ಸಾರಾಂಶ
ವಿಶೇಷ ವರದಿ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡವನ್ನು ಕಸಮುಕ್ತ ನಗರ ಮಾಡಲು ಮಹಾನಗರ ಪಾಲಿಕೆ ಕೋಟಿಗಟ್ಟಲೇ ಹಣ ಮೀಸಲಿಟ್ಟು ಇಡೀ ಊರೆಲ್ಲ ಕಸದ ತೊಟ್ಟಿಯನ್ನಾಗಿ ಮಾಡುತ್ತಿದೆ. ಮೊದಲು ಬರೀ ಡಂಪಿಂಗ್ ಯಾರ್ಡ್‌ಲ್ಲಷ್ಟೇ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಇದೀಗ ಕಸ ಎಲ್ಲಿ ಕಾಣಿಸುತ್ತಿದೆಯೋ ಅಲ್ಲೆಲ್ಲ ಬೆಂಕಿ (ಸಿಬ್ಬಂದಿಯಿಂದಲೇ ಬೆಂಕಿ) ಕಾಣಿಸುತ್ತಿದೆ. ಶಾಸಕರು, ಸಚಿವರ ಸೂಚನೆ, ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.ಕಸ ಮುಕ್ತನಗರ: ಹುಬ್ಬಳ್ಳಿ-ಧಾರವಾಡವನ್ನು ಪ್ರಸಕ್ತ ಸಾಲಿನಲ್ಲಿ ಕಸಮುಕ್ತ ನಗರವನ್ನಾಗಿಸಬೇಕು ಎಂದು ಪಣತೊಟ್ಟಿದೆ. ಮನೆ ಮನೆಯಿಂದ 100ಕ್ಕೆ ನೂರರಷ್ಟು ಕಸ ಸಂಗ್ರಹಿಸುವುದು ಸೇರಿದೆ. ಇದಕ್ಕಾಗಿ ಪಾಲಿಕೆ ಒಡೆತನದ 274 ಆಟೋ ಟಿಪ್ಪರ್‌ಗಳಷ್ಟೇ ಸಾಲುತ್ತಿಲ್ಲ ಎಂದು 66 ಆಟೋ ಟಿಪ್ಪರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿದೆ. ಇದಕ್ಕಾಗಿಯೇ ₹6 ಕೋಟಿ ತೆಗೆದಿರಿಸಿದೆ. ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಮಾಡ್ತೇವೆ. ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ ನಿರ್ಮಾಣಕ್ಕೆ ಬಳಸುತ್ತೇವೆ ಎಂದೆಲ್ಲ ಪಾಲಿಕೆ ಯೋಜನೆ ಹಾಕುತ್ತದೆ. ಅದಕ್ಕಾಗಿ ಕೋಟಿ ಕೋಟಿ ರುಪಾಯಿ ಮೀಸಲಿಟ್ಟಿದೆ. ಜತೆಗೆ ಆ ನಿಟ್ಟಿನಲ್ಲಿ ಅಲ್ಪಸ್ವಲ್ಪ ಕೆಲಸವನ್ನೂ ಮಾಡುತ್ತದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲ್ಲ ಎಂಬುದು ಅಷ್ಟೇ ಸ್ಪಷ್ಟ. ಇದಕ್ಕೆ ಕೆಳಹಂತದ ಅಧಿಕಾರಿ, ಸಿಬ್ಬಂದಿ ವರ್ಗ ನಿರ್ಲಕ್ಷ್ಯ ಮಾತ್ರ ಮುಂದುವರಿಯುತ್ತಲೇ ಇದೆ.
ಡಂಪಿಂಗ್ ಯಾರ್ಡ್: ಅತ್ತ ವಿವಿಧ ಬಗೆಯ ಹೊಸ ಯೋಜನೆಗಳನ್ನು ಪಾಲಿಕೆ ಹಾಕಿಕೊಂಡರೆ, ಇತ್ತ ಊರ ಹೊರವಲಯಗಳೆಲ್ಲ ಡಂಪಿಂಗ್ ಯಾರ್ಡ್ ಆಗುತ್ತಿದೆ. ಉದಾಹರಣೆಗೆ ಕುಸುಗಲ್ ರಸ್ತೆ, ಸುಳ್ಳ ರಸ್ತೆ, ಆನಂದನಗರ ರಸ್ತೆ ಅಕ್ಕಪಕ್ಕಗಳು ಡಂಪಿಂಗ್ ಯಾರ್ಡ್ ಆಗುತ್ತಿದೆ. ಜತೆಗೆ ಯಾವ ಮಟ್ಟಿಗೆ ಎಂದರೆ ಕಾರವಾರ ರಸ್ತೆಯಲ್ಲಿನ ಡಂಪಿಂಗ್ ಯಾರ್ಡ್‌ನಂತೆ ಇಲ್ಲೂ ರಾಶಿ ರಾಶಿ ಕಸ ಬಂದು ಬೀಳುತ್ತದೆ. ಜತೆಗೆ ಸಂಜೆ ಹೊತ್ತಿನಲ್ಲಿ ಇಲ್ಲಿನ ಕಸಕ್ಕೆ ಬೆಂಕಿ ಕೂಡ ತಗುಲುತ್ತಿದೆ. ಇದರಲ್ಲಿ ಪಾಲಿಕೆಯ ಸಿಬ್ಬಂದಿಯ ಪಾತ್ರವೂ ಇಲ್ಲದಿಲ್ಲ ಎಂಬುದು ಸ್ಪಷ್ಟ.ಓಣಿ ಓಣಿಗಳಲ್ಲೂ ಬೆಂಕಿ: ಇನ್ನು ಓಣಿ ಓಣಿಗಳಲ್ಲಿ ಮನೆ ಮನೆಗೂ ತೆರಳಿ ಕಸ ಸಂಗ್ರಹಿಸಬೇಕಾದ ಟಿಪ್ಪರ್‌ಗಳು ಒಂದೊಂದು ಬಡಾವಣೆಗಳಿಗೆ ಮೂರ್ನಾಲ್ಕು ದಿನವಾದರೂ ಬರುವುದೇ ಇಲ್ಲ. ಹೀಗಾಗಿ ಅಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಕಸಗುಡಿಸಿದ ನಂತರ ಪ್ಲಾಸ್ಟಿಕ್, ಎಲೆ ಸೇರಿದಂತೆ ಮತ್ತಿತರರ ತ್ಯಾಜ್ಯವನ್ನು ಗುಡಿಸಿದ ಬಳಿಕ ಏನು ಮಾಡುವುದು ಒಂದೆಡೆ ಗುಡ್ಡೆ ಹಾಕಿಟ್ಟರೆ ಅದು ಮತ್ತೆ ಗಾಳಿ ಹಾರಾಡಿ ಎಲ್ಲೆಲ್ಲೋ ಹೋಗುತ್ತದೆ. ಅತ್ತ ವಾಹನವೂ ಬರಲ್ಲ. ಇತ್ತ ಗುಡಿಸಿದ ಕಸವನ್ನೂ ಏನು ಮಾಡುವುದು ಎಂಬುದು ಪೌರಕಾರ್ಮಿಕರಿಗೆ ತಿಳಿಯಲ್ಲ. ಹೀಗಾಗಿ ಅಲ್ಲೇ ಒಂದೆಡೆ ಗುಡ್ಡೆ ಹಾಕಿ ಬೆಂಕಿ ಹಚ್ಚುವ ಕೆಲಸವೂ ನಡೆದಿದೆ.
ಇದಕ್ಕೆ ತಾಜಾ ಉದಾಹರಣೆಯೆಂದರೆ ಮೇಯರ್ ರಾಮಪ್ಪ ಬಡಿಗೇರ್ ಅವರು ಪ್ರತಿನಿಧಿಸುವ 30ನೆಯ ವಾರ್ಡ್‌ನ ರೇಣುಕಾನಗರದಲ್ಲಿ ಸೋಮವಾರ ಬೆಳಿಗ್ಗೆ ಅಲ್ಲಿನ ಪೌರಕಾರ್ಮಿಕರು ಕಸಕ್ಕೆ ಬೆಂಕಿ ಹಚ್ಚಿದ್ದು ಕಂಡು ಬಂದಿದೆ. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೌರಕಾರ್ಮಿಕರು ಸರಿಯಾಗಿ ಉತ್ತರ ನೀಡುವ ಗೋಜಿಗೆ ಹೋಗಿಲ್ಲ.ಸಚಿವರ, ಶಾಸಕರ ಮಾತಿಗೂ ಬೆಲೆಯಿಲ್ಲ: ಇನ್ನು ಕಸ ವಿಲೇವಾರಿ ಬಗ್ಗೆ ಸಚಿವ ಸಂತೋಷ ಲಾಡ್ ಸೂಚನೆ ನೀಡಿದ್ದರೆ, ಊರ ಹೊರವಲಯದಲ್ಲಿ ಡಂಪಿಂಗ್ ಯಾರ್ಡ್ ಆಗುತ್ತಿರುವುದಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಅಧಿಕಾರಿ ವರ್ಗ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಸಚಿವರ, ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇನ್ನು ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಇಂದೋರ್ ಸೇರಿದಂತೆ ವಿವಿಧೆಡೆ ತೆರಳಿ ಕಸ ವಿಲೇವಾರಿ ಸಂಬಂಧಪಟ್ಟಂತೆ ಅಧ್ಯಯನ ಮಾಡಿ ಬರುತ್ತೇನೆ ಎಂದು ಹೋಗಿ ಬರುತ್ತಾರೆಯೇ ಹೊರತು ಇಲ್ಲಿನ ಕಸ ವಿಲೇವಾರಿ ಸಂಬಂಧಪಟ್ಟಂತೆ ನಯಾ ಪೈಸೆಯಷ್ಟು ಕೆಲಸ ಮಾತ್ರ ಆಗುತ್ತಿಲ್ಲ.
ಬರೀ ಕಸಮುಕ್ತ ನಗರ ಎಂದು ಘೋಷಣೆ ಮಾಡಿದರೆ, ಇಂದೋರ್ ಸೇರಿದಂತೆ ವಿವಿಧೆಡೆ ಹೋಗಿ ಬಂದರೆ ಸಾಲದು ಇಲ್ಲಿನ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.ಕಸಮುಕ್ತ ಎಂಬುದು ಬರೀ ಘೋಷಣೆಗಷ್ಟೇ ಸೀಮಿತವಾಗಿದೆ. ಆದರೆ, ಇಡೀ ಪಾಲಿಕೆ ಸಿಬ್ಬಂದಿ, ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಾಗಿ ಊರಿಗೆ ಊರೇ ಕಸದ ತೊಟ್ಟಿಯಾಗುತ್ತಿದೆ. ಕಸ ವಿಲೇವಾರಿಗೆ ಇನ್ನಾದರೂ ಆದ್ಯತೆ ನೀಡಬೇಕು ಎಂದು ಸಾರ್ವಜನಿಕ ಮಂಜುನಾಥ ಪಾಟೀಲ ಹೇಳಿದರು.