ಮೂಡಿಗೆರೆ ಅರಣ್ಯ ವ್ಯಾಪ್ತಿಯ ಕಾಡ್ಗಿಚ್ಚು ಬಹುತೇಕ ಹತೋಟಿಗೆ

| Published : Jan 23 2025, 12:48 AM IST

ಮೂಡಿಗೆರೆ ಅರಣ್ಯ ವ್ಯಾಪ್ತಿಯ ಕಾಡ್ಗಿಚ್ಚು ಬಹುತೇಕ ಹತೋಟಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮನಕಾಡು, ಬಿದಿರುತಳ ಮೊದಲಾದ ಕಡೆ ಸೋಮವಾರ ಭಾರಿ ಪ್ರಮಾಣದ ಕಾಡ್ಗಿಚ್ಚು ಕಂಡುಬಂದಿತ್ತು. 2- 3 ಕಿ.ಮೀ. ದೂರ ಪ್ರದೇಶದವರೆಗೂ ಬೆಂಕಿ ಹರಡಿತ್ತು. ಘಾಟಿ ಪ್ರದೇಶದಲ್ಲಿರುವ ಹುಲ್ಲುಗಾವಲು ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಾಡ್ಗಿಚ್ಚು ಉಂಟಾಗಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸೋಮವಾರ ಕಂಡುಬಂದ ಕಾಡಿಚ್ಚು ಬಹುತೇಕ ಹತೋಟಿಗೆ ಬಂದಿದೆ. ದ.ಕ. ವಿಭಾಗದ ಆರಣ್ಯ ವ್ಯಾಪ್ತಿಗೆ ಬೆಂಕಿ ಹರಡದ ಕಾರಣ ಸದ್ಯ ಸುರಕ್ಷಿತವಾಗಿದೆ.

ಬಿದಿರುತಳ ಪ್ರದೇಶದಲ್ಲಿ ರಸ್ತೆಯಿಂದ 3 ಕಿ.ಮೀ. ದೂರದಲ್ಲಿ ಬೆಂಕಿ ಕಂಡು ಬಂದಿದ್ದರೆ, ಸೋಮನಕಾಡು ಪರಿಸರದಲ್ಲಿ ರಸ್ತೆ ಬದಿ ತನಕ ಬೆಂಕಿ ವ್ಯಾಪಿಸಿತ್ತು. ಬೆಂಕಿ ಉಂಟಾದ ಕಡೆ ಅಗತ್ಯ ವಾಹನ ಸಾಗಲು ವ್ಯವಸ್ಥೆ ಇಲ್ಲದ ಕಾರಣ ಕಾಲ್ನಡಿಗೆ ಮೂಲಕವೇ ತೆರಳಿ ಬೆಂಕಿ ನಂದಿಸಬೇಕಿದೆ. ಮೂಡಿಗೆರೆ ಮತ್ತು ಬೆಳ್ತಂಗಡಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ಕಡೆ ಹುಲ್ಲಿಗೆ ಹಿಡಿದ ಬೆಂಕಿ ಹತೋಟಿಗೆ ಬಂದಿದ್ದು ಅರಣ್ಯ ಪ್ರದೇಶಕ್ಕೆ ವ್ಯಾಪಿಸಿಲ್ಲ ಎನ್ನಲಾಗಿದೆ. ಇಲಾಖೆಯಲ್ಲಿ ಅಗತ್ಯ ಸಲಕರಣೆ ಇಲ್ಲದಿರುವುದು, ಸಿಬ್ಬಂದಿ ಕೊರತೆ ಬೆಂಕಿ ಶಮನಕ್ಕೆ ಸಮಸ್ಯೆಯಾಗುತ್ತಿದೆ.

ವನ್ಯ ಜೀವಿಗಳಿಗೆ ತೊಂದರೆ: ಈ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸಹಿತ ಆನೇಕ ಪ್ರಾಣಿಗಳು, ಸರೀಸೃಪಗಳು ವಾಸಿಸುತ್ತಿದ್ದು ಬೆಂಕಿಯಿಂದ ಅವುಗಳಿಗೆ ತೊಂದರೆ ಉಂಟಾಗಿರುವ ಸಾಧ್ಯತೆ ಇದೆ. ಬೆಂಕಿಯ ಪ್ರಖರತೆಗೆ ಇವು ತಮ್ಮ ನೆಲೆ ಕಳೆದುಕೊಂಡು ಜನನಿಬಿಡ ಪ್ರದೇಶಗಳತ್ತ ತೆರಳುವ ಸಾಧ್ಯತೆಯೂ ಇದೆ. ಕೆಲವೊಂದು ಪ್ರಾಣಿಗಳು, ಸರೀಸೃಪಗಳು ಬೆಂಕಿಯಿಂದ ಗಾಯಗೊಂಡಿರುವ ಸಾಧ್ಯತೆಯೂ ಇದೆ. ಚಾರ್ಮಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ, ಚಿರತೆ ಕಾಟ ವಿಪರೀತವಾಗಿದ್ದು ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಸೋಮನಕಾಡು, ಬಿದಿರುತಳ ಮೊದಲಾದ ಕಡೆ ಸೋಮವಾರ ಭಾರಿ ಪ್ರಮಾಣದ ಕಾಡ್ಗಿಚ್ಚು ಕಂಡುಬಂದಿತ್ತು. 2- 3 ಕಿ.ಮೀ. ದೂರ ಪ್ರದೇಶದವರೆಗೂ ಬೆಂಕಿ ಹರಡಿತ್ತು. ಘಾಟಿ ಪ್ರದೇಶದಲ್ಲಿರುವ ಹುಲ್ಲುಗಾವಲು ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಾಡ್ಗಿಚ್ಚು ಉಂಟಾಗಿದೆ ಎನ್ನಲಾಗಿದೆ.

ಕಡಿವಾಣ ಅಗತ್ಯ: ಘಾಟಿ ಪ್ರದೇಶದಲ್ಲಿ ಅಡುಗೆ ಮಾಡುವುದು, ಧೂಮಪಾನ, ಶಿಕಾರಿಗೆ ತೆರಳುವವರು, ಪ್ರಾಣಿಗಳ ಓಡಾಟದಿಂದ ಉತ್ಪತ್ತಿಯಾಗುವ ಕಿಡಿಗಳು, ಹುಲ್ಲು ತೆರವಿಗೆ ಹಚ್ಚುವ ಬೆಂಕಿ ಇತ್ಯಾದಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದು ಇದರಿಂದ ಕೆಲವೊಮ್ಮೆ ಎಕರೆಗಟ್ಟಲೆ ಅರಣ್ಯ ಪ್ರದೇಶ ನಾಶವಾಗುತ್ತದೆ. ಈ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ನಡೆಸಬೇಕಾಗುತ್ತದೆ. ಆರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡು ಅರಣ್ಯ ಪ್ರದೇಶದಲ್ಲಿ ನಡೆಯುವ ಕೆಲವೊಂದು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಬೆರಳೆಣಿಕೆ ಸಿಬ್ಬಂದಿ ನಾನಾ ಕೆಲಸಗಳಿಂದ ಹೈರಾಣಾಗುತ್ತಿದ್ದಾರೆ. ಅರಣ್ಯ ಇಲಾಖೆಯು ಸಿಬ್ಬಂದಿ ನೇಮಕಾತಿಗೆ ಆದ್ಯತೆ ನೀಡಬೇಕಾಗಿದೆ.ಬದಲಾದ ವಾತಾವರಣ: ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ಉಂಟಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ. ರಾತ್ರಿಯಾಗುತ್ತಿದ್ದಂತೆ ಚಳಿ, ಹಗಲಲ್ಲಿ ಉರಿ ಬಿಸಿಲಿನ ವಾತಾವರಣವಿದೆ. ವಾತಾವರಣ ಜಲಮೂಲಗಳ ನೀರು ಬೇಗನೆ ಬತ್ತಲು ಕಾರಣವಾಗುವುದರ ಜತೆಗೆ ಜನತೆಯ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ದ.ಕ. ವಿಭಾಗದ ಅರಣ್ಯಕ್ಕೆ ಬೆಂಕಿ ಹರಡಿಲ್ಲ. ಸಿಬ್ಬಂದಿಯನ್ನು ಮೂಡಿಗೆರೆ ವಿಭಾಗಕ್ಕೆ ಕಳುಹಿಸಿ ಬೆಂಕಿ ಹತೋಟಿಗೆ ತರಲಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ

- ತ್ಯಾಗರಾಜ, ಆರ್‌ಎಫ್.ಒ.

---

ಘಾಟಿ ಪ್ರದೇಶದ ಚಿಕ್ಕಮಗಳೂರು ಭಾಗದಲ್ಲಿ ಹುಲ್ಲುಗಾವಲಿನಲ್ಲಿ ಕಂಡುಬಂದಿರುವ ಬೆಂಕಿಯನ್ನು ಇನ್ನಷ್ಟು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಬೆಂಕಿ ಹತೋಟಿಯಲ್ಲಿದೆ

-ಚರಣ್, ಆ‌ರ್.ಎಫ್‌