- ಎಲ್ಲೂ ಸಾಮೂಹಿಕ ಫಾರಂ ವಿತರಣೆ ಮಾಡುತ್ತಿಲ್ಲ । ಭೇಟಿ ನೀಡಿದ ಮನೆ ಬಾಗಿಲ ಮೇಲೆ ಸ್ಟಿಕ್ಕರ್ ಅಂಟಿಸೋದು ಕಡ್ಡಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಎಲ್ಲೂ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ, ಮಾಡುವುದೂ ಇಲ್ಲ. ಕೆಲವು ಬೂತ್‌ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.

ಪ್ರತಿಯೊಬ್ಬ ಬೂತ್‌ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಒ.ಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಒ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.


40 ಸಹಾಯ ಕೇಂದ್ರ:

ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಒ.ಗಳಿಗೆ ಹಸ್ತಾಂತರಿಸಬೇಕು ಎಂದರು.

ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ. (ಬೂತ್‌ಮಟ್ಟದ ಏಜೆಂಟ್‌ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಒ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಒ.ಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.

ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಒ. ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.

ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ''''ಫಾರಂ-8'''' ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.

ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಒಂದುವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಒ. ಮೊಬೈಲ್ ಆಪ್ ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದು. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಒ.ಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.

ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೇ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.

ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಇಂತಹ ಎಲ್ಲ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ **ecinet ** ಮೊಬೈಲ್ ಆಪ್ ಮತ್ತು ** https://voters.eci.gov.in ** ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ, ಯಾವುದೇ ಮತದಾರರು ಆತಂಕಪಡುವ ಅಗತ್ಯವಿಲ್ಲ. ಬಿ.ಎಲ್.ಒ.ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ- ಮಾಯಾಕೊಂಡ ಕ್ಷೇತ್ರ ಪ್ರಥಮ:

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ.94ರಷ್ಟು ಎನ್ಯುಮರೇಷನ್ ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ ಹಾಗೂ ಶೇ.10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಉಪ ಕಾರ್ಯದರ್ಶಿ ಮಮತ ಹೊಸ ಗೌಡರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಮಹಾಂತೇಶ್ ಉಪಸ್ಥಿತರಿದ್ದರು.

- - -

-6ಕೆಡಿವಿಜಿ38: ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.