ಸಾರಾಂಶ
ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಟ್ ಇಂಡಿಯಾ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಲು ನಡೆದ ಭಾರತೀಯ ಹೋರಾಟದ ಕಿಚ್ಚು ಅವಿಸ್ಮರಣೀಯ. ಅದನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದ್ದಾರೆ.ನಗರದ ಬಾವುಟಗುಡ್ಡೆಯ ಟಾಗೋರ್ ಪಾರ್ಕ್‌ನಲ್ಲಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಆಯೋಜಿಸಲಾದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ವಿರುದ್ಧದ ಹೋರಾಟ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರಿಂದ ಆರಂಭಗೊಂಡು ಮಹಾತ್ಮಾ ಗಾಂಧಿ ನೇತೃತ್ವದ ಅಹಿಂಸಾ ಚಳವಳಿವರೆಗೆ ನಡೆದಿದ್ದು, ಅವರೆಲ್ಲರ ಹೋರಾಟವನ್ನು ನೆನಪಿಸುವ ಕಾರ್ಯ ಇಂತಹ ಕಾರ್ಯಕ್ರಮಗಳ ಮೂಲಕ ಆಗುತ್ತಿದೆ ಎಂದರು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ಗಾಂಧಿ ಮತ್ತು ಗಾಂಧಿಯ ವಿಚಾರಧಾರೆಗಳನ್ನು ಕೇಳಲು ಇಂದು ಯುವಕರೇ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗಾಂಧೀಜಿಯವರ ಧ್ಯೇಯ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂಬುದು ಮಾತ್ರವೇ ಆಗಿರಲಿಲ್ಲ. ನಮ್ಮಲ್ಲಿ ಬೇರೂರಿದ್ದ ಅಸಮಾನತೆ, ಧರ್ಮ ಮತ್ತು ಜಾತಿಯ ಕುರಿತಾದ ಅತಿಯಾದ ಮೋಹ, ಮೌಢ್ಯಗಳಿಂದ ಕಲುಷಿತಗೊಂಡಿದ್ದ ಸಮಾಜವನ್ನು ಸುಧಾರಿಸುವ ಭವಿಷ್ಯದ ಚಿಂತನೆಯೂ ಇತ್ತು. ಧರ್ಮದ ಮೇಲಿನ ವ್ಯಾಮೋಹ ಹಿಂಸೆಗೆ ಪ್ರೇರಣೆ ನೀಡುತ್ತದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದ ಅವರು ಅಹಿಂಸೆಯ ಮೂಲಕವೇ ಹೋರಾಟವನ್ನು ತನ್ನದಾಗಿಸಿಕೊಂಡಿದ್ದರು ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಬಿ. ಪ್ರಭಾಕರ ಶ್ರೀಯಾನ್, ಇಬ್ರಾಹಿಂ ಕೋಡಿಜಾಲ್, ಸಹ ಕೋಶಾಧಿಕಾರಿ ಪ್ರೇಮ್‌ಚಂದ್ ಮೊದಲಾದವರು ಇದ್ದರು. ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಟ್ ಇಂಡಿಯಾ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.