ಎಲ್ಲ ಅನಾಹುತ, ಸತ್ಕಾರ್ಯಗಳಿಗೆ ಪಂಚೇಂದ್ರಿಯ ಕಾರಣ

| Published : Jun 22 2024, 12:45 AM IST

ಸಾರಾಂಶ

ಚಿತ್ರದುರ್ಗ, ಎಲ್ಲ ಅನಾಹುತಗಳಿಗೂ ಹಾಗೂ ಸತ್ಕಾರ್ಯಗಳಿಗೂ ಪಂಚೇಂದ್ರಿಯಗಳೇ ಕಾರಣ. ಅವನ್ನು ಹತೋಟಿಯಲ್ಲಿಡುವುದು ಕಷ್ಟವಾದರೂ ಸಹಿತ ಅವನ್ನು ಹಿಡಿತದಲ್ಲಿಟ್ಟುಕೊಂಡು ತನ್ಮೂಲಕ ನಾಡಿನ ಪ್ರಗತಿಗೆ ನಮ್ಮ ಜ್ಞಾನವನ್ನು ಉಪಯೋಗಿಸಬೇಕೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಮುರುಘಾಮಠದಲ್ಲಿ ನಡೆದ ಯೋಗ ಸಂಭ್ರಮ ಸಮಾರೋಪದಲ್ಲಿ ಡಾ.ಬಸವಕುಮಾರ ಸ್ವಾಮೀಜಿಕನ್ನಡಪ್ರಭವಾರ್ತೆ, ಚಿತ್ರದುರ್ಗ

ಎಲ್ಲ ಅನಾಹುತಗಳಿಗೂ ಹಾಗೂ ಸತ್ಕಾರ್ಯಗಳಿಗೂ ಪಂಚೇಂದ್ರಿಯಗಳೇ ಕಾರಣ. ಅವನ್ನು ಹತೋಟಿಯಲ್ಲಿಡುವುದು ಕಷ್ಟವಾದರೂ ಸಹಿತ ಅವನ್ನು ಹಿಡಿತದಲ್ಲಿಟ್ಟುಕೊಂಡು ತನ್ಮೂಲಕ ನಾಡಿನ ಪ್ರಗತಿಗೆ ನಮ್ಮ ಜ್ಞಾನವನ್ನು ಉಪಯೋಗಿಸಬೇಕೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು,

ಮುರುಘಾಮಠದ ಅನುಭವ ಮಂಟಪದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಏರ್ಪಡಿಸಿದ್ದ ಮೂರುದಿನಗಳ ಯೋಗ ಸಂಭ್ರಮ 2024ರ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಜಗತ್ತನ್ನು ಗೆಲ್ಲುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನದತ್ತ ಸಾಗಿದರೆ ನಮ್ಮ ಸುತ್ತಲಿನ ಪರಿಸರ ತಂತಾನೆ ಸರಿ ಹೋಗುತ್ತದೆ ಎಂದರು.

ಅಹಂಕಾರ ನಿರಶನಕ್ಕೆ ದಾಸೋಹ ಸುಲಭ ಮಾರ್ಗ. ದಾಸೋಹ ಅಂದರೆ ನೀಡುವವರು ದೊಡ್ಡವರಲ್ಲ. ಪಡೆಯುವವರೇ ಶ್ರೇಷ್ಠರಾಗಿರುತ್ತಾರೆ. ಕಾರಣ ತನ್ನಲ್ಲಿರುವ ಅರಿಷಡ್ವರ್ಗಗಳನ್ನು ಕಡಿಮೆ ಮಾಡಿಕೊಳ್ಳಲು ದಾಸನಾಗಿ, ಕಿಂಕರಭಾವದಿಂದ ನೀಡುವುದೇ ಆಗಿದೆ ಎಂದರು.

