ಸಾರಾಂಶ
ಗಜರಾಜ ಕಾಜೂರು ಕರ್ಣನ ಅರಣ್ಯ ರೋದನ ಶಮನ ಹೇಳಲು ಯಾರಿಂದಲೂ ಅಸಾಧ್ಯವಾಗಿದೆ. ಆನೆಯ ನಿತ್ಯ ರೋದನ ಹೇಳತೀರದಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾಡಿನಿಂದ ನಾಡಿಗೆ ಬಂದು ಗುಂಡೇಟು ತಿಂದು ಕಳೆದ ಒಂದು ತಿಂಗಳ ಕಾಲದಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಸೇರಿ ತರಬೇತಿ ಪಡೆಯುತ್ತಿರುವ ಗಜರಾಜ ಕಾಜೂರು ಕರ್ಣನ ಅರಣ್ಯ ರೋದನಕ್ಕೆ ಶಮನ ಹೇಳಲು ಸದ್ಯ ಯಾರಿಂದಲೂ ಅಸಾಧ್ಯವಾಗಿದೆ.ಸೋಮವಾರಪೇಟೆ ತಾಲೂಕು ಕಾಜೂರು ವ್ಯಾಪ್ತಿಯಲ್ಲಿ ಅರಣ್ಯದಿಂದ ನಾಡಿಗೆ ಬಂದು ಜನರಿಗೆ ಭಯ ಹುಟ್ಟಿಸುತ್ತಿದ್ದ ಈ ಆನೆ ಇದೀಗ ಫೆಬ್ರವರಿ ಎರಡರಿಂದ ದುಬಾರೆ ಶಿಬಿರದ ಕ್ರಾಲ್ ನಲ್ಲಿ ಬಂಧಿಯಾಗಿದ್ದು, ಕಾಡಿನಲ್ಲಿ ಇರುವ ಸಂದರ್ಭ ಆಗಿರುವ ದುರಂತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಾಡಿನಿಂದ ಶಿಬಿರಕ್ಕೆ ಹಿಡಿದು ತಂದ ಸಂದರ್ಭ ಈ ಆನೆಯ ಮೈಮೇಲೆ, ಕಾಲುಗಳಲ್ಲಿ ಗುಂಡುಗಳು ಸೇರಿಕೊಂಡು ಸಂಪೂರ್ಣ ಚಿಕಿತ್ಸೆ ಫಲಕಾರಿಯಾಗದೆ ಆನೆಯ ನಿತ್ಯ ರೋದನ ಹೇಳ ತೀರದು.ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿದ್ದ ಸಂದರ್ಭ ಕೋಪದ ಆವೇಶದಲ್ಲಿ ಕೆಲವು ಕೃಷಿಕರು ಆನೆಯ ಮೈಯೆಲ್ಲಾ ಗುಂಡುಗಳನ್ನು ಸೇರಿಸುವ ಮೂಲಕ ನಾಡಿನಿಂದ ಓಡಿಸುವ ಕೆಲಸ ಮಾಡಿರುವುದೇ ಈ ಅವಾಂತರಗಳಿಗೆ ಕಾರಣ.
ವನ್ಯಜೀವಿ ತಜ್ಞ ಡಾ. ಚಿಟ್ಟಿಯಪ್ಪ ಅವರು ನಿತ್ಯ ಕಾಜೂರು ಕರ್ಣನ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಗುಂಡುಗಳು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ದುಬಾರೆ ಶಿಬಿರದಲ್ಲಿರುವ ಈ ಆನೆಯ ಚಿಕಿತ್ಸೆಗೆ ಇಲಾಖೆ ಮೂಲಕ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಕನ್ನಡ ಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈ ಆನೆಯ ಚಿಕಿತ್ಸೆ ನಿರಂತರವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿರುವ ಅರಣ್ಯ ಅಧಿಕಾರಿ ಕನ್ನಂಡ ರಂಜನ್, ಚೇತರಿಸಿಕೊಳ್ಳಲು ಹೆಚ್ಚಿನ ದಿನಗಳ ಅಗತ್ಯ ಇದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.