ಸ್ತ್ರೀಯರಿಗೆ ಮೊದಲು ಸಮಾನತೆ ನೀಡಿದ್ದು ಶರಣರು: ಬಸವ ಶಾಂತಲಿಂಗ ಸ್ವಾಮೀಜಿ

| Published : Mar 27 2025, 01:00 AM IST

ಸ್ತ್ರೀಯರಿಗೆ ಮೊದಲು ಸಮಾನತೆ ನೀಡಿದ್ದು ಶರಣರು: ಬಸವ ಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕು ಮನೆಯ ಕಿಟಕಿಯಂತೆ, ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು. ಹೆಣ್ಣುಮಕ್ಕಳನ್ನು ಹೀಗಳೆಯುತ್ತಿದ್ದ ಕಾಲಘಟ್ಟದಲ್ಲಿ ಶಿವಶರಣರು ಅವರನ್ನು ಹೊಗಳುವಂತೆ ಮಾಡಿದರು.

ಹಾವೇರಿ: ಹೆಣ್ಣು ಸಮಾಜದ ಕಣ್ಣಾಗಿದ್ದು, ಸ್ತ್ರೀಯರಿಗೆ ಸಮಾನತೆಯ ಹಕ್ಕನ್ನು ನೀಡಿ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತಗೊಳಿಸಿದ ಹೆಗ್ಗಳಿಕೆ ಅನುಭವ ಮಂಟಪಕ್ಕೆ ಸಲ್ಲುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.ನಗರದ ಹೊಸಮಠದ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಬಳಗದ ಜಂಟಿ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬದುಕು ಮನೆಯ ಕಿಟಕಿಯಂತೆ, ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು. ಹೆಣ್ಣುಮಕ್ಕಳನ್ನು ಹೀಗಳೆಯುತ್ತಿದ್ದ ಕಾಲಘಟ್ಟದಲ್ಲಿ ಶಿವಶರಣರು ಅವರನ್ನು ಹೊಗಳುವಂತೆ ಮಾಡಿದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಅವರಂಥ ದಿಟ್ಟ ಶರಣೆಯರು ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಪ್ರಶ್ನಿಸಿದರು. ಜಗತ್ತಿನ ಮೊದಲ ಸಂಸತ್ತಿಗೆ ಮೆರುಗು ತಂದರು. ಮಹಿಳೆಯರ ಶ್ರೇಷ್ಠತೆಯನ್ನು ಸಾರಿ ಮೌಲ್ಯ ಹೆಚ್ಚಿಸಿದರು. ಅವರ ಪ್ರೇರಣೆಯಿಂದ ಸಂಪತ್ತಿಗಿಂತ ಸಂಬಂಧಗಳಿಗೆ ಒತ್ತು ಕೊಟ್ಟು ಸಾಗಬೇಕಿದೆ ಎಂದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆದ ಬಳಿಕ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರುವರು. ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಗುತ್ತಿರುವರು. ಸವಾಲುಗಳನ್ನು ಮೀರಿ ತನ್ನತನವನ್ನು ಉಳಿಸಿಕೊಂಡು ಮುನ್ನಡೆಯುತ್ತಿದ್ದಾಳೆ. ಇದು ಅಭಿಮಾನ ಪಡುವ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆ ತನ್ನ ಪಾಲಿನ ಜವಾಬ್ದಾರಿ ನಿಭಾಯಿಸುತ್ತಿದ್ದಾಳೆ. ಆದರೆ ಇಂದಿಗೂ ತನಗೆ ಬೇಕಿರುವ ಹಕ್ಕುಗಳನ್ನು ಕೇಳುತ್ತಿದ್ದು, ತಾರತಮ್ಯ ಸಹಿಸದ ಆಕೆ ಸಬಲೀಕರಣದತ್ತ ಮುನ್ನುಗ್ಗಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಸುಮಾನ್ ಕಟಕೋಳ, ಡಾ. ಉಷಾ ವೀರಾಪುರ, ರೇಣುಕಾ ಶಿರಗಂಬಿ, ಉಮಾದೇವಿ ಹಿರೇಮಠ, ಲಲಿತಾ ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಪಲ್ಲವಿ ಜಿ., ಬಸಮ್ಮ ನೆಟಗಲ್ಲನವರ, ಜುಬೇದಾ ನಾಯಕ್, ಗೀತಾಂಜಲಿ, ಮಮತಾ ನಂದಿಹಳ್ಳಿ, ಕಾವ್ಯಾ ಕುಂಟನಹೊಸಳ್ಳಿ, ಅನುಷಾ ಹಿರೇಮಠ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಕಬ್ಬಿಣಕಂತಿಮಠ ಹಾಗೂ ಅನಿತಾ ಉಪಲಿ ನಿರೂಪಿಸಿದರು. ಚಂಪಾ ಹುಣಸಿಕಟ್ಟಿ ಸ್ವಾಗತಿಸಿದರು. ಭಾಗ್ಯಾ ಎಂ.ಕೆ. ವಂದಿಸಿದರು.