ಬಸವಣ್ಣನವರು ಶರಣು ಶರಣಾರ್ಥಿ ಹಾಗೂ ಎನಗಿಂತ ಕಿರಿಯರಿಲ್ಲ ಎನ್ನುವ ಸದ್ಭಾವದಿಂದ ಇಡೀ ಶರಣಸಂಕುಲದ ಮನಗೆದ್ದರು. ಆ ಮೂಲಕ ದೇಶದ ಗಮನಸೆಳೆದು ಮೂಲೆಮೂಲೆಗಳಿಂದ ಶರಣರು ತಮ್ಮ ಎಲ್ಲ ರಾಜವೈಭೋಗ ಬಿಟ್ಟು ಕಲ್ಯಾಣದ ಅನುಭವ ಮಂಟಪದ ಕಡೆ ಮುಖ ಮಾಡಿದರು. ಬಸವಣ್ಣನವರ ವಿನಯ ಸ್ವಭಾವವೇ ಎಲ್ಲದಕ್ಕೂ ಕಾರಣ. ಒಂದು ಆರಂಭಕ್ಕೆ ಹೇಗೆ ಅಂತ್ಯವಿರುತ್ತದೆಯೋ ಹಾಗೆ ಅಂತ್ಯವೂ ಒಮ್ಮೊಮ್ಮೆ ಮತ್ತೆ ಪುಟಿದೇಳುವ ಸಂದರ್ಭ ಉಂಟು ಮಾಡುತ್ತದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರಲ್ಲಿಯೂ ಅತ್ಯದ್ಭುತ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಿಕೊಳ್ಳುವ ಪ್ರಯತ್ನ ಇಂತಹ ಧ್ಯಾನ, ಯೋಗದಿಂದ ಸಾಕಾರಗೊಳ್ಳುತ್ತದೆ ಎಂದು ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಇಷ್ಟಲಿಂಗದ ಅನುಸಂಧಾನದಿಂದಾಗುವ ಪರಿಣಾಮವನ್ನು ವಿಶ್ಲೇಷಿಸಿದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು, ಜಾತಿ ಮತ ಭೇದವಿಲ್ಲದೆ ಯಂತ್ರೋಪಕರಣಗಳನ್ನು ಯಾರೇ ಕಂಡುಹಿಡಿದಿರಲಿ, ಮಾರಾಟ ಮಾಡುತ್ತಿರಲಿ, ಉತ್ಪಾದಿಸುತ್ತಿರಲಿ, ಅನಿವಾರ್ಯ ಎನ್ನುವುದನ್ನು ಯಾವುದೇ ಸಂಕೋಚ, ಮುಜುಗರ, ಅವಿಶ್ವಾಸವಿರದೆ ಉಪಯೋಗಿಸುತ್ತೇವೆ. ಹಾಗೆಯೇ ಈ ಇಷ್ಟಲಿಂಗ ಎನ್ನುವುದು ಜಗದ ಕುರುಹು. ಹೇಗೆ ಮೊಬೈಲ್‍ನಲ್ಲಿ ವಿಶ್ವದ ಪರಿಚಯ ಅಥವಾ ವಿದ್ಯಮಾನಗಳನ್ನು ನೋಡಬಹುದೋ ಹಾಗೆಯೇ ಇಷ್ಟಲಿಂಗವೂ ನಮ್ಮ ತಪ್ಪುಒಪ್ಪುಗಳನ್ನು ನಿವೇದಿಸಿಕೊಳ್ಳಲು ಒಂದು ಸಾಧನ ಎಂದರು.

ಯೋಗಸಂಭ್ರಮ ಸಮಾರೋಪದ ವೇದಿಕೆಯಲ್ಲಿ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಕಲ್ಕೆರೆ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಮುರುಘೇಶ ಸ್ವಾಮಿಗಳು, ಮೈಸೂರು ಮುರುಘರಾಜೇಂದ್ರ ಮಹಾಲಿಂಗೇಶ್ವರ ಮಠ ಹಾಗೂ ಭಾವೈಕ್ಯ ಕೇಂದ್ರದ ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ಉಪಸ್ಥಿತರಿದ್ದರು. ಶಿವಯೋಗಾಸಕ್ತರು ಸಾರ್ವಜನಿಕರು, ಎಸ್.ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಲಾವಿದ ಉಮೇಶ್ ಪತ್ತಾರ್ ಕಾರ್ಯಕ್ರಮ ನಿರ್ವಹಿಸಿದರು. ಮುರುಘಾಮಠದ ಸಾಧಕರಾದ ವಿಜಯ್ ಸ್ವಾಗತಿಸಿದರು.-------------

ಚಿತ್ರದುರ್ಗ ಮುರುಘಾಮಠದ ಅನುಭವ ಮಂಟಪದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಏರ್ಪಡಿಸಿದ್ದ ಮೂರುದಿನಗಳ ಯೋಗ ಸಂಭ್ರಮ 2024ರ ಸಮಾರೋಪದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.-21 ಸಿಟಿಡಿ 2--