ಸಾರಾಂಶ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಪ್ರಮುಖ ಜೀವನಾಡಿ ರಂಗಯ್ಯನ ದುರ್ಗ ಜಲಾಶಯದ ಒಡಲಾಳ ತುಂಬಿರುವ ಪರಿಣಾಮ ಬೇಸಿಗೆಯಲ್ಲಿ ಎದುರಾಗುತ್ತಿದ್ದ ಕುಡಿಯುವ ನೀರಿನ ಕೊರತೆಯ ಆತಂಕ ದೂರವಾಗಿದೆಯಾದರೂ ದಶಕಗಳಿಂದ ಕಾಡುತ್ತಿರುವ ಪ್ಲೋರೈಡ್ ಸಮಸ್ಯೆ ಪರಿಹಾರವಾಗದೆ ಇಂದಿಗೂ ಮೊಳಕಾಲ್ಮುರು ಪಟ್ಟಣದ ಜನತೆ ಪರಿತಪಿಸುವಂತಾಗಿದೆ. ಕೈಮಗ್ಗದ ರೇಷ್ಮೆ ಸೀರೆ ಹೆಗ್ಗಳಿಕೆ ಹೊಂದಿರುವ ಮೊಳಕಾಲ್ಮುರು ಪಟ್ಟಣ ಬಿರು ಬಿಸಿಲು ಹಾಗೂ ಕುಡಿಯುವ ನೀರಿನ ತಾತ್ವರಕ್ಕೂ ಹೆಸರಾಗಿದೆ. ಹಲವು ದಶಕಗಳಿಂದ ನೀರಿನ ಕೊರತೆಯ ಜತೆಗೆ ಪ್ಲೋರೈಡ್ ಅಂಶ ಜನತೆಗೆ ಬಹು ದೊಡ್ಡ ಸವಾಲಾಗಿ ಕಾಡುತ್ತಿದೆ. ಪ್ರತಿ ವರ್ಷ ಏರಿಕೆಯಾಗುತ್ತಿರುವ ತಾಪಮಾನದ ಜತೆಗೆ ಬಾದಿಸುತ್ತಿರುವ ಪ್ಲೋರೈಡ್ ಪೀಕಲಾಟಕ್ಕೆ ಹೆದರಿ ಇಲ್ಲಿಗೆ ಸರ್ಕಾರಿ ನೌಕರರು ಬರಲು ಹಿಂದೇಟು ಹಾಕುವುದು ಸುಳ್ಳಾಗಿಸಿಲ್ಲ.
16 ವಾರ್ಡ್‌ಗಳನ್ನು ಹೊಂದಿರುವ ಮೊಳಕಾಲ್ಮುರು 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಪಟ್ಟಣ ಸುತ್ತಲಿನಲ್ಲಿ ಒಟ್ಟು 28 ಕೊಳವೆ ಬಾವಿಗಳು ಇದ್ದು, ಸಮಸ್ಯೆ ನಿವಾರಣೆಗೆ ಪ್ರತಿ ದಿನ 2.60 ಎಂಎಲ್‌ಡಿ ನೀರು ಅಗತ್ಯವಿದೆ. ರಂಗಯ್ಯನ ದುರ್ಗ ಜಲಾಶಯದಿಂದ 1 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು ಕೊಳವೆಬಾವಿ ನೀರನ್ನು ಬಳಕೆ ಮಾಡಿಕೊಂಡರೂ 0.6 ಎಂಎಲ್ ಡಿ ನೀರಿನ ಕೊರತೆಯಾಗುತ್ತಿದೆ.ಕಳೆದ ಬಾರಿ ಮಳೆಗಾಲದಲ್ಲಿ ಸುರಿದ ಉತ್ತಮ ಮಳೆ ರಂಗಯ್ಯನ ದುರ್ಗ ಜಲಾಶಯ ಸೇರಿದಂತೆ ಪಟ್ಟಣ ವ್ಯಾಪ್ತಿಯ ಜಲಪಾತ್ರೆಗಳು ತುಂಬಿ ಜೀವ ಕಳೆಯನ್ನು ತಂದಿದ್ದವು ಪರಿಣಾಮವಾಗಿ ಅಂತರ್ಜಲ ಹೆಚ್ಚಳದಿಂದ ಇಂದಿಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತದೆ ಇರುವುದರಿಂದ ಪ್ರತಿ ಬಾರಿ ಬೇಸಿಗೆಯಲ್ಲಿ ಎದುರಾಗುತ್ತಿದ್ದ ಕುಡಿಯುವ ನೀರಿನ ಕೊರತೆ ಆತಂಕವನ್ನು ದೂರ ಮಾಡಿದ್ದು ವಿವಿಧ ಮೂಲಗಳಿಂದ ಸಿಗುತ್ತಿರುವ ನೀರಿನಲ್ಲಿಯೇ ಸಮಸ್ಯೆ ಸರಿದೂಗುತ್ತಿದೆ.
ಹಳೆಟೌನ್, ಭಾಗ್ಯಜ್ಯೋತಿ ನಗರ, ತಿಲಕ್ ನಗರ, ಕುರಾಕಲ ಹಟ್ಟಿ, ಅಂಬೇಡ್ಕರ್ ನಗರ, ದಾಸರಹಟ್ಟಿ, ಶ್ರೀನಿವಾಸ ನಾಯಕ ಬಡಾವಣೆಗೆ ರಂಗಯ್ಯನ ದುರ್ಗ ಜಲಾಶಯದ ನೀರು ಪೂರೈಕೆಯಾಗುತ್ತಿದೆ. ಉಳಿದ ಬಡಾವಣೆಗಳಿಗೆ ಕೊಳವೆ ಬಾವಿ ನೀರು ಸರಬರಾಜು ಮಾಡಲಾಗುತ್ತಿದೆ. ರಂಗಯ್ಯನ ದುರ್ಗ ಜಲಾಶಯದ ನೀರು ಪಟ್ಟಣದ ಸೀಮಿತ ಬಡವಣೆಗಳಿಗೆ ಮಾತ್ರ ಪೂರೈಕೆಯಾಗುತ್ತಿರುವ ಪರಿಣಾಮ ಉಳಿದ ಬಡವಣೆಗಳಿಗೆ ಪ್ಲೋರೈಡ್ ಅಂಶದ ಕೊಳವೆ ಬಾವಿ ನೀರೆ ಸರಬರಾಜಾಗುತ್ತಿದೆ. ಅಮೃತ 2.0 ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.ಪಟ್ಟಣ ವ್ಯಾಪ್ತಿಯ 28 ಕೊಳವೇ ಬಾವಿಗಳ ಪೈಕಿ 20 ಕೊಳವೆ ಬಾವಿಗಳಲ್ಲಿ ಪ್ಲೋರೈಡ್ ಅಂಶ ಕಂಡುಬಂದಿದ್ದು ಬಹುತೇಕ ಜನರಿಗೆ ಪ್ಲೋರೈಡ್ ನೀರೇ ಜೀವನಾಧಾರವಾಗಿದೆ. ಸದಾ ಬರಕ್ಕೆ ತುತ್ತಾಗುತ್ತಿರುವ ಜನತೆಗೆ ಕಾಡುತ್ತಿದ್ದ ನೀರಿನ ಸಮಸ್ಯೆ ಕಳೆದ ವರ್ಷದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಜಲಪಾತ್ರೆಗಳು ತುಂಬಿರುವ ಪರಿಣಾಮ ಕುಡಿಯುವ ನೀರಿನ ಕೊರತೆ ಆತಂಕ ದೂರವಾಗಿದೆ.