ಮೈ-ಬೆಂ ಜೋಡಿ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಯ ವೇಗಕ್ಕೆ ಅಡಿಗಲ್ಲು, ಡಾ.ರಾಜ್‌, ನಾಗಪ್ಪ ಅಪಹರಣ ಸವಾಲು..

| Published : Dec 11 2024, 12:45 AM IST

ಮೈ-ಬೆಂ ಜೋಡಿ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಯ ವೇಗಕ್ಕೆ ಅಡಿಗಲ್ಲು, ಡಾ.ರಾಜ್‌, ನಾಗಪ್ಪ ಅಪಹರಣ ಸವಾಲು..
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರ 1999 ರವರೆಗೆ ಅಕ್ಷರಶಃ ‘ದೊಡ್ಡಹಳ್ಳಿ’ಯಂತೆಯೇ ಇತ್ತು. ಮೈಸೂರು-ಬೆಂಗಳೂರು ನಡುವೆ ಒಂಟಿ ರಸ್ತೆ. ಅಲ್ಲಿಗೆ ತಲುಪಲು ನಾಲ್ಕು ತಾಸು ಹಿಡಿಯುತ್ತಿತ್ತು. ಉದ್ದಕ್ಕೂ ಅಲ್ಲಲ್ಲಿ ಅಪಘಾತಗಳು. ಈ ಎರಡು ನಗರಗಳ ನಡುವೆ ಜೋಡಿ ರಸ್ತೆ ನಿರ್ಮಾಣದ ಮೂಲಕ ಇಂತಹ ಚಿತ್ರಣವನ್ನು ಬದಲು ಮಾಡಿದ್ದು ಎಸ್‌.ಎಂ. ಕೃಷ್ಣ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರ 1999 ರವರೆಗೆ ಅಕ್ಷರಶಃ ‘ದೊಡ್ಡಹಳ್ಳಿ’ಯಂತೆಯೇ ಇತ್ತು. ಮೈಸೂರು-ಬೆಂಗಳೂರು ನಡುವೆ ಒಂಟಿ ರಸ್ತೆ. ಅಲ್ಲಿಗೆ ತಲುಪಲು ನಾಲ್ಕು ತಾಸು ಹಿಡಿಯುತ್ತಿತ್ತು. ಉದ್ದಕ್ಕೂ ಅಲ್ಲಲ್ಲಿ ಅಪಘಾತಗಳು. ಈ ಎರಡು ನಗರಗಳ ನಡುವೆ ಜೋಡಿ ರಸ್ತೆ ನಿರ್ಮಾಣದ ಮೂಲಕ ಇಂತಹ ಚಿತ್ರಣವನ್ನು ಬದಲು ಮಾಡಿದ್ದು ಎಸ್‌.ಎಂ. ಕೃಷ್ಣ.

- ಹೌದು, ಇದು ನಿಜ. ಮೈಸೂರು-ಬೆಂಗಳೂರು ನಡುವೆ ಜೋಡಿ ರಸ್ತೆ ನಿರ್ಮಾಣವಾಗುವವರೆಗೆ ಇಲ್ಲಿ ನಿವೇಶನಗಳನ್ನು ಕೇಳುವವರೇ ಇರಲಿಲ್ಲ. ಯಾವಾಗ ಜೋಡಿ ರಸ್ತೆ ನಿರ್ಮಾಣವಾಯಿತೋ ಅಲ್ಲಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಶುಕ್ರದೆಸೆ. ಬೆಂಗಳೂರಿನವರು ಮಾತ್ರವಲ್ಲದೇ, ಪಕ್ಕದ ಆಂಧ್ರದವರು ಸೇರಿದಂತೆ ದೇಶದ ವಿವಿಧೆಡೆಯ ಜನತೆ ಮೈಸೂರಿಗೆ ಲಗ್ಗೆ ಇಟ್ಟು, ನಿವೇಶನಗಳ ಬೆಲೆ ಗಗನಕ್ಕೇರಲು ಕಾರಣರಾದರು. ಇದರಿಂದ ಒಂದಷ್ಟು ಉದ್ಯಮಗಳು ಮೈಸೂರಿಗೆ ಬಂದವು. ಆ ಮೂಲಕ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಂಡವು. ಇದಲ್ಲದೇ ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೂ ಕೃಷ್ಣ ಅವರೇ ಅಡಿಗಲ್ಲು ಹಾಕಿದರು.

2002 ಜಂಬೂಸವಾರಿಗೆ ಗೈರು, 2021 ರಲ್ಲಿ ದಸರೆ ಉದ್ಘಾಟನೆ

ಎಸ್‌.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಬರ, ಕಾವೇರಿ ಸಮಸ್ಯೆ, ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನಿಂದ ಕನ್ನಡದ ವರನಟ ಡಾ.ರಾಜ್‌ಕುಮಾರ್‌, ಮಾಜಿ ಸಚಿವ ಎಚ್‌.ನಾಗಪ್ಪ ಅಪಹರಣ ಮೊದಲಾದ ಸಮಸ್ಯೆಗಳು ಎದುರಾದವು. ಎಲ್ಲವನ್ನು ಧೈರ್ಯವಾಗಿಯೇ ಎದುರಿಸಿದರು. ನಾಗಪ್ಪ ಅಪಹರಣ ಸಂದರ್ಭದಲ್ಲಿ 2002ರ ದಸರೆಯ ಜಂಬೂಸವಾರಿ ಉದ್ಘಾಟನೆಗೆ ಅವರು ಬರಲಾಗಲಿಲ್ಲ. ಆಗ ರಾಜ್ಯಪಾಲರು ಉದ್ಘಾಟಿಸಿದ್ದರು. ಆದರೆ, 2021ರಲ್ಲಿ ಚಾಮಂಡಿಬೆಟ್ಟದಲ್ಲಿ ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಹೆಗ್ಗಳಿಕೆ ಅವರಿಗೆ ಸೇರಿತು.

ಸೇಠ್‌, ಟಿಎನ್ನೆನ್‌ಗೆ ಪರ್ಯಾಯ ಅಧಿಕಾರ

ಅವಿಭಜಿತ ಮೈಸೂರು ಜಿಲ್ಲೆಯ ಎಲ್ಲಾ ರಾಜಕಾರಣಿಗಳ ಜೊತೆ ಎಸ್‌.ಎಂ.ಕೃಷ್ಣ ಅವರಿಗೆ ಒಡನಾಟ ಇತ್ತು. 1999ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ನರಸಿಂಹರಾಜ ಕ್ಷೇತ್ರದಿಂದ ಅಜೀಜ್‌ ಸೇಠ್‌ ಅವರು ಆರನೇ ಬಾರಿ ಗೆದ್ದಿದ್ದರು. ಅವರಿಗೆ ಸಚಿವ ಸ್ಥಾನ ನೀಡಲಾಗಲಿಲ್ಲ ಎಂದು ಪರ್ಯಾಯ ಸ್ಥಾನ ನೀಡಿದ್ದರು. ಅದೇ ರೀತಿ ಆದೇ ಮೊದಲ ಬಾರಿಗೆ ನೇರ ಚುನಾವಣೆಗೆ ಸ್ಪರ್ಧಿಸಿ, ಟಿ.ನರಸೀಪುರದಿಂದ ಸೋತಿದ್ದ ಟಿ.ಎನ್‌.ನರಸಿಂಹಮೂರ್ತಿ ಅವರಿಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಿದ್ದರು. ಟಿ.ನರಸೀಪುರದಿಂದ ಆಗ ಬಿಜೆಪಿಯ ಡಾ.ಎನ್‌.ಎಲ್‌. ಭಾರತೀಶಂಕರ್‌ ಗೆದ್ದಿದ್ದರು.

ಕಾಳಮರೀಗೌಡರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದರು

1999ರ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ.ಕೃಷ್ಣ ಅವರು ಪಿರಿಯಾಪಟ್ಟಣದಲ್ಲಿ ಪ್ರಚಾರಕ್ಕೆ ಬಂದಿದ್ದಾಗ ಕೆ.ಎಸ್‌.ಕಾಳಮರೀಗೌಡರನ್ನು ಗೆಲ್ಲಿಸಿ, ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ, ಆ ಚುನಾವಣೆಯಲ್ಲಿ ಕಾಳಮರೀಗೌಡರು ಸೋತು ಬಿಜೆಪಿಯ ಎಚ್.ಸಿ.ಬಸವರಾಜು ಗೆದ್ದಿದ್ದರು.

ಅಜೀಜ್‌ ಸೇಠ್‌ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದಾಗ 2002 ರಲ್ಲಿ ಉಪ ಚುನಾವಣೆ ನಡೆಯಿತು. ಅವರ ಪುತ್ರ ತನ್ವೀರ್‌ ಸೇಠ್‌ ಅವರಿಗೆ ಟಿಕೆಟ್‌ ನೀಡಿ, ಗೆಲ್ಲಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ತನ್ವೀರ್‌ ಸೇಠ್‌ ಹಿಂದಿರುಗಿ ನೋಡಿಲ್ಲ. ಸತತ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಪಂಚ ಖಾತೆ, ಹಾಲು- ಸಕ್ಕರೆ ಸಚಿವರು

ಹೆಗ್ಗಡದೇವನಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಶಿವಣ್ಣ ಅವರು ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಯೋಜನೆ ಮತ್ತು ಸಾಂಸ್ಥಿಕ ಹಣಕಾಸು, ವಾರ್ತಾ ಮತ್ತು ಪ್ರಚಾರ, ತೋಟಗಾರಿಕೆ ಭಾರೀ ನೀರಾವರಿ ಖಾತೆಗಳನ್ನು ನೀಡಿದ್ದರು. ಹೀಗಾಗಿ ಅವರು ನಾನು ಪಂಚ ಖಾತೆ ಸಚಿವ ಎಂದು ಹೇಳಿಕೊಳ್ಳುತ್ತಿದ್ರು.

ಮಂಡ್ಯದಲ್ಲಿ ಎಂ.ಎಸ್. ಆತ್ಮಾನಂದ ಹಾಗೂ ಜಿ. ಮಾದೇಗೌಡರ ಗುಂಪುಗಳನ್ನು ನಿರ್ವಹಿಸಲು ಶಿವಣ್ಣ ಅವರನ್ನು ಆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಿಸಲಾಗಿತ್ತು. ಆಗ ಎಸ್‌.ಎಂ. ಕೃಷ್ಣ ಅವರ ಸಹೋದರ ಎಸ್‌.ಎಂ. ಶಂಕರ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬೆಂಕಿ ಮಹದೇವ್‌ ಅವರು ಆರಂಭದಲ್ಲಿ ರೇಷ್ಮೆ ಮತ್ತು ಜವಳಿ ಸಚಿವರಾಗಿದ್ದರು. ನಂತರ ಸಕ್ಕರೆ ಮತ್ತು ಪಶುಸಂಗೋಪನಾ ಖಾತೆ ನೀಡಲಾಯಿತು. ಇದರಿಂದ ಮಹದೇವ್‌ ಅವರು ನಾನು ಹಾಲು- ಸಕ್ಕರೆ ಸಚಿವ ಎಂದು ಹೇಳಿಕೊಳ್ಳುತ್ತಿದ್ದರು.ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು.

ಹನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಿ. ರಾಜೂಗೌಡರು ಕೃಷಿ ಸಂಸ್ಕರಣಾ ಖಾತೆಯ ಜೊತೆಗೆ ಕೆಲಕಾಲ ಚಾಮರಾಜನಗರ ಉಸ್ತುವಾರಿ ಮಂತ್ರಿಯೂ ಆಗಿದ್ದರು.

ಮಾಜಿ ಸಚಿವ ಎಚ್‌.ಎಂ. ಚನ್ನಬಸಪ್ಪ ಅವರ ಪುತ್ರಿ ರಾಣಿ ಸತೀಶ್‌ ಅವರು ಕೃಷ್ಣ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆಯಾಗಿದ್ದರು.

ಶಿಕ್ಷಣದಿಂದ ಸಹಕಾರ ಖಾತೆಗೆ ವರ್ಗ:

ಕೃಷ್ಣರಾಜ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್‌. ವಿಶ್ವನಾಥ್‌ ಅವರು ಆರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದರು. ತಮ್ಮ ನಿರ್ಧಾರಗಳಿಂದ ವಿವಾದಕ್ಕೆ ಕಾರಣರಾಗಿದ್ದ ಅವರಿಗೆ ನಂತರ ಸಹಕಾರ ಖಾತೆ ನೀಡಲಾಯಿತು.

ಹಳ್ಳಿ ಹಕ್ಕಿ ವಿವಾದ:

ಎಚ್‌.ವಿಶ್ವನಾಥ್‌ ಅವರು ‘ಹಳ್ಳಿ ಹಕ್ಕಿ’ಕೃತಿ ರಚಿಸಿದಾಗ ಎಸ್‌.ಎಂ.ಕೃಷ್ಣ ಅವರ ಬಗ್ಗೆ ಲಘುವಾಗಿ ಬರೆದಿದ್ದಾರೆ ಎಂಬ ಕಾರಣಕ್ಕಾಗಿ ತೀವ್ರ ವಿವಾದ ಉಂಟಾಗಿತ್ತು. ಇದರಿಂದಾಗಿ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆಗೆ ಅಡ್ಡಿಪಡಿಸಿ, ಪ್ರತಿಭಟಿಸಿದ್ದರು. ಈ ಪ್ರಕರಣ ನ್ಯಾಯಾಲಯದವರೆಗೂ ಹೋಗಿತ್ತು.

ಮಾದೇಗೌಡರಿಗೆ ಎಂ.ಎಲ್ಸಿ ಸ್ಥಾನ;

ಹಿಂದಿನ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ) ಅಧ್ಯಕ್ಷರಾಗಿ ಸೂರಿಲ್ಲದವರಿಗೆ ಸೂರು ನೀಡಿ, ಮನೆ ಮಾದೇಗೌಡ ಎಂದು ಖ್ಯಾತರಾಗಿರುವ ಡಿ. ಮಾದೇಗೌಡರಿಗೂ ನೇರ ಚುನಾವಣೆಗೂ ಆಗಿಬರಲಿಲ್ಲ. ಅವರು ನಗರಪಾಲಿಕೆ ಚುನಾವಣೆಯಿಂದ ಹಿಡಿದು ವಿಧಾನಸಭೆ, ಲೋಕಸಭೆ- ಹೀಗೆ ಎಲ್ಲಾ ಚುನಾವಣೆಗಳಲ್ಲೂ ಸೋತಿದ್ದರು.ಅವರನ್ನು ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡು ನಗರಾಧ್ಯಕ್ಷರಾಗಿ ನೇಮಿಸಿದರು. ಅಲ್ಲದೇ ಮುಂದೆ ವಿಧಾನ ಪರಿಷತ್‌ ಸದಸ್ಯರಾಗಿಯೂ ನೇಮಕ ಮಾಡಿದರು.

ಕೆಂಪೇಗೌಡ ಪ್ರಶಸ್ತಿ ಹಣ ರಾಮಕೃಷ್ಣ ಶಾಲೆಗೆ

ಎಸ್‌.ಎಂ. ಕೃಷ್ಣ ಅವರಿಗೆ ರಾಜ್ಯ ಸರ್ಕಾರ ಕೆಂಪೇಗೌಡ ಪ್ರಶಸ್ತಿಯ ಜೊತೆಗೆ ಐದು ಲಕ್ಷ ರು. ನಗದು ನೀಡಿತ್ತು. ಮೈಸೂರಿಗೆ ಬಂದಿದ್ದ ಎಸ್‌.ಎಂ.ಕೃಷ್ಣ ಅವರು ಶ್ರೀರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಆ ಹಣವನ್ನು ಶಾಲೆಗೆ ಹಸ್ತಾಂತರಿಸಿದ್ದರು. ಆ ಸಂದರ್ಭದಲ್ಲಿ ಎದುರಾದ ಜಿ.ಎಸ್. ಬದರೀನಾಥ್‌ ಅವರು ತಾವು ಜಿ.ಎಸ್‌. ಸುಬ್ರಹ್ಮಣ್ಯಂ ಅವರ ಪುತ್ರ ಎಂದು ಪರಿಚಯಿಸಿಕೊಳ್ಲುತ್ತಿದ್ದಂತೆಯೇ ಅತ್ಯಂತ ಸಂತಸದಿಂದ ಮಾತನಾಡಿಸಿ, ಹಳೆಯದನ್ನು ನೆನಪಿಸಿಕೊಂಡಿದ್ದರು.

ಮೈಸೂರಿಗೆ ಬಂದಾಗಲೆಲ್ಲಾ ಬಿಡುವಿದ್ದರೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು.

ಮಹದೇಶ್ವರನ ಪರಮ ಭಕ್ತರು, ಸುತ್ತೂರು ಮಠದ ಜೊತೆ ಒಡನಾಟ:

ಎಸ್‌.ಎಂ. ಕೃಷ್ಣ ಅವರು ಮಹದೇಶ್ವರ ಸ್ವಾಮಿಯ ಪರಮ ಭಕ್ತರು. ಹತ್ತಾರು ಬಾರಿ ಮಹದೇಶ್ವರ ಭೆಟ್ಟಕ್ಕೆ ಭೇಟಿ ನೀಡಿದ್ದರು.

ಸುತ್ತೂರು ಮಠದ ಜೊತೆ ಒಡನಾಟ ಇತ್ತು. ಹಿಂದಿನ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಹಾಗೂ ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳೊಂದಿಗೆ ಹಲವಾರು ಕಾರ್ಯಕ್ರಮಗಲ್ಲಿ ಭಾಗಿಯಾಗಿದ್ದರು.

ಅಂಬರೀಶ್, ಶ್ರೀಕಂಠದತ್ತರೊಂದಿಗೆ ಸ್ನೇಹ:

ಮೈಸೂರಿನ ರಾಜವಂಶಸ್ಥರೂ ಆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರೊಂದಿಗೆ ಎಸ್‌.ಎಂ. ಕೃಷ್ಣ ಅವರಿಗೆ ಉತ್ತಮ ಒಡನಾಟವಿತ್ತು. ಒಡೆಯರ್‌ ಅವರು 2010ರ ಡಿ.10 ರಂದು ನಿಧನರಾಗಿದ್ದರು. ಎಸ್‌.ಎಂ. ಕೃಷ್ಣ ಅವರು ಡಿ.10 ರಂದೇ ನಿಧನರಾಗಿದ್ದಾರೆ.

ಜನತಾದಳದಲ್ಲಿದ್ದು, ಮಂಡ್ಯ ಸಂಸದರಾಗಿದ್ದ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರು ಕಾಂಗ್ರೆಸ್‌ಗೆ ಬರಲು ಎಸ್‌.ಎಂ. ಕೃಷ್ಣ ಕಾರಣ. ನಂತರ ಎರಡು ಬಾರಿ ಸಂಸದರಾಗಿ ಕೇಂದ್ರದಲ್ಲಿ ಅಂಬರೀಶ್‌ ಸಚಿವರೂ ಆಗಿದ್ದರು.

ಸಿದ್ದರಾಮಯ್ಯ ಅವರಿಗೆ ಪ್ರೋತ್ಸಾಹ:

ಜನತಾ ಪರಿವಾರದಲ್ಲಿದ್ದ ಸಿದ್ದರಾಮಯ್ಯ ಅವರು 2006 ರಲ್ಲಿ ಕಾಂಗ್ರೆಸ್‌ ಸೇರಿದರು. ಅವರಿಗೂ ಕೂಡ ಎಸ್‌.ಎಂ. ಕೃಷ್ಣ ಸಾಕಷ್ಟು ಪ್ರೋತ್ಸಾಹ ನೀಡಿದರು.