್ರವೇಶಿಸದೇ ಇರುವಂತಹ ಪ್ರಕರಣಗಳನ್ನು ಸಹ ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು. ಉಭಯ ಪಕ್ಷಗಾರರಿಗೂ ಒಪ್ಪಿಗೆಯಾದರೇ ಮಾತ್ರ ಲೋಕ್ ಅದಾಲತ್‍ನಲ್ಲಿ ಅಂತಿಮ ತೀರ್ಮಾನವಾಗುತ್ತದೆ. ಈ ಅಂತಿಮ ತೀರ್ಮಾನವು ನ್ಯಾಯಾಲಯದಲ್ಲಿ ಡಿಕ್ರಿಯಾದರೇ ಯಾವ ಮೌಲ್ಯವನ್ನು ಹೊಂದಿರುತ್ತದೋ ಅದೇ ಮೌಲ್ಯವನ್ನು ಹೊಂದಿರುತ್ತದೆ. ಆಕಸ್ಮಾತಾಗಿ ಅಂತಿಮ ತೀರ್ಮಾನದ ಪ್ರಕಾರವಾಗಿ ಯಾರಾದರೂ ಒಬ್ಬ ಪಕ್ಷಗಾರರು ನಡೆದುಕೊಳ್ಳದಿದ್ದರೆ ಆಗ ಅವರ ವಿರುದ್ಧ ನ್ಯಾಯಾ ಲಯದಲ್ಲಿ ಅಮಲ್ಜಾರಿ ಅರ್ಜಿಯನ್ನು ಸಲ್ಲಿಸಿ ಆ ತೀರ್ಮಾನಕ್ಕೆ ಅವರನ್ನು ಬದ್ಧರಾಗಿ ಮಾಡಬಹುದು. ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲದ ಕಾರಣ ಅದು ಅಂತಿಮ ತೀರ್ಮಾನ ವಾಗುತ್ತದೆ ಎಂದರು.

ಈ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನಃ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಇತರೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಪಟ್ಟಂತಹ ಪ್ರಕರಣಗಳು, ವಿದ್ಯುತ್ ನೀರಿನ ಶುಲ್ಕದ ಪ್ರಕರಣಗಳು ಹಾಗೂ ನಾನ್ ಕಾಂಪೌಂಡಬಲ್ ಪ್ರಕರಣಗಳನ್ನು ಹೊರತು ಪಡಿಸಿದ ಉಳಿದ ಎಲ್ಲಾ ಅಪರಾಧಿಕ ಪ್ರಕರಣಗಳು ವಿಚ್ಛೇದನವನ್ನು ಹೊರತುಪಡಿಸಿ ಇತರೇ ವೈವಾಹಿಕ ಪ್ರಕರಣಗಳನ್ನು ಹಾಗೂ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರುವ ಎಲ್ಲಾ ರೀತಿಯ ಸಿವಿಲ್ ಪ್ರಕರಣ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿ ಇರುವ ಚೆಕ್ ಅಮಾನ್ಯದ ಪ್ರಕರಣಗಳು ಹಾಗೂ ಎಲ್ಲಾ ರೀತಿಯ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು ಎಂದರು.

ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ dlsachitradurga1@gmail.comಗೆ ಸಂಪರ್ಕಿಸಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಚೇರಿ ದೂರವಾಣಿ ಸಂಖ್ಯೆ 08194-222322 ಕ್ಕೂ ಸಂಪರ್ಕಿಸಬಹುದು ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಖುದ್ದಾಗಿ ಭೇಟಿ ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಬಹುದು ಎಂದು ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.