ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹತ್ತಾರು ಬಗೆಯ ಬಣ್ಣ, ವಿಭಿನ್ನ ಗಾತ್ರದ ಮೀನುಗಳು, ಸಾಂಪ್ರದಾಯಿಕವಾಗಿ ಮೀನುಗಾರಿಕೆಗೆ ಬಳಸುತ್ತಿದ್ದ ಸಾಧನಗಳು, ವಿವಿಧ ವಿನ್ಯಾಸದ ದೋಣಿಗಳ ಜೊತೆಗೆ ಬಾಯಲ್ಲಿ ನೀರೂರಿಸುವ ಮೀನಿನ ವಿವಿಧ ಖಾದ್ಯಗಳು. ಇವು ಮೀನುಗಾರಿಕೆ ಇಲಾಖೆಯು ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿರುವ ‘ಮತ್ಸ್ಯ ಮೇಳ’ದಲ್ಲಿ ಕಂಡು ಬಂದ ದೃಶ್ಯಗಳು.ಮತ್ಸ್ಯಮೇಳ ಪ್ರವೇಶಿಸುತ್ತಿದ್ದಂತೆ ‘ಅಂಡರ್ ವಾಟರ್ ಫಿಶ್ ಆಕ್ವೇರಿಯಂ’ ನಿಮ್ಮನ್ನು ಸ್ವಾಗತಿಸುತ್ತದೆ. ಆಕ್ವೇರಿಯಂನಲ್ಲಿ ವಿಭಿನ್ನ ಬಣ್ಣ, ಗಾತ್ರದ ಮೀನುಗಳಿದ್ದು, ವಿಶೇಷ ಅನುಭವ ನೀಡಲಿವೆ. ಮುಂದೆ ಸಾಗುತ್ತಿದ್ದಂತೆ ಮೀನುಗಾರಿಕೆ ಬಗ್ಗೆ ಮಾಹಿತಿ ನೀಡುವ ಹಲವು ಮಳಿಗೆಗಳಿವೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಇಚ್ಚಿಲದ ಮಳಿಗೆಯಲ್ಲಿ ಮೀನುಗಾರಿಕೆಗೆ ಈ ಹಿಂದೆ ಬಳಸುತ್ತಿದ್ದ ಸಾಂಪ್ರದಾಯಿಕ ಸಾಧನಗಳನ್ನು ಪ್ರದರ್ಶನಕ್ಕಿಟ್ಟಿರುವುದು ವಿಶೇಷವಾಗಿದೆ.
ನಾವಿಗೇಟರ್, ಗೊರ್ತಲೆ, ಸ್ಟೇರಿಂಗ್, ಪಾರಂಪರಿಕ ನೂಲು, ತಿಗೆರೆ, ಪದೆಗಿ, ಕಲ್ಲಿರೆ, ಸೀಸ ಮಾಲೆ, ಈಟಿ, ವಿವಿಧ ವಿನ್ಯಾಸದ ಬಲೆಗಳು, ನೆತ್ತಿ ಕಲ್ಲುಗಳು, ತೋಕಲ್, ತರ್ಬಲೆ, ಗ್ಯಾಸ್ ಲೈಟ್, ರಾಟೆ, ಫಿಶ್‌ಫೈಂಡ್ ಸೆಟ್, ರೂಮಿ, ನೀರ ಮರಾಯಿ, ಮಾರಿಬಲೆ ತಟ್ಟೆ, ದಂಡು ಸೇರಿದಂತೆ ವಿವಿಧ ವಿನ್ಯಾಸದ ದೋಣೆಗಳು ಸೇರಿದಂತೆ ಹಿಂದಿನ ಕಾಲದಲ್ಲಿ ಮೀನುಗಾರಿಕೆಗೆ ಬಳಸುತ್ತಿದ್ದ 66 ವಿಧದ ಸಾಧನಗಳನ್ನು ಪ್ರದರ್ಶನಕ್ಕಿಡಲಾಗಿದೆ.ಹಳೆಯ ವಸ್ತುಗಳ ಅನಾವರಣ:
‘ಇತ್ತೀಚೆಗೆ ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಆದರೆ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಬಳಸುತ್ತಿದ್ದ ಸಾಧನಗಳನ್ನು ಜನರಿಗೆ ಪರಿಚಯಿಸಬೇಕು ಎಂದು ಇವುಗಳನ್ನು ಪ್ರದರ್ಶನಕ್ಕಿಡಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಉಡುಪಿ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ವಿವರಿಸಿದ್ದಾರೆ.ವಿವಿಧ ತಳಿ, ಬಣ್ಣ, ಆಕಾರಗಳ ಮೀನುಗಳ ವೀಕ್ಷಣೆಗೂ ಇಲ್ಲಿ ಅವಕಾಶವಿದೆ. ಆಕ್ವೇರಿಯಂನಲ್ಲಿ ಬಳಸುವ ಸಣ್ಣ ಅಲಂಕಾರಿಕಾ ಮೀನುಗಳಿಂದ ಹಿಡಿದು ಖಾದ್ಯಕ್ಕೆ ಬಳಸುವ ದೊಡ್ಡ ಮೀನುಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು. 3 ದಿನಗಳ ಮತ್ಸ್ಯ ಮೇಳಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಭಾನುವಾರ ಕೊನೆಯ ದಿನವಾಗಿದೆ.
ಬಗೆಬಗೆಯ ಮತ್ಸ್ಯ ಭೋಜನಮತ್ಸ್ಯ ಮೇಳದಲ್ಲಿ ಹಲವು ಆಹಾರ ಮಳಿಗೆಗಳಿದ್ದು ಮೀನಿನಿಂದ ತಯಾರಿಸಿದ ಖಾದ್ಯಗಳ ರುಚಿ ಸವಿಯಬಹುದು. ಇಂಡಿಯನ್ ಸಾಲ್ಮನ್, ಬಾಂಗ್ಡಾ, ಮತ್ತಿ, ಜಿಲೇಬಿ, ಆಂಜಲ್ ಮತ್ತಿತರ ಮೀನುಗಳಿಂದ ಮಾಡಿದ ಖಾದ್ಯಗಳನ್ನು ಸೇವಿಸಬಹುದು.
;Resize=(128,128))
;Resize=(128,128))
;Resize=(128,128))
;Resize=(128,128))