ಸಾರಾಂಶ
ಜಿಲ್ಲಾ ಮಟ್ಟದ ಕೌಶಲ್ಯ ರೋಜ್ ಗಾರ್ ಉದ್ಯೋಗ ಮೇಳ । ಸಂಕಲ್ಪ ಯೋಜನೆಯ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನಮ್ಮ ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ಯುವ ಜನತೆಯ ಭವಿಷ್ಯ ರೂಪಿಸಲು ಈ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ), ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಜಂಟಿಯಾಗಿ ಭಾನುವಾರ ನಗರದ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಸಂಕಲ್ಪ ಯೋಜನೆಯ ಸರ್ವರಿಗೂ ಉದ್ಯೋಗ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕೌಶಲ್ಯ ರೋಜ್ ಗಾರ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಯುವತಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಯಾವುದೇ ಪದವಿ, ಡಿಪ್ಲೋಮಾ ಪೂರೈಸಿರುವಂತಹ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು.
ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ನಾವು ತಯಾರು ಮಾಡುತ್ತಿದ್ದೇವೆ. ಬಂದಿರುವಂತಹ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಈ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗಲೆಂದು ಹಾರೈಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ನಾವು ಮಾಡುವ ಕೆಲಸದ ಮೇಲೆ ನಮಗೆ ಮೊದಲು ಗೌರವವಿರಬೇಕು. ಸಣ್ಣ ಕೆಲಸವೇ ಇರಲಿ, ದೊಡ್ಡ ಕೆಲಸವೇ ಇರಲಿ ಅದನ್ನು ಶ್ರಧ್ದೆಯಿಂದ ಮಾಡಿದರೆ ಯಶಸ್ಸು ಕಾಣಲು ಸಾಧ್ಯ. ಜಿಲ್ಲೆಯನ್ನು ಸಂಪೂರ್ಣವಾಗಿ ನಿರುದ್ಯೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಎಲ್ಲರಿಗೂ ಉದ್ಯೋಗ ಅವಕಾಶ ಸಿಗಲಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ, ಇಂತಹ ಉದ್ಯೋಗ ಮೇಳದಿಂದ ಅವರಿಗೆ ಉದ್ಯೋಗದ ಅವಕಾಶ ದೊರಕುವಂತಾಗುತ್ತದೆ ಎಂದರು.ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ ಬಿ.ಹೆಚ್. ಹರೀಶ್ ಮಾತನಾಡಿ, ತಮ್ಮ ಪದವಿಗೆ ತಕ್ಕಂತೆ ಉದ್ಯೋಗ ನಿಮಗೆ ಈ ಕಾರ್ಯಕ್ರಮದಿಂದ ಸಿಗಲಿ ಹಾಗೂ ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಗುರಿಯನ್ನು ಸಾಧಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಎಲ್ಲರೂ ತಮ್ಮದೇ ಆದ ಕೌಶಲ್ಯ ಹೊಂದಿರುತ್ತಾರೆ. ಆ ಕೌಶಲ್ಯಕ್ಕೆ ತಕ್ಕ ವೇದಿಕೆ ಸಿಗದೇ ನಿರುದ್ಯೋಗಿಗಳಾಗಿರುತ್ತಾರೆ. ಅಂತವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ, ಇದರ ಪ್ರಯೋಜನ ಪಡೆದುಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳಿ ಎಂದು ತಿಳಿಸಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಎಚ್.ಸಿ. ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಡಿ.ಎಸ್.ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪಭಾರತಿ ಹಾಗೂ ವಿವಿಧ ಇಲಾಖೆ ಅಧಿಕಾರಿ ಹಾಜರಿದ್ದರು.