ಸಾರಾಂಶ
ದೇಶದಲ್ಲೇ ಮೊದಲ ಬಾರಿಗೆ ರಾಜೀವ್ ಗಾಂಧಿ ವಿವಿ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಮುಂದಿನ ಮಾರ್ಚ್‌ನಲ್ಲಿ ಟ್ಯಾಬ್ ಬಳಸಿ ಪರೀಕ್ಷೆ ನಡೆಸಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಇದೇ ಮೊದಲ ಬಾರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ (ಪೇಪರ್‌ಲೆಸ್) ನಡೆಸಲು ಮುಂದಾಗಿದ್ದು, ಇಂತಹ ಪ್ರಯೋಗ ನಡೆಸುವ ದೇಶದ ಮೊದಲ ವಿಶ್ವವಿದ್ಯಾಲಯ ನಮ್ಮದಾಗಿದೆ ಎಂದು ಕುಲಪತಿ ಡಾ। ಎಂ.ಕೆ.ರಮೇಶ್ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಮಾರ್ಚ್‌ನಲ್ಲಿ ಫೆಲೋಶಿಪ್ ಮತ್ತು ಪಿಜಿಯೋಥೆರಪಿ ಕೋರ್ಸ್‌ಗಳ ಅಂದಾಜು ಎರಡು ಸಾವಿರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ವ್ಯವಸ್ಥೆಯಲ್ಲಿ ಕಂಡು ಬರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡ ನಂತರ ವಿವಿ ವ್ಯಾಪ್ತಿಯ 1,400 ಕಾಲೇಜುಗಳಲ್ಲಿಯೂ ಆನ್‌ಲೈನ್ ಪರೀಕ್ಷೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗುವುದು ಎಂದರು.
ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುತ್ತಿರುವ ಕಾರಣ ಪ್ರತಿ ವಿದ್ಯಾರ್ಥಿಗೆ 8 ರಿಂದ 10 ಸಾವಿರ ರು. ಮೌಲ್ಯದ ಟ್ಯಾಬ್ ವಿತರಣೆ ಮಾಡಲಾಗುತ್ತದೆ. ವಿದ್ಯಾರ್ಥಿಯು ಈ ಟ್ಯಾಬ್ ಮೂಲಕವೇ ಪರೀಕ್ಷೆ ಬರೆಯಬೇಕಾಗುತ್ತದೆ. ವಿವಿಯ ಈ ಕ್ರಮದಿಂದ ಪ್ರತಿ ಸೆಮಿಸ್ಟರ್‌ನಲ್ಲಿ ಉತ್ತರ ಪತ್ರಿಕೆಗಳಿಗೆ ವೆಚ್ಚವಾಗುತ್ತಿರುವ 7 ರಿಂದ 8 ಕೋಟಿ ರು. ಉಳಿತಾಯವಾಗಲಿದೆ ಎಂದರು.ಪರೀಕ್ಷಾ ಸುಧಾರಣೆಗಾಗಿಕೃತಕ ಬುದ್ಧಿಮತ್ತೆ ಬಳಕೆ
ಆರ್‌ಜಿಯುಎಚ್‌ಎಸ್ ಈಗಾಗಲೇ ಪರೀಕ್ಷಾ ಸುಧಾರಣೆಯಲ್ಲಿ ಮಾದರಿಯಾಗಿದೆ. ಪರೀಕ್ಷೆ ನಡೆದ ಕೇವಲ 2 ಗಂಟೆಗಳಲ್ಲಿ ಪರೀಕ್ಷಾ ಕೇಂದ್ರಗಳಿಂದಲೇ ಉತ್ತರ ಪತ್ರಿಕೆಗಳನ್ನು ಸ್ಕಾೃನ್ ಮಾಡಿ ಆನ್‌ಲೈನ್‌ನಲ್ಲಿ ಸರ್ವರ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ಮೌಲ್ಯಮಾಪನ ಕೂಡ ಆನ್‌ಲೈನ್‌ನಲ್ಲಿಯೇ ನಡೆಸಲಾಗುತ್ತಿದೆ. ಈಗ ಆನ್‌ಲೈನ್‌ನಲ್ಲಿಯೇ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಯಂತಹ ಕ್ರಮಗಳಿವೆ. ಜೊತೆಗೆ ಹೊಸದಾಗಿ ವಿದ್ಯಾರ್ಥಿಗಳು ಮಾತನಾಡಿದರೆ ಅದರ ಆಡಿಯೋ ರೆಕಾರ್ಡ್ ಮಾಡುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಮುಖಚರ್ಯೆ ಗುರುತಿಸುವ ತಂತ್ರಜ್ಞಾನ ಸೇರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಮೇಶ್ ವಿವರಿಸಿದರು